ಮೂಡಿಗೆರೆ ಶಾಸಕಿ ನಯನಾ ಮೊಟಮ್ಮ ಅವರು ತಮ್ಮ ವೈಯಕ್ತಿಕ ಫೋಟೋಗಳಿಗೆ ಬಂದ ಅಶ್ಲೀಲ ಕಾಮೆಂಟ್‌ಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ತಮ್ಮ ಉಡುಪಿನ ಆಧಾರದ ಮೇಲೆ ನಿಂದಿಸುವುದನ್ನು ಖಂಡಿಸಿ, ಈ ಮಹಿಳಾ ವಿರೋಧಿ ಮನಸ್ಥಿತಿಯನ್ನು ಪ್ರಶ್ನಿಸಿದ್ದಾರೆ ಮತ್ತು ಅನಾಮಧೇಯ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು (ಜ.11): ಇತ್ತೀಚೆಗೆ ನಟಿ ರಮ್ಯಾ, ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೆ ಅಶ್ಲೀಲ ಮೆಸೇಜ್ ಮಾಡಿದ್ದು ಭಾರೀ ಸಂಚಲನ ಸೃಷ್ಟಿಸಿತ್ತು. ಕಾಮೆಂಟ್ಸ್ ಓದಿ ಕಣ್ಣೀರು ಸುರಿಸಲಿಲ್ಲ. ಪುಂಡರ ವಿರುದ್ಧ ಅಕ್ಷರಶಃ ಸಿಡಿದೆದ್ದಿದ್ದರು. ಅಶ್ಲೀಲ ಕಾಮೆಂಟ್ ಮಾಡಿದವರ ವಿರುದ್ಧ ಕಾನೂನು ಸಮರ ಸಾರಿ ದೂರು ದಾಖಲಿಸಿ ಪುಂಡರನ್ನ ಹುಡುಕಿ ಹುಡುಕಿ ಜೈಲಿಗಟ್ಟಿದ್ದರು. ಆ ಘಟನೆ ಬಳಿಕ ಕಿಡಿಗೇಡಿಗಳು ಬುದ್ಧಿ ಕಲಿತರು ಎನ್ನುವ ಹೊತ್ತಿಗೆ ಇದೀಗ ಕಾಂಗ್ರೆಸ್ ಶಾಸಕಿ ನಯನಾ ಮೊಟಮ್ಮ ಅವರಿಗೂ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್‌ಗಳ ಕಾಟ ಶುರುವಾಗಿದ್ದು, ಇದರ ವಿರುದ್ಧ ಶಾಸಕಿ ಧೀಟತನದಿಂದ ಧ್ವನಿ ಎತ್ತಿದ್ದಾರೆ.
ಬಟ್ಟೆಯ ವಿಚಾರಕ್ಕೆ ಶಾಸಕಿಗೆ ಅಶ್ಲೀಲ ನಿಂದನೆ
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೊಟಮ್ಮ ಅವರು ತಮ್ಮ ವೈಯಕ್ತಿಕ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದ ಫೋಟೋಗಳಿಗೆ ಕೆಲವು ಕಿಡಿಗೇಡಿಗಳು ಅತ್ಯಂತ ಕೆಳಮಟ್ಟದ ಅಶ್ಲೀಲ ಕಾಮೆಂಟ್‌ಗಳನ್ನು ಮಾಡಿದ್ದಾರೆ. ತಮ್ಮ ಖಾಸಗಿ ಪ್ರವಾಸ ಮತ್ತು ವೈಯಕ್ತಿಕ ಜೀವನದ ಕ್ಷಣಗಳನ್ನು ಹಂಚಿಕೊಳ್ಳುವ ಖಾತೆಯಲ್ಲಿ ಶಾಸಕಿ ಧರಿಸಿದ್ದ ಬಟ್ಟೆಯ ಬಗ್ಗೆ ಕಮೆಂಟ್ ಮಾಡಿರುವ ಕಿಡಿಗೇಡಿಗಳು, ಅವರನ್ನು 'ವೇಶ್ಯೆ' ಎನ್ನುವ ಮಟ್ಟಕ್ಕೆ ಹೀಯಾಳಿಸಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮಹಿಳಾ ವಿರೋಧಿ ಮನಸ್ಥಿತಿಗೆ ನಯನಾ ಬೇಸರ
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೇ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ನಯನಾ ಮೊಟಮ್ಮ, ಸಮಾಜದ ಮಹಿಳಾ ವಿರೋಧಿ ಮನೋಭಾವದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. 'ನಾವು ಸ್ಲೀವ್‌ಲೆಸ್ ಬಟ್ಟೆ, ಜೀನ್ಸ್ ಅಥವಾ ಪ್ಯಾಂಟ್ ಧರಿಸಿದರೆ ನಮ್ಮನ್ನು 'ಕೆಲಸ ಮಾಡದ ರಾಜಕಾರಣಿ' ಎಂದು ಕರೆಯುತ್ತಾರೆ. ನಮ್ಮ ಉಡುಪಿನ ಆಧಾರದ ಮೇಲೆ ನಮ್ಮ ಕೆಲಸವನ್ನು ಅಳೆಯುತ್ತಾರೆ. ಆದರೆ ಇದೇ ಪ್ರಶ್ನೆಯನ್ನು ಪುರುಷ ರಾಜಕಾರಣಿಗಳಿಗೆ ಯಾರೂ ಕೇಳುವುದಿಲ್ಲವೇಕೆ?' ಎಂದು ಅವರು ನೇರವಾಗಿ ಪ್ರಶ್ನಿಸಿದ್ದಾರೆ.
ಮುಖವಿಲ್ಲದ ಕಿಡಿಗೇಡಿಗಳ ವಿರುದ್ಧ ಸಮರ
ತಮ್ಮನ್ನು ನಿಂದಿಸುವವರ ಪ್ರೊಫೈಲ್‌ಗಳ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಶಾಸಕಿ, 'ಕಾಮೆಂಟ್ ಮಾಡುವ ಬಹುತೇಕರಿಗೆ ಪ್ರೊಫೈಲ್ ಚಿತ್ರವೇ ಇಲ್ಲ (DP Less Profile). ಇನ್ನೂ ಕೆಲವರ ಖಾತೆಯಲ್ಲಿ ಒಂದೂ ಪೋಸ್ಟ್ ಇಲ್ಲ. ಇವರೆಲ್ಲರೂ ಅನಾಮಧೇಯರಾಗಿ ಬಂದು ಮಹಿಳೆಯರ ಮೇಲೆ ದಾಳಿ ಮಾಡುತ್ತಾರೆ. ಬಹುಶಃ ಒಂದು ದಿನ ನಾನು ಇವರನ್ನೆಲ್ಲ ನೇರವಾಗಿ ಎದುರಿಸುತ್ತೇನೆ' ಎಂದು ಎಚ್ಚರಿಕೆ ನೀಡಿದ್ದಾರೆ. ಸದ್ಯಕ್ಕೆ ಈ ಮಹಿಳಾ ವಿರೋಧಿ ಮನೋಭಾವವನ್ನಷ್ಟೇ ಪ್ರಶ್ನಿಸುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಮಹಿಳಾ ಅಧಿಕಾರಿಗಳ ಬೆಂಬಲ
ಇನ್ನೊಂದು ಪೋಸ್ಟ್‌ನಲ್ಲಿ ಇತ್ತೀಚಿನ ಒಂದು ಘಟನೆಯನ್ನು ನೆನಪಿಸಿಕೊಂಡಿರುವ ಅವರು, 'ವಿಮಾನ ನಿಲ್ದಾಣದಲ್ಲಿ ಮಹಿಳಾ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳು ನನ್ನನ್ನು ಭೇಟಿ ಮಾಡಿದರು. ಅವರು ನನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಅನುಸರಿಸುತ್ತಿರುವುದಾಗಿ ಮತ್ತು ಮೌನವಾಗಿ ನನಗೆ ಬೆಂಬಲ ನೀಡುತ್ತಿರುವುದಾಗಿ ತಿಳಿಸಿದರು. ಇದು ನನಗೆ ಬಹಳ ಆತ್ಮವಿಶ್ವಾಸ ನೀಡಿದೆ. ತಮ್ಮ ಜೀವನವನ್ನು ತಮ್ಮದೇ ಷರತ್ತಿನ ಮೇಲೆ ಬದುಕಲು ಬಯಸುವ ಸಾವಿರಾರು ಮಹಿಳೆಯರಿಗಾಗಿ ನಾನು ಈ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
ನೆಗೆಟಿವ್ ಕಾಮೆಂಟ್ಸ್ ನನ್ನ ಕುಗ್ಗಿಸಲಾರವು
ನೆಗೆಟಿವ್ ಕಾಮೆಂಟ್‌ಗಳು ಕೆಲ ಕ್ಷಣಗಳ ಕಾಲ ಮನಸ್ಸನ್ನು ಕುಗ್ಗಿಸಬಹುದು ಎಂದು ಒಪ್ಪಿಕೊಂಡಿರುವ ನಯನಾ ಮೊಟಮ್ಮ, ಇತರ ಮಹಿಳೆಯರಿಗಾಗಿ ತಾನು ಗಟ್ಟಿಯಾಗಿ ನಿಲ್ಲಬೇಕಾದ ಜವಾಬ್ದಾರಿಯ ಬಗ್ಗೆ ತಿಳಿಸಿದ್ದಾರೆ. 'ನನ್ನ ವೈಯಕ್ತಿಕ ಫೋಟೋಗಳ ಕುರಿತು ನೆಗೆಟಿವ್ ಪ್ರತಿಕ್ರಿಯೆಗಳು ಬರುತ್ತವೆ. ಆದರೂ, ಇತರರಿಗಾಗಿ ನಾನು ಮುಂದುವರಿದು ನಿಲ್ಲಬೇಕೆಂಬ ಜವಾಬ್ದಾರಿಯ ಅರಿವು ನನಗಿದೆ ಎನ್ನುವ ಮೂಲಕ ತಮ್ಮ ಕೆಲಸ ಮತ್ತು ವೈಯಕ್ತಿಕ ಜೀವನದ ನಡುವಿನ ಸಮತೋಲನವನ್ನು ವಿವರಿಸಿದ್ದಾರೆ.


