ದೊಡ್ಡಬಳ್ಳಾಪುರ(ಮೇ.08): ಕೊರೋನಾದಿಂದಾಗಿ ವಿದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ಕನ್ನಡಿಗರನ್ನು ಹೊತ್ತುಕೊಂಡು ಬ್ರಿಟನ್‌ನಿಂದ ಬರಬೇಕಿದ್ದ ಮೊದಲ ವಿಮಾನದ ಪ್ರಯಾಣ ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದೆ.

ಪೂರ್ವ ನಿಗದಿಯಂತೆ ಗುರುವಾರ ತಡರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೊದಲ ವಿಮಾನ ಬಂದಿಳಿಯಬೇಕಿತ್ತು. ಆದರೆ, ಬದಲಾದ ಸನ್ನಿವೇಶದಲ್ಲಿ ಮೇ 11ರಂದು ಈ ವಿಮಾನ ಆಗಮಿಸಲಿದೆ.

ಭಾರತಕ್ಕೆ ಜೂನ್-ಜುಲೈ ಇನ್ನೂ ಘೋರ, ಎಷ್ಟಕ್ಕೆ ತಲುಪಬಹುದು ಸೋಂಕಿತರ ಸಂಖ್ಯೆ?

ವಿದೇಶದಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ‘ವಂದೇ ಭಾರತ್‌ ಮಿಷನ್‌’ ಆರಂಭಗೊಂಡಿದ್ದು, ಮೊದಲ ವಿಮಾನ ದುಬೈನಿಂದ ಕೇರಳಕ್ಕೆ ಸಂಚರಿಸಿದೆ. ಇದೇ ವೇಳೆ, ಲಂಡನ್‌ನಿಂದ ಬೆಂಗಳೂರಿಗೆ ಶುಕ್ರವಾರ ಬರಬೇಕಿದ್ದ ಮೊದಲ ವಿಮಾನದ ಸಂಚಾರ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ದುಬೈನಿಂದ ಮಂಗಳೂರಿಗೆ ಮಂಗಳವಾರ ಮೊದಲ ವಿಮಾನ ಬರಲಿದೆ.

ಬೆಂಗಳೂರಲ್ಲಿ ಬಂದಿಳಿಯಲಿರುವ ಮೊದಲ ವಿಮಾನದಲ್ಲಿ 250 ಮಂದಿ ಅನಿವಾಸಿ ಭಾರತೀಯರಿರಲಿದ್ದಾರೆ. ಇವರಿಗೆ ಕ್ವಾರಂಟೈನ್‌ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಮೂರು ದರ್ಜೆಗಳಲ್ಲಿ ಹೋಟೆಲ್‌ಗಳನ್ನು ಗುರುತಿಸಲಾಗಿದೆ.

ಬೆಳಗ್ಗೆ ವಿಶಾಖಪಟ್ಟಣ, ಸಂಜೆ ತಮಿಳುನಾಡು.. ಸ್ಫೋಟಗೊಂಡ ಬಾಯ್ಲರ್

ಪ್ರಯಾಣಿಕರು ತಮ್ಮ ಸ್ವಂತ ಖರ್ಚಿನಲ್ಲಿ ಸರ್ಕಾರ ನಿಗದಿಪಡಿಸಿರುವ ದರ ಭರಿಸಿ, ತಾವಿಚ್ಛೆಪಡುವ ಹೋಟೆಲ್‌ಗಳಲ್ಲಿ 14 ದಿನ ಕ್ವಾರಂಟೈನ್‌ಗೆ ಒಳಗಾಗಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ತಿಳಿಸಿದರು.

ಮೊದಲ ಹಂತದಲ್ಲಿ ಪ್ರಯಾಣಿಕರನ್ನು ಬೆಂಗಳೂರು ನಗರದಲ್ಲಿ ಗುರುತಿಸಿರುವ ಹೋಟೆಲ್‌ಗಳಲ್ಲಿ ಕ್ವಾರಂಟೈನ್‌ ಮಾಡಲಾಗುವುದು. ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊರವಲಯದಲ್ಲಿ ಗುರುತಿಸಿರುವ ಹೋಟೆಲ…ಗಳಲ್ಲಿ ಕ್ವಾರಂಟೈನ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಯಾರಿಗಾದರೂ ಸೋಂಕಿನ ಲಕ್ಷಣಗಳಿದ್ದರೆ ಅವರನ್ನು ರಾಜೀವ್‌ ಗಾಂಧಿ ಹೃದ್ರೋಗ ಆಸ್ಪತ್ರೆಗೆ ಕಳುಹಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.