ರಾಜ್ಯ ಸರ್ಕಾರವು ನಕಲಿ ದಾಖಲೆಗಳನ್ನು ನೀಡಿ ಪಿಂಚಣಿ ಪಡೆಯುತ್ತಿದ್ದ 91,152 ಅನರ್ಹರ ಖಾತೆಗಳನ್ನು ರದ್ದುಗೊಳಿಸಿದೆ. ಅಲ್ಲದೆ, ಸೂಕ್ತ ದಾಖಲೆಗಳಿಲ್ಲದ ಕಾರಣ 16.42 ಲಕ್ಷ ಫಲಾನುಭವಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ದಾಖಲೆಗಳನ್ನು ಸರಿಪಡಿಸಿಕೊಳ್ಳಲು 30 ದಿನಗಳ ಕಾಲಾವಕಾಶ ನೀಡಿದೆ.

ಬೆಂಗಳೂರು: ರಾಜ್ಯ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳಡಿ ಕಾನೂನುಬಾಹಿರವಾಗಿ ಮತ್ತು ನಕಲಿ ದಾಖಲೆಗಳನ್ನು ನೀಡಿ ಪಿಂಚಣಿ ಪಡೆಯುತ್ತಿದ್ದವರ ವಿರುದ್ಧ ಕಂದಾಯ ಇಲಾಖೆ ಭಾರಿ ಕಾರ್ಯಾಚರಣೆ ನಡೆಸಿದೆ. ಯೋಜನೆಯಲ್ಲಿ ಪಾರದರ್ಶಕತೆ ತರಲು ಹಾಗೂ ಅರ್ಹ ಬಡ ಜನರಿಗೆ ಮಾತ್ರ ಸೌಲಭ್ಯ ತಲುಪಿಸುವ ಉದ್ದೇಶದಿಂದ, ಒಟ್ಟು 91,152 ಅನರ್ಹ ಫಲಾನುಭವಿಗಳ ಪಿಂಚಣಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಲು ಸರ್ಕಾರ ತೀರ್ಮಾನಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರೊಂದಿಗೆ, ಸೂಕ್ತ ದಾಖಲೆಗಳನ್ನು ಒದಗಿಸದ ಒಟ್ಟು 16,42,303 ಫಲಾನುಭವಿಗಳ ಪಿಂಚಣಿಯನ್ನು ಸದ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ದಾಖಲೆ ಸರಿಪಡಿಸಿಕೊಳ್ಳಲು 30 ದಿನಗಳ ಕಾಲಾವಕಾಶ ನೀಡಲಾಗಿದೆ.

ಪ್ರಮುಖ ಅಂಕಿ-ಅಂಶಗಳು

ರಾಜ್ಯದಲ್ಲಿ ಕಂದಾಯ ಇಲಾಖೆ ನಡೆಸಿರುವ ಪ್ರಾಥಮಿಕ ತಪಾಸಣೆಯ ಸಂಪೂರ್ಣ ವಿವರಗಳು ಈ ಕೆಳಗಿನಂತಿವೆ

  • ರಾಜ್ಯದ ಒಟ್ಟು ಪಿಂಚಣಿದಾರರು 83,11,493
  • ಪ್ರಾಥಮಿಕ ತಪಾಸಣೆಯಲ್ಲಿ ಪತ್ತೆಯಾದ ಸಂಶಯಾಸ್ಪದ ಫಲಾನುಭವಿಗಳು 23,13,664
  • ವಯಸ್ಸಿನ ನಕಲಿ ದಾಖಲೆ ನೀಡಿ ಸಿಕ್ಕಿಬಿದ್ದವರು (ಖಾತೆ ರದ್ದು) 91,152
  • ದಾಖಲೆ ಸಲ್ಲಿಸಲು ವಿಫಲರಾದವರು (ತಾತ್ಕಾಲಿಕ ಸ್ಥಗಿತ) 16,42,303
  • ಸ್ಥಳದಲ್ಲೇ ಪರಿಶೀಲನೆ ನಡೆಸಿ ಇಲಾಖೆ ಸಮ್ಮತಿಸಿದ ಅರ್ಹರು 3,35,610
  • ಮೇ ತಿಂಗಳವರೆಗೆ ಯಶಸ್ವಿಯಾಗಿ ಪಿಂಚಣಿ ಪಡೆದ ಒಟ್ಟು ಅರ್ಹರು 63,04,554

'ಸಂಯೋಜನೆ' ಮೊಬೈಲ್ ಆ್ಯಪ್ ಮೂಲಕ ತಪಾಸಣೆ

ರಾಜ್ಯಾದ್ಯಂತ ಹಿರಿಯ ನಾಗರಿಕರು, ವಿಧವೆಯರು, ಅಂಗವಿಕಲರು ಹಾಗೂ ಆ್ಯಸಿಡ್ ದಾಳಿಗೆ ಒಳಗಾದವರು ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ವಿವಿಧ ವರ್ಗದ ಜನರಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಿಕ ಪಿಂಚಣಿ ನೀಡಲಾಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಒಟ್ಟು 83,11,493 ಫಲಾನುಭವಿಗಳಿದ್ದು, ಇವರ ಪೈಕಿ 23,13,664 ಖಾತೆಗಳು ಸಂಶಯಾಸ್ಪದವಾಗಿ ಕಂಡುಬಂದಿದ್ದವು.

ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯು ‘ಸಂಯೋಜನೆ’ ಎಂಬ ವಿಶೇಷ ಮೊಬೈಲ್ ತಂತ್ರಾಂಶದ (App) ಮೂಲಕ ಆಯಾ ಗ್ರಾಮ ಆಡಳಿತ ಅಧಿಕಾರಿಗಳ (VA) ನೆರವಿನೊಂದಿಗೆ ಜಂಟಿ ತಪಾಸಣೆ ನಡೆಸಿತ್ತು. ಈ ವೇಳೆ ಅಧಿಕಾರಿಗಳು ಸ್ಥಳದಲ್ಲೇ ಪರಿಶೀಲನೆ ನಡೆಸಿ 3,35,610 ಜನರನ್ನು ಅರ್ಹರೆಂದು ಗುರುತಿಸಿದ್ದು, ಇವರೂ ಸೇರಿದಂತೆ ಒಟ್ಟು 63,04,554 ಅರ್ಹ ಫಲಾನುಭವಿಗಳಿಗೆ ಮೇ ತಿಂಗಳವರೆಗಿನ ಪಿಂಚಣಿಯನ್ನು ಯಶಸ್ವಿಯಾಗಿ ಪಾವತಿಸಲಾಗಿದೆ.

ನಕಲಿ ದಾಖಲೆ ನೀಡಿದ 91 ಸಾವಿರ ಜನರ ಪಿಂಚಣಿ ರದ್ದು

ಮಂಜೂರಾತಿ ಸಮಯದಲ್ಲಿ ವಯಸ್ಸಿನ ದೃಢೀಕರಣದ ಬಗ್ಗೆ ತಪ್ಪು ಮಾಹಿತಿ ನೀಡಿದ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಾನೂನುಬಾಹಿರವಾಗಿ ಮಾಸಿಕ ಪಿಂಚಣಿ ಜೇಬಿಗೆ ಇಳಿಸುತ್ತಿದ್ದ 91,152 ಅನರ್ಹರನ್ನು ಇಲಾಖೆ ಸಂಪೂರ್ಣವಾಗಿ ಪತ್ತೆಹಚ್ಚಿದೆ. ಇಂತಹ ಕೃತ್ಯ ಎಸಗಿದವರ ಪಿಂಚಣಿಯನ್ನು ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಕಡ್ಡಾಯವಾಗಿ ರದ್ದುಗೊಳಿಸಿದೆ.

16.42 ಲಕ್ಷ ಖಾತೆಗಳು ಸದ್ಯಕ್ಕೆ ಸ್ಥಗಿತ: ದಾಖಲೆ ನೀಡಲು 30 ದಿನಗಳ ಗಡುವು

ಗ್ರಾಮ ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಯಾವುದೇ ಅಧಿಕೃತ ದಾಖಲೆಗಳನ್ನು ಹಾಜರುಪಡಿಸಲು ವಿಫಲರಾದ, ಅರ್ಜಿ ಸಲ್ಲಿಸುವಾಗ ನೀಡಿದ್ದ ವಿಳಾಸದಲ್ಲಿ ಸದ್ಯ ವಾಸವಿಲ್ಲದ ಹಾಗೂ ಪ್ರಸ್ತುತ ಆದಾಯ ಪ್ರಮಾಣಪತ್ರ ಸಲ್ಲಿಸದ ಒಟ್ಟು 16,42,303 ಫಲಾನುಭವಿಗಳ ಪಿಂಚಣಿಯನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.

ಈ ರೀತಿ ಪಿಂಚಣಿ ಸ್ಥಗಿತಗೊಂಡಿರುವ ಫಲಾನುಭವಿಗಳಿಗೆ ಕಂದಾಯ ಇಲಾಖೆಯು ತಹಶೀಲ್ದಾರರ ಮೂಲಕ ಸೂಕ್ತ ತಿಳಿವಳಿಕೆ ಪತ್ರ ಹಾಗೂ ನೋಟಿಸ್ ನೀಡಲು ಆದೇಶಿಸಿದೆ. ತಮ್ಮ ಅರ್ಹತಾ ದಾಖಲೆಗಳನ್ನು ಸಲ್ಲಿಸಲು ಇವರಿಗೆ 30 ದಿನಗಳ ಕಾಲಾವಕಾಶ ಕಲ್ಪಿಸಲಾಗಿದೆ.

ನಿಗದಿತ ಅವಧಿಯೊಳಗೆ ಫಲಾನುಭವಿಗಳು ಸೂಕ್ತ ದಾಖಲೆಗಳನ್ನು ಸಲ್ಲಿಸಿದರೆ, ಅವುಗಳನ್ನು ಮರುಪರಿಶೀಲಿಸಿ ಅವರು ನಿಜವಾಗಿಯೂ ಅರ್ಹರಾಗಿದ್ದಲ್ಲಿ ತಕ್ಷಣವೇ ಪಿಂಚಣಿ ಸೌಲಭ್ಯವನ್ನು ಮುಂದುವರಿಸಲು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಾಗೂ ತಹಶೀಲ್ದಾರರಿಗೆ ಕಂದಾಯ ಇಲಾಖೆಯ ಜಂಟಿ ನಿರ್ದೇಶಕರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸರ್ಕಾರದ ಈ ಬಿಗಿ ಕ್ರಮವು ಯೋಜನೆಯ ದುರುಪಯೋಗವನ್ನು ಸಂಪೂರ್ಣವಾಗಿ ತಡೆದು, ನಿಜವಾದ ಬಡವರಿಗೆ ಸೌಲಭ್ಯ ಸಿಗುವಂತೆ ಮಾಡಲಿದೆ.