ಬಡವರ ಮತಗಳನ್ನು ತೆಗೆದುಹಾಕಲು 'ಎಸ್‌ಐಆರ್‌' ಮೂಲಕ ಸಂಚು ರೂಪಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ. ಮತದಾನದ ಹಕ್ಕು ಕಳೆದುಕೊಂಡರೆ ಗೃಹಲಕ್ಷ್ಮಿ, ಪಿಂಚಣಿ ಸೌಲಭ್ಯಗಳು ಸಿಗುವುದಿಲ್ಲವಾದ್ದರಿಂದ, ಪ್ರತಿಯೊಬ್ಬರೂ ಈ ಬಗ್ಗೆ ಜಾಗೃತರಾಗಿರಬೇಕು ಎಂದು ಅವರು ಕರೆ ನೀಡಿದ್ದಾರೆ.

ಬೆಂಗಳೂರು: ಬಡವರ ಮತಗಳನ್ನು ತೆಗೆಯಲು ಎಸ್‌ಐಆರ್‌ ಮೂಲಕ ಸಂಚು ಮಾಡಲಾಗಿದೆ. ಅದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ನಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್‌ಐಆರ್‌ ಕುರಿತು ನಮ್ಮ ಶಾಸಕರು, ಬಿಎಲ್‌ಎಗಳಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಅದಕ್ಕಾಗಿಯೇ ಸಭೆ ಕರೆಯಲಾಗುತ್ತಿದೆ. ಎಸ್‌ಐಆರ್‌ಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ಅದರ ಬಗ್ಗೆ ನಾವು ಜಾಗೃತಿ ಮೂಡಿಸಬೇಕಿದೆ. ಅಲ್ಲದೆ, ನಮ್ಮ ಕಾರ್ಯಕರ್ತರಿಗೆ ಎಸ್‌ಐಆರ್‌ ಬಗ್ಗೆ ಎಚ್ಚರಿಕೆಯಿಂದ ಇರುವಂತೆಯೂ ತಿಳಿಸಿದ್ದೇವೆ ಎಂದರು.\

ಎಚ್ಚೆತ್ತುಕೊಳ್ಳುವಂತೆ ಡಿಸಿಎಂ ಸೂಚನೆ

ಎಸ್‌ಐಆರ್‌ ಕುರಿತು ಮತ ಕಡಿತ ತಡೆಗೆ ಜನರೂ ಜಾಗೃತರಾಗಬೇಕು. ಪ್ರತಿಯೊಬ್ಬರೂ ಅರ್ಜಿ ಸಲ್ಲಿಸಬೇಕು. ಇಲ್ಲದಿದ್ದರೆ ನಾಗರಿಕರು ತಮ್ಮ ಮತ ಕಳೆದುಕೊಳ್ಳಲಿದ್ದಾರೆ. ಬೇರೆ ರಾಜ್ಯಗಳಲ್ಲಿ ಇದೇ ರೀತಿ ಆಗಿರುವುದನ್ನು ನಾವು ನೋಡಿದ್ದೇವೆ. ಮತದಾನದ ಹಕ್ಕು ಹೋದರೆ ಪಿಂಚಣಿ, ಗೃಹ ಲಕ್ಷ್ಮೀ ಯೋಜನೆ ಸೇರಿ ಯಾವುದೇ ಯೋಜನೆಗಳ ಲಾಭ ಪಡೆಯಲಾಗದೆ ಜನರು ವಂಚಿತರಾಗುತ್ತಾರೆ. ಅದಕ್ಕಾಗಿ ಎಲ್ಲರೂ ಎಸ್‌ಐಆರ್‌ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದು ತಿಳಿಸಿದರು.

ಪ್ರಕರಣ ಹಿಂಪಡೆದಿದ್ದರಲ್ಲಿ ತಪ್ಪಿಲ್ಲ

ಮುಸ್ಲಿಂ ಸಮುದಾಯದವರ ವಿರುದ್ಧದ ಪ್ರಕರಣ ಹಿಂಪಡೆಯುವ ಕುರಿತು ಸಚಿವ ಸಂಪುಟದ ತೀರ್ಮಾನದ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್‌, ರಾಜಕೀಯ ಪ್ರೇರಿತ ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಜತೆಗೆ ರೈತರ ಮೇಲಿನ, ಕನ್ನಡ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ವಾಪಸು ಪಡೆಯಲಾಗಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದರು.