ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಎರಡನೇ ಪತ್ನಿ ಕೂಡ ಪರಿಹಾರಕ್ಕೆ ಅರ್ಹಳು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮೃತನ ಆದಾಯವನ್ನು ಅವಲಂಬಿಸಿದ ಎಲ್ಲರೂ ಪರಿಹಾರ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ ಎಂದು ಹೇಳಿದೆ. ಏನಿದು ಪ್ರಕರಣ? ತಿಳಿಯಿರಿ.
ಬೆಂಗಳೂರು (ಜೂ.26): ರಸ್ತೆ ಅಪಘಾತ ಪ್ರಕರಣಗಳಲ್ಲಿ ಪರಿಹಾರ ಘೋಷಿಸುವಾಗ ಮೃತನಿಗೆ ಎರಡನೇ ಪತ್ನಿ ಇದ್ದರೆ ಆಕೆಗೂ ಸಮಾನವಾಗಿ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ರಸ್ತೆ ಅಪಘಾತ ಪ್ರಕರಣ ಸಂಬಂಧ ದಾವಣಗೆರೆಯ ಮೋಟಾರು ವಾಹನ ಅಪಘಾತಗಳ ಪರಿಹಾರ ನ್ಯಾಯಾಧಿಕರಣ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಅಲ್ಲದೆ, ವಾಹನ ಅಪಘಾತಗಳಲ್ಲಿ ಸಾವಿಗೀಡಾದವರ ಅರ್ಹ ವಾರಸುದಾರರನ್ನು ನಿರ್ಧರಿಸುವುದಕ್ಕೆ ಯಾವುದೇ ಕಾನೂನು ನಿಯಮಗಳಿಲ್ಲ. ಪರಿಹಾರ ಘೋಷಿಸುವಾಗ ಮೃತನ ಅವಲಂಬಿತರನ್ನು ಪರಿಗಣಿಸಬೇಕಾಗುತ್ತದೆ. ಹಾಗಾಗಿ ಮೃತನಿಗೆ 2ನೇ ಪತ್ನಿ ಮತ್ತು ಮಕ್ಕಳು ಇದ್ದಲ್ಲಿ, ಅವರಿಗೂ ಪರಿಹಾರ ನೀಡಬೇಕಾಗುತ್ತದೆ ಎಂದು ಕೋರ್ಟ್ ತಿಳಿಸಿದೆ.
ಆದ್ದರಿಂದ ಈ ಪ್ರಕರಣದಲ್ಲಿ ನ್ಯಾಯಾಧಿಕರಣ ನಿಗದಿಪಡಿಸಿದ 15 ಲಕ್ಷಕ್ಕೆ ಹೆಚ್ಚುವರಿಯಾಗಿ 15 ಲಕ್ಷ ರು. ಸೇರಿಸಿ ಒಟ್ಟು 30 ಲಕ್ಷ ರು.ಗಳನ್ನು ಮೃತನ ಅವಲಂಬಿತರಿಗೆ ಪಾವತಿಸಬೇಕು ಎಂದು ವಿಮಾ ಕಂಪನಿಗೆ ನಿರ್ದೇಶನ ನೀಡಿದೆ.
ಪ್ರಕರಣದ ವಿವರ:
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ನಂದಿಗಾವಿ ಗ್ರಾಮದ ಪಾಂಡುರಂಗಪ್ಪ ಎಂಬುವವರು 2016ರ ಮಾ.9ರಂದು ರಾತ್ರಿ ಮೋಟಾರ್ ಸೈಕಲ್ ನಲ್ಲಿ ಹಿಂಬದಿ ಸವಾರನಾಗಿ ಹೋಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಮಾರುತಿ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಮೃತರ ಮೊದಲ ಹೆಂಡತಿ ಆಶಾ ಮತ್ತು ತಾಯಿ ಮಹಾಂತಮ್ಮ ಪರಿಹಾರ ಕೋರಿ ಮೋಟಾರು ವಾಹನಗಳ ಪರಿಹಾರ ನ್ಯಾಯಾಧಿಕರಣದಲ್ಲಿ ಪ್ರಕರಣ ದಾಖಲಿಸಿದ್ದರು. ಈ ದಾವೆಯಲ್ಲಿ ಮೃತನಿಗೆ ಗೀತಾ ಎಂಬ ಎರಡನೇ ಪತ್ನಿ ಹಾಗೂ ಖುಷಿ ಎಂಬ ಅಪ್ರಾಪ್ತ ಮಗಳಿರುವುದಾಗಿಯೂ ತಿಳಿಸಿ, ಅವರನ್ನೂ ಪ್ರತಿವಾದಿಗಳನ್ನಾಗಿ ಸೇರಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ದಾವಣಗೆರೆಯ ಸಿವಿಲ್ ನ್ಯಾಯಾಲಯ (ನ್ಯಾಯಾಧಿಕರಣ) ಮೃತನ ಎಂಟು ಅವಲಂಬಿತರಿಗೆ ಒಟ್ಡು 15.10 ಲಕ್ಷ ರು. ಪರಿಹಾರ ನೀಡಿತ್ತು. ಆದರೆ, ಪರಿಹಾರ ಮೊತ್ತ ಕಡಿಮೆಯಾಗಿದೆ ಎಂದು ಆಕ್ಷೇಪಿಸಿ ಪಾಂಡುರಂಗಪ್ಪನ ಮೊದಲ ಪತ್ನಿ ಮತ್ತು ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್, ಮೋಟಾರು ವಾಹನ ಕಾಯ್ದೆಯು ಸಂತ್ರಸ್ತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಸಾಮಾಜಿಕ ಕಾನೂನಾಗಿದೆ. ಇಲ್ಲಿ ಮೃತರ ಕಾನೂನುಬದ್ಧ ವಾರಸುದಾರರು ಎಂದರೆ ಕೇವಲ ಮೊದಲ ಪತ್ನಿ, ಪೋಷಕರು ಅಥವಾ ಮಕ್ಕಳಿಗೆ ಮಾತ್ರ ಸೀಮಿತವಲ್ಲ. ಮೃತನ ಆದಾಯವನ್ನು ನಂಬಿ ಜೀವನ ನಡೆಸುತ್ತಿದ್ದ ಮತ್ತು ಆತನ ಸಾವಿನಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುವ ಪ್ರತಿಯೊಬ್ಬರಿಗೂ ಪರಿಹಾರ ಪಡೆಯುವ ಹಕ್ಕು ಇರಲಿದೆ ಎಂದು ಪೀಠ ಹೇಳಿದೆ.
- ಈ ಹಿಂದೆ 15 ಲಕ್ಷ ಪರಿಹಾರ ನೀಡಿದ್ದ ನ್ಯಾಯಾಧಿಕರಣ
- ಇದನ್ನು 30 ಲಕ್ಷಕ್ಕೆ ಹೆಚ್ಚಳ ಮಾಡಿ ಹೈಕೋರ್ಟ್ ಆದೇಶ


