ಸಂಸದ ದುಬೆ ಅವರ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಧಾರವಾಡದಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡ (ಏ.22): ಸಂಸದ ದುಬೆ ಅವರ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಧಾರವಾಡದಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸುಪ್ರೀಂಕೋರ್ಟ್‌ನ ಇತ್ತೀಚಿನ ತೀರ್ಪು ಮತ್ತು ರಾಜ್ಯಪಾಲರ ಕಾರ್ಯವೈಖರಿಯನ್ನು ಗುರಿಯಾಗಿಟ್ಟುಕೊಂಡು ಬಿಜೆಪಿಯನ್ನು ಟೀಕಿಸಿದ ಅವರು, 'ಬಿಜೆಪಿಯವರು ತಮಗೆ ಅನುಕೂಲವಾದಾಗ ಸುಪ್ರೀಂಕೋರ್ಟ್ ಅನ್ನು 'ಗ್ರೇಟ್' ಎಂದು ಕೊಂಡಾಡುತ್ತಾರೆ, ಆದರೆ ವಿರುದ್ಧ ತೀರ್ಪು ಬಂದಾಗ ಅದನ್ನು ಪ್ರಶ್ನಿಸುತ್ತಾರೆ' ಎಂದು ಕಿಡಿಕಾರಿದರು.
ಆರ್ಟಿಕಲ್ 26ಕ್ಕೆ ಸಂಬಂಧಿಸಿದ ವಿಚಾರದಲ್ಲಿ ಉಂಟಾದ ಗೊಂದಲದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ರವಾನಿಸಲಾಗಿದೆ ಎಂದು ಸಚಿವ ಲಾಡ್ ತಿಳಿಸಿದ್ದಾರೆ. ಆರ್ಟಿಕಲ್ 26ಗೆ ಸಂಬಂಧಿಸಿದ ವಿಚಾರ ಈಗ ಬಂದಿದೆ. ಇದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಹೇಳಲಾಗಿದೆ. ಹೇಳಿದ ತಕ್ಷಣ ಸುಪ್ರಿಂ ಮೇಲೆ ಮುಗಿ ಬಿದ್ದಿದ್ದಾರೆ. ರಾಜ್ಯಪಾಲರ ವಿಷಯವೂ ಬಂದಿದೆ. ಆಯಾ ರಾಜ್ಯ ಸರ್ಕಾರದ ಬಿಲ್ ಗಳನ್ನು ರಾಜ್ಯಪಾಲರು ಪಾಸ್ ಮಾಡಬೇಕು. ಆ ಬಿಲ್ ಗಳು ಪಾಸ್ ಆಗದಂತೆ ಮಾಡಿದ್ದಾರೆ. ಅವಧಿ ಮೀರಿ ಬಿಲ್‌ಗಳನ್ನು ಪೆಂಡಿಂಗ್ ಇಟ್ಟುಕೊಂಡಿದ್ದಾರೆ. ಹೀಗಾಗಿ ಸುಪ್ರೀಂಕೋರ್ಟ್ ಆ ಬಗ್ಗೆ ಕೇಳಿದೆ. ಪ್ರಶ್ನಿಸಿರೋದಕ್ಕೆ ಬಿಜೆಪಿಯವರು ಸುಪ್ರೀಂ ಮೇಲೆ ಮುಗಿಬಿದ್ದಿದ್ದಾರೆ ಎಂದು ಲೇವಡಿ ಮಾಡಿದರು.
ಇದನ್ನೂ ಓದಿ: ರಾಷ್ಟ್ರಪತಿಗೆ ಆದೇಶಿಸುವುದು ಸರಿಯೆ? ಸುಪ್ರೀಂ ವಿರುದ್ಧ ಉಪರಾಷ್ಟ್ರಪತಿ ಕಟುಟೀಕೆ
20 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅಲ್ಲಿ ರಾಜ್ಯಪಾಲರು ಯಾವುದೇ ಬಿಲ್‌ಗೆ ಅಡ್ಡಿಪಡಿಸುವುದಿಲ್ಲ. ಆದರೆ, ಬಿಜೆಪಿ ಇಲ್ಲದ ರಾಜ್ಯಗಳಲ್ಲಿ ರಾಜ್ಯಪಾಲರು ಬಿಲ್‌ಗಳಿಗೆ ತೊಂದರೆ ಉಂಟುಮಾಡುತ್ತಿದ್ದಾರೆ. ಇಂತಹ ಬಿಲ್‌ಗಳನ್ನು ಅವಧಿ ಮೀರಿ ರಾಷ್ಟ್ರಪತಿಗಳಿಗೆ ರವಾನಿಸಲಾಗಿದೆ. ಆದರೆ, ರಾಷ್ಟ್ರಪತಿಗಳು ಇವುಗಳನ್ನು ಪರಿಗಣಿಸಿಲ್ಲ ಎಂದು ಅವರು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ, ಕೆಲವು ರಾಜ್ಯ ಸರ್ಕಾರಗಳು ಸುಪ್ರೀಂಕೋರ್ಟ್‌ನ ಮೊರೆ ಹೋಗಿದ್ದವು. ಸುಪ್ರೀಂಕೋರ್ಟ್ ಈಗ ದೇಶದ ಇತಿಹಾಸದಲ್ಲಿ ಹೊಸ ತೀರ್ಪು ನೀಡಿದ್ದು, ಆ ರಾಜ್ಯಗಳಿಗೆ ಜಯ ಸಿಕ್ಕಿದೆ. 'ಈ ತೀರ್ಪನ್ನು ಬಿಜೆಪಿಯವರು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ' ಎಂದು ಸಂತೋಷ ಲಾಡ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಹಿಂದೂ ಧಾರ್ಮಿಕ ಟ್ರಸ್ಟ್‌ಗಳಲ್ಲಿ ಮುಸ್ಲಿಂಗೂ ಅವಕಾಶ ಮಾಡಿಕೊಡುತ್ತೀರಾ? : ಸುಪ್ರೀಂ ಪ್ರಶ್ನೆ!
ಈ ವಿವಾದವು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಮುಂದಿನ ಕಾನೂನು ಮತ್ತು ರಾಜಕೀಯ ಬೆಳವಣಿಗೆಗಳ ಕಡೆಗೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
