ವಕ್ಫ್‌ ಮಂಡಳಿಯಲ್ಲಿ ಮುಸ್ಲಿಮೇತರರಿಗೆ ಅವಕಾಶ ನೀಡುವುದಾದರೆ ಹಿಂದೂ ಧಾರ್ಮಿಕ ಟ್ರಸ್ಟ್‌ಗಳಲ್ಲಿ ಮುಸ್ಲಿಮರಿಗೆ ಅವಕಾಶ ಮಾಡಿಕೊಡುತ್ತೀರಾ? ಎಂದು ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಪ್ರಸಂಗ ಬುಧವಾರ ನಡೆದಿದೆ. ವಕ್ಫ್‌ ತಿದ್ದುಪಡಿ ವಿಧೇಯಕ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಇಂಥದ್ದೊಂದು ಬಲವಾದ ಪ್ರಶ್ನೆಯನ್ನು ನ್ಯಾಯಾಲಯ ಮುಂದಿಟ್ಟಿದೆ.

ನವದೆಹಲಿ (ಏ.17): ವಕ್ಫ್‌ ಮಂಡಳಿಯಲ್ಲಿ ಮುಸ್ಲಿಮೇತರರಿಗೆ ಅವಕಾಶ ನೀಡುವುದಾದರೆ ಹಿಂದೂ ಧಾರ್ಮಿಕ ಟ್ರಸ್ಟ್‌ಗಳಲ್ಲಿ ಮುಸ್ಲಿಮರಿಗೆ ಅವಕಾಶ ಮಾಡಿಕೊಡುತ್ತೀರಾ? ಎಂದು ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಪ್ರಸಂಗ ಬುಧವಾರ ನಡೆದಿದೆ. ವಕ್ಫ್‌ ತಿದ್ದುಪಡಿ ವಿಧೇಯಕ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಇಂಥದ್ದೊಂದು ಬಲವಾದ ಪ್ರಶ್ನೆಯನ್ನು ನ್ಯಾಯಾಲಯ ಮುಂದಿಟ್ಟಿದೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಅಂಗೀಕರಿಸಿದ ವಕ್ಫ್‌ ತಿದ್ದುಪಡಿ ವಿಧೇಯಕದ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಸಿರುವ 72 ಅರ್ಜಿಗಳ ಕುರಿತು ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ನೇತೃತ್ವದ ಪೀಠ ವಿಚಾರಣೆ ಬುಧವಾರ ಆರಂಭಿಸಿತು. ವಿಚಾರಣೆ ವೇಳೆ ಮಂಡಳಿಗೆ ಮುಸ್ಲಿಮೇತರರ ನೇಮಕ ಸೇರಿದಂತೆ ಕೆಲವೊಂದು ಅಂಶಗಳಿಗೆ ತಡೆ ನೀಡಿ ಮಧ್ಯಂತರ ಆದೇಶ ನೀಡುವ ಕುರಿತೂ ಸುಪ್ರೀಂಕೋರ್ಟ್‌ ಸುಳಿವು ನೀಡಿದೆ.

ಸಮಸ್ಯೆ ಸೃಷ್ಟಿಯಾಗಬಹುದು:

ಮಸೂದೆಯ ಕುರಿತು ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ ಅವರು ವಾದ ಮಂಡಿಸಿದರು. ಈ ವೇಳೆ ನ್ಯಾಯಾಲಯವು ಅನೇಕ ಪ್ರಶ್ನೆಗಳನ್ನು ಕೇಂದ್ರದ ಮುಂದಿಟ್ಟಿತು. ವಕ್ಫ್‌ ಬೈ ಯೂಸರ್‌ (ಹಿಂದಿನಿಂದಲೂ ವಕ್ಫ್‌ ಮಂಡಳಿ ಅನುಭವಿಸಿಕೊಂಡು ಬಂದಿರುವುದು) ಆಸ್ತಿಯನ್ನು ಹೇಗೆ ದಾಖಲು ಮಾಡಿಕೊಳ್ಳುತ್ತೀರಿ? ಅವರ ಬಳಿ ಯಾವ ದಾಖಲೆಗಳಿವೆ? ಒಂದು ವೇಳೆ ನೀವು ಅವುಗಳನ್ನು ಡೀನೋಟಿಫೈ ಮಾಡುತ್ತಾ ಹೋದರೆ ಏನಾಗಬಹುದು? ವಕ್ಫ್‌ ವಿಚಾರದಲ್ಲಿ ಕೆಲ ಪ್ರಕರಣಗಳಲ್ಲಿ ದುರ್ಬಳಕೆ ಆಗಿದೆ ನಿಜ. ಆದರೆ, ಕೆಲ ನೈಜ ಪ್ರಕರಣಗಳೂ ಇವೆ. ನಾನು ಹಿಂದಿನ ತೀರ್ಪುಗಳನ್ನು ನೋಡಿದ್ದೇನೆ. ವಕ್ಫ್‌ ಬೈ ಯೂಸರ್‌ ಅನ್ನು ನ್ಯಾಯಾಲಯವು ಮಾನ್ಯ ಮಾಡುತ್ತದೆ. ಒಂದು ವೇಳೆ ವಕ್ಫ್‌ ಬೈ ಯೂಸರ್‌ ಅನ್ನು ರದ್ದು ಮಾಡಿದರೆ ಸಮಸ್ಯೆಯಾಗಬಹುದು. ಶಾಸಕಾಂಗಕ್ಕೆ ತೀರ್ಪು, ಆದೇಶ ನೀಡಲು ಅಥವಾ ಅನೂರ್ಜಿತ ಎಂದು ಹೇಳಲು ಅವಕಾಶ ಇಲ್ಲ ಎಂದು ಅಭಿಪ್ರಾಯಪಟ್ಟಿತು.

ಇದನ್ನೂ ಓದಿ: ಉರ್ದು ಈ ನೆಲದಲ್ಲಿ ಹುಟ್ಟಿದ ಭಾಷೆ : ಸುಪ್ರೀಂ ಕೋರ್ಟ್

ಜೊತೆಗೆ ಮಂಡಳಿಯಲ್ಲಿ ಮುಸ್ಲಿಮೇತರರ ನೇಮಕದ ಅವಕಾಶವನ್ನು ನ್ಯಾಯಾಲಯ ಪ್ರಶ್ನಿಸಿದ ವೇಳೆ ಸರ್ಕಾರದ ಪರ ವಕೀಲರು, ಪದನಿಮಿತ್ತ ಅಧಿಕಾರಿಗಳ ಹೊರತಾಗಿ ಇಬ್ಬರು ಮುಸ್ಲಿಮೇತರರನ್ನು ಮಾತ್ರವೇ ನೇಮಕ ಮಾಡಬಹುದಾಗಿದೆ ಎಂದರು.

ಆದರೆ ಇದನ್ನು ಒಪ್ಪದ ನ್ಯಾಯಾಲಯ, ಹೊಸ ಕಾಯ್ದೆ ಪ್ರಕಾರ ಕೇಂದ್ರೀಯ ವಕ್ಫ್‌ ಮಂಡಳಿಯ 22 ಸದಸ್ಯರ ಪೈಕಿ 8 ಜನರು ಮಾತ್ರವೇ ಮುಸ್ಲಿಮರಾಗಿರಬಹುದು. ಈ 8 ಜನರ ಪೈಕಿ ಇಬ್ಬರು ನ್ಯಾಯಾಧೀಶರಾಗಿದ್ದು, ಅವರು ಮುಸ್ಲಿಮರಾಗದೆಯೂ ಇರಬಹುದು. ಹಾಗಾದಲ್ಲಿ ಮಂಡಳಿಯಲ್ಲಿ ಮುಸ್ಲಿಮೇತರರರೇ ಬಹುಮತ ಹೊಂದಿರುತ್ತಾರೆ. ಇದು ಹೇಗೆ ಧಾರ್ಮಿಕ ಗುಣಲಕ್ಷಣಗಳನ್ನು ಹೊಂದಿದಂತಾಗುತ್ತದೆ ಎಂದು ಪ್ರಶ್ನಿಸಿತು.

ಈ ವೇಳೆ ಸಾಲಿಸಿಟರ್ ಜನರಲ್‌ ಮೆಹ್ತಾ ಅವರು, ದೊಡ್ಡ ಪ್ರಮಾಣದಲ್ಲಿ ಮುಸ್ಲಿಮರೇ ವಕ್ಫ್‌ ತಿದ್ದುಪಡಿ ಕಾಯ್ದೆ ಪರವಾಗಿದ್ದಾರೆ ಎಂದು ಕೋರ್ಟ್‌ ಗಮನಕ್ಕೆ ತಂದರು. ಆಗ ಪೀಠವು, ಹಾಗಿದ್ರೆ ಇವತ್ತಿನಿಂದ ಹಿಂದೂ ಧಾರ್ಮಿಕ ಮಂಡಳಿಯಲ್ಲಿ ಮುಸ್ಲಿಮರಿಗೂ ಅ‍ವಕಾಶ ನೀಡಲಾಗುವುದು ಎಂದು ಹೇಳುತ್ತಿದ್ದೀರಾ ಎಂದು ಪ್ರಶ್ನಿಸಿತು.

ಇದನ್ನೂ ಓದಿ: ವಕ್ಫ್‌ ಮಸೂದೆ ಬಗ್ಗೆ ಪಾಕಿಸ್ತಾನ ತಕರಾರು: ಭಾರತದ ತೀವ್ರ ತಿರುಗೇಟು

ತಡೆ ಸುಳಿವು:

ವಿಚಾರಣೆ ವೇಳೆ ವಕ್ಫ್‌ ಬೈ ಯೂಸರ್‌ (ಹಿಂದಿನಿಂದಲೂ ವಕ್ಫ್‌ ಅನುಭವಿಸಿಕೊಂಡ ಆಸ್ತಿ) ಆಗಿದ್ದೂ ಸೇರಿ ವಕ್ಫ್‌ಗೆ ಸೇರಿದ್ದು ಎಂದು ಕೋರ್ಟ್‌ ಘೋಷಿಸಿದ ಆಸ್ತಿಗಳನ್ನು ಡೀನೋಟಿಫೈ ಮಾಡುವಂತಿಲ್ಲ, ವಕ್ಫ್‌ ಮಂಡಳಿಯಲ್ಲಿ ಮುಸ್ಲಿಮೇತರ ನೇಮಕ ಮಾಡುವಂತಿಲ್ಲ ಎಂಬುದೂ ಸೇರಿದಂತೆ ಮಸೂದೆಯಲ್ಲಿನ ಕೆಲ ಅಂಶಗಳಿಗೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಲು ಮುಂದಾಯಿತಾದರೂ ಕೊನೇ ಗಳಿಗೆಯಲ್ಲಿ ಕೇಂದ್ರ ಸರ್ಕಾರ ಮತ್ತು ಆರು ರಾಜ್ಯ ಸರ್ಕಾರಗಳ ಆಕ್ಷೇಪದ ಹಿನ್ನೆಲೆಯಲ್ಲಿ ಅದನ್ನು ತಡೆಹಿಡಿಯಿತು. ನಂತರ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು