ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಕಳ್ಳತನ ಮಾಡಿದ ಕಳ್ಳನೊಬ್ಬ, ಪರಾರಿಯಾಗುವಾಗ ಮತ್ತೊಂದು ಗ್ಯಾಂಗ್‌ನಿಂದ ದರೋಡೆಗೀಡಾಗಿದ್ದಾನೆ. ದರೋಡೆಕೋರರು ಆತನಿಗೆ ಹಣ ನೀಡಿ ಕಳುಹಿಸಿದ್ದು, ಆ ಹಣದಿಂದ ಆತ ಮತ್ತೆರಡು ಕಳ್ಳತನ ಮಾಡಿದ್ದಾನೆ.
ಬೆಂಗಳೂರು (ಡಿ.10): ರಾಜಧಾನಿ ಬೆಂಗಳೂರಿನ ವೈಟ್‌ಫೀಲ್ಡ್ ಸುತ್ತಮುತ್ತ ಪ್ರದೇಶದಲ್ಲಿ ಒಂದು ವಿಚಿತ್ರ ಮತ್ತು ರೋಚಕ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಕಳ್ಳನ ಬಳಿ ಇದ್ದ ಚಿನ್ನಾಭರಣಗಳನ್ನು ಮತ್ತೊಂದು 'ಖತರ್ನಾಕ್ ಗ್ಯಾಂಗ್' ರಾಬರಿ ಮಾಡಿದ ಘಟನೆ ನಡೆದಿದೆ. ಈ ಸಂಬಂಧ ವೈಟ್‌ಫೀಲ್ಡ್ ಪೊಲೀಸರು ಮೂಲ ಕಳ್ಳ ಸೇರಿದಂತೆ ರಾಬರಿ ಮಾಡಿದ ನಾಲ್ವರು ಆರೋಪಿಗಳ ಗ್ಯಾಂಗ್ ಅನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಏನಿದು ಘಟನೆ?
ನವೆಂಬರ್ 22ರ ರಾತ್ರಿ, ಇಸಾಯಿ ರಾಜ್ ಅಲಿಯಾಸ್ ಕುಂಟ (26) ಎಂಬಾತ ವೈಟ್‌ಫೀಲ್ಡ್ ಬಳಿಯ ಪ್ರೆಸ್ಟೀಜ್ ಗ್ಲೇನ್ ಪುಡ್ ವಿಲ್ಲಾಸ್ ಸಮೀಪದ ಒಂದು ವಿಲ್ಲಾದಲ್ಲಿ ಕಳ್ಳತನ ಮಾಡಿದ್ದ. ಈ ಕಳ್ಳತನದಲ್ಲಿ ಇಸಾಯಿ ರಾಜ್ ಸುಮಾರು 300 ಗ್ರಾಂನಷ್ಟು ಚಿನ್ನಾಭರಣಗಳನ್ನು ಕದ್ದು ಪರಾರಿಯಾಗುತ್ತಿದ್ದ. ಅದೇ ರಾತ್ರಿ 8 ಗಂಟೆ ಸುಮಾರಿಗೆ, ಕದ್ದ ಮಾಲನ್ನು ಹಿಡಿದುಕೊಂಡು ಮಂಡೂರು ಸ್ಮಶಾನದ ಬಳಿ ಇಸಾಯಿ ರಾಜ್ ನಡೆದುಕೊಂಡು ಹೋಗುತ್ತಿದ್ದಾಗ, ಅಲ್ಲಿಯೇ ಕುಳಿತು ಮದ್ಯಪಾನ ಮಾಡುತ್ತಿದ್ದ (ಎಣ್ಣೆ ಹೊಡೆಯುತ್ತಿದ್ದ) ನಾಲ್ವರ ನಟೋರಿಯಸ್ ಗ್ಯಾಂಗ್‌ನ ಕಣ್ಣಿಗೆ ಬಿದ್ದಿದ್ದಾನೆ.
ಕಳ್ಳನನ್ನೆ ರಾಬರಿ ಮಾಡಿದ ಗ್ಯಾಂಗ್:
ಎಣ್ಣೆ ಹೊಡೆಯುತ್ತಾ ಕೂತಿದ್ದ ಗ್ಯಾಂಗ್‌ನ ಸದಸ್ಯರು - ಮೌನೇಶ್ ರಾವ್, ದರ್ಶನ್ ಅಲಿಯಾಸ್ ಅಪ್ಪು, ಚಂದನ್ ಮತ್ತು ಸುನಿಲ್ - ತಕ್ಷಣ ಇಸಾಯಿ ರಾಜ್‌ಅನ್ನು ಸುತ್ತುವರೆದಿದ್ದಾರೆ.
ಅವರು, ಇಸಾಯಿ ರಾಜ್‌ಗೆ ಬೆದರಿಸಿ, ಆತ ಕಳ್ಳತನ ಮಾಡಿಕೊಂಡು ಬಂದಿದ್ದ ಎಲ್ಲಾ ಚಿನ್ನಾಭರಣಗಳನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ.
ಕಳ್ಳನ ಬಳಿ ಹಣವೂ ಇರಲಿಲ್ಲ. ತಮಿಳುನಾಡಿಗೆ ಹೋಗಬೇಕು ಎಂದು ಅಂಗಲಾಚಿದ ಇಸಾಯಿ ರಾಜ್‌ಗೆ ಅದೇ ಗ್ಯಾಂಗ್ 3 ಸಾವಿರ ರೂಪಾಯಿ ಹಣ ಕೊಟ್ಟು ಕಳುಹಿಸಿದೆ!
ರಾತ್ರಿ ಕಳ್ಳನ ಹೊಸ ಕೃತ್ಯ: ಗ್ಯಾಂಗ್‌ನಿಂದ ಹಣ ಪಡೆದ ಇಸಾಯಿ ರಾಜ್, ಅದೇ ಹಣದಲ್ಲಿ ಮತ್ತೆ ಮದ್ಯಪಾನ ಮಾಡಿ, ರಾತ್ರಿ 10 ಗಂಟೆಯ ನಂತರ ವೈಟ್‌ಫೀಲ್ಡ್‌ನಲ್ಲೇ ಮತ್ತೆ ಎರಡು ಮನೆಗಳನ್ನು ಕಳ್ಳತನ ಮಾಡಿದ್ದಾನೆ.
ಪೊಲೀಸ್ ಕಾರ್ಯಾಚರಣೆ:
ಕಳ್ಳತನ ಮತ್ತು ರಾಬರಿ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದ ವೈಟ್‌ಫೀಲ್ಡ್ ಪೊಲೀಸರು ತನಿಖೆ ಆರಂಭಿಸಿ, ಮೊದಲು ರಾಬರಿ ಗ್ಯಾಂಗ್‌ನ ನಾಲ್ವರನ್ನು ಮತ್ತು ನಂತರ ಮೂಲ ಕಳ್ಳ ಇಸಾಯಿ ರಾಜ್‌ನನ್ನು ಬಂಧಿಸಿದ್ದಾರೆ.
ಪೊಲೀಸರು, ಇಸಾಯಿ ರಾಜ್‌ನಿಂದ 70 ಲಕ್ಷ ರೂ. ಬೆಲೆಬಾಳುವ 447 ಗ್ರಾಂ ವಜ್ರ ಮತ್ತು ಚಿನ್ನಾಭರಣಗಳು ಹಾಗೂ ನಗದು 28 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ. ಒಂದು ಮನೆಯಲ್ಲಿ ಕಳ್ಳತನವಾದ ಮಾಲನ್ನು ಮತ್ತೊಂದು ಗ್ಯಾಂಗ್ ರಾಬರಿ ಮಾಡಿ, ಮತ್ತೆ ಹಣ ಪಡೆದು ಮತ್ತೊಂದು ಕಳ್ಳತನ ಮಾಡಲು ಪ್ರೇರೇಪಿಸಿದ ಈ ಘಟನೆ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ಐವರೂ ಆರೋಪಿಗಳು ಈಗ ಪೊಲೀಸರ ವಶದಲ್ಲಿದ್ದಾರೆ.


