ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂಪಾಯಿಗಳ ಬೃಹತ್ ದರೋಡೆಯು ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧಗಳ ಬಗ್ಗೆ ಆತಂಕ ಮೂಡಿಸಿದೆ. ಈ ಘಟನೆಯಲ್ಲದೆ, ಬೀದರ್, ಮಂಗಳೂರು, ಕಲಬುರಗಿ, ಮತ್ತು ವಿಜಯಪುರ ಸೇರಿದಂತೆ ರಾಜ್ಯದ ವಿವಿಧೆಡೆ ನಡೆದ ದರೋಡೆಗಳು ಇಲ್ಲಿವೆ.

ಬೆಂಗಳೂರು (ನ.19): ರಾಜ್ಯದಲ್ಲಿ ಕಳ್ಳರಿಗೆ ಕಿಂಚಿತ್ತೂ ಪೊಲೀಸರ ಭಯವಿದ್ದಂತೆ ಕಾಣುತ್ತಿಲ್ಲ. ಹಾಗೇನಾದರೂ ಇದ್ದಿದ್ದರೆ ರಾಜ್ಯದಲ್ಲಿ ಸಾಲು ಸಾಲು ದರೋಡೆ ಪ್ರಕರಣಗಳು ನಡೆಯಲು ಸಾಧ್ಯವೇ ಇಲ್ಲ. ಸರ್ಕಾರಕ್ಕೆ ಪೊಲೀಸರ ಮೇಲೆ ಹಿಡಿತವಿಲ್ಲದ ಕಾರಣಕ್ಕೆ, ಕಳ್ಳರಿಗೂ ಪೊಲೀಸರ ಮೇಲಿನ ಭಯ ಕಡಿಮೆಯಾಗಿದೆ. ಇದೇ ಕಾರಣಕ್ಕಾಗಿ ಬೆಂಗಳೂರಿನಲ್ಲಿ ಇಂದು ಡೈರಿ ಸರ್ಕಲ್‌ ಫೈವರ್‌ನಂಥ ಪ್ರಮುಖ ಪ್ರದೇಶದಲ್ಲಿ ಹಾಡಹಗಲೇ ಬರೋಬ್ಬರಿ 7.11 ಕೋಟಿ ರೂಪಾಯಿ ಹಣವನ್ನು ಖದೀಮರು ದರೋಡೆ ಮಾಡಿದ್ದಾರೆ. ನಡು ಮಧ್ಯಾಹ್ನವೇ ನಡೆದ ಕೇಸ್‌ನಲ್ಲಿ ಆರೋಪಿಗಳನ್ನು ಬಂಧಿಸಲು ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆಗೆ ಯಾವುದೇ ಫಲ ಸಿಕ್ಕಿಲ್ಲ.

ಬೆಂಗಳೂರಿನಲ್ಲಿ ನಟ್ಟ ನಡು ಮಧ್ಯಾಹ್ನದಲ್ಲಿ ಇಷ್ಟು ದೊಡ್ಡ ಪ್ರಮಾಣದ ದರೋಡೆ ನಡೆದಿರುವುದು ಬಹುತೇಕ ಇದೇ ಮೊದಲು. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ನಡೆದ ಪ್ರಮುಖ ದರೋಡೆ ಪ್ರಕರಣಗಳ ಸಾಲಿಗೆ ಇದೂ ಕೂಡ ಸೇರಿದೆ. ಬೀದರ್‌, ಮಂಗಳೂರು, ಕಲಬುರಗಿ ಬಳಿಕ ಬೆಂಗಳೂರಿನ ಹೆಸರು ಕೂಡ ದರೋಡೆ ಕೇಸ್‌ ಲಿಸ್ಟ್‌ನಲ್ಲಿ ಸೇರಿದೆ. ಹಿಂದೆಲ್ಲಾ ಸಾಮಾನ್ಯವಾಗಿ ಬಿಹಾರದಲ್ಲಿ ಮಾತ್ರವೇ ಕಾಣುತ್ತಿದ್ದ ಇಂಥ ಕೇಸ್‌ಗಳು ಈಗ ಕರ್ನಾಟಕದಲ್ಲೂ ಶುರುವಾಗಿದೆ.

ಬೀದರ್‌ (Bidar ATM Robbery) ಎಟಿಎಂ ದರೋಡೆ ಕೇಸ್‌

ಈ ವರ್ಷದ ಆರಂಭದಲ್ಲಿ ಬೀದರ್‌ನಲ್ಲಿ ಇಬ್ಬರು ದರೋಡೆಕೋರರು ಹಾಡಹಗಲ್ಲೇ ಎಟಿಎಂ ವ್ಯಾನ್‌ನಲ್ಲಿದ್ದ 83 ಲಕ್ಷ ಕದ್ದು ಪರಾರಿಯಾಗಿದ್ದರು. ಹಣವಿದ್ದ ಟ್ರಂಕ್‌ಅನ್ನು ತಮ್ಮ ಬೈಕ್‌ನ ಪೆಟ್ರೋಲ್‌ ಟ್ಯಾಂಕ್‌ ಮೇಲಿಟ್ಟು ಅವರು ಎಸ್ಕೇಪ್‌ ಆಗಿರುವ ದೃಶ್ಯ ವೈರಲ್‌ ಆಗಿದ್ದವು. ಈ ವೇಳೆ ಕ್ಯಾಶ್‌ ಕಸ್ಟೋಡಿಯನ್‌ ಗಿರಿ ವೆಂಕಟೇಶ್‌ಗೆ ಗುಂಡು ಹಾಕಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದರು.

ಮಂಗಳೂರಿನಲ್ಲಿ (Mangaluru ATM Robbery) ಹಾಡಹಗಲೇ ಬ್ಯಾಂಕ್‌ ದರೋಡೆ

ಈ ವರ್ಷದ ಜನವರಿ 17ರ ಮಧ್ಯಾಹ್ನ ಮಂಗಳೂರಿನ ಹೊರವಲಯದ ಉಳ್ಳಾಲ ಬಳಿಯ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ (ಸಹಕಾರ ಸಂಘ) ನುಗ್ಗಿದ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪೊಂದು ಸುಮಾರು ₹4 ಕೋಟಿ ಮೌಲ್ಯದ ಆಭರಣಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ದೋಚಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಿನದಂದು ಕೆ.ಸಿ. ರಸ್ತೆಯಲ್ಲಿರುವ ಸಂಘದ ತಲಪಾಡಿ ಶಾಖೆಯಲ್ಲಿ ದರೋಡೆ ನಡೆದಿದೆ. ಬೀದರ್‌ನಲ್ಲಿ ಎಟಿಎಂ ದರೋಡೆ ನಡೆದ ಸುದ್ದಿ ವರದಿಯಾದ ಒಂದು ದಿನದಲ್ಲೇ ಈ ಘಟನೆ ನಡೆದಿತ್ತು.

ಬೆಳಗಾವಿಯಲ್ಲಿ (Belagavi ATM Robbery) ಎಸ್‌ಬಿಐ ಎಟಿಎಂ ದರೋಡೆ

ಫೆಬ್ರವರಿಯಲ್ಲಿ ಬೆಳಗಾವಿ-ಬಾಗಲಕೋಟೆ ರಸ್ತೆಯ ಬೆಳಗಾವಿ ತಾಲ್ಲೂಕಿನ ಸಾಂಬ್ರಾ ಗ್ರಾಮದಲ್ಲಿ ಕಳ್ಳರು ಎಸ್‌ಬಿಐ ಎಟಿಎಂಅನ್ನು ಗ್ಯಾಸ್ ಕಟ್ಟರ್‌ನಿಂದ ಕತ್ತರಿಸಿ ಹಣವನ್ನು ದೋಚಿದ್ದರು. ಗ್ಯಾಸ್ ಕಟ್ಟರ್‌ಗಳೊಂದಿಗೆ ಬಂದ ಕಳ್ಳರು ಎಟಿಎಂನ ಒಂದು ಬದಿಯಿಂದ ಲಾಕ್ ಆಗಿದ್ದ ಡೋರ್‌ಅನ್ನು ತೆರೆದು ಅದರಲ್ಲಿದ್ದ ಸಂಪೂರ್ಣ ಹಣವನ್ನು ದೋಚಿದ್ದಾರೆ. ಕದ್ದ ಹಣದ ವಿವರಗಳು ತಿಳಿದುಬಂದಿರಲಿಲ್ಲ ಬೀದಿಗಳು 24/7 ಜನರು ಮತ್ತು ವಾಹನಗಳಿಂದ ತುಂಬಿರುವ ಸ್ಥಳದಿಂದ ಎಟಿಎಂ ಲೂಟಿ ನಡೆದಿರುವುದು ಅಚ್ಚರಿ ಮೂಡಿಸಿತ್ತು.

ಕಲಬುರಗಿಯಲ್ಲಿ (Kalaburagi ATM Robbery) ಎಟಿಎಂಗೆ ನುಗ್ಗಿ 18 ಲಕ್ಷ ಕಳವು

ಅದಾದ ಬಳಿಕ, ಕಲಬುರಗಿ ನಗರದಲ್ಲಿ ಏಪ್ರಿಲ್ 9 ರ ಬೆಳಗಿನ ಜಾವ ಗ್ಯಾಸ್ ಕಟ್ಟರ್ ಬಳಸಿ ಎಟಿಎಂ ಯಂತ್ರವನ್ನು ಒಡೆದು ದರೋಡೆಕೋರರು ₹18 ಲಕ್ಷ ದೋಚಿದ್ದರು. ಅದಾದ 20 ದಿನಗಳ ಬಳಿಕ ಪೊಲೀಸರು ದರೋಡೆಕೋರರ ಮೇಲೆ ಗುಂಡು ಹಾರಿಸಿ ಬಂದಿಸಿದ್ದರು.

ವಿಜಯಪುರದಲ್ಲಿ(Vijayapura ATM Robbery) ಬ್ಯಾಂಕ್‌ನಿಂದ 59 ಕೆಜಿ ಚಿನ್ನ ಕದ್ದ ಕಳ್ಳರು

ಸೆಪ್ಟೆಂಬರ್ 16 ರ ಸಂಜೆ, ಮಿಲಿಟರಿ ಸಮವಸ್ತ್ರ ಧರಿಸಿದ ಮುಸುಕುಧಾರಿಗಳು ವಿಜಯಪುರ ಜಿಲ್ಲೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಯನ್ನು ಲೂಟಿ ಮಾಡಿದ್ದರು. ದರೋಡೆಕೋರರು 58 ಕಿಲೋಗ್ರಾಂಗಳಷ್ಟು ಚಿನ್ನ ಮತ್ತು ₹8 ಕೋಟಿ ನಗದನ್ನು ದೋಚಿದ್ದಾರೆ. ದೇಶೀಯ ಪಿಸ್ತೂಲುಗಳು ಮತ್ತು ಇತರ ಶಸ್ತ್ರಾಸ್ತ್ರಗಳೊಂದಿಗೆ ಶಸ್ತ್ರಸಜ್ಜಿತರಾಗಿದ್ದ ದರೋಡೆಕೋರರು ಎಸ್‌ಬಿಐ ಶಾಖೆಗೆ ನುಗ್ಗಿ, ಹಲವಾರು ಉದ್ಯೋಗಿಗಳನ್ನು ಬಂಧಿಸಿ, ಎಚ್ಚರಿಕೆ ನೀಡದಂತೆ ಬೆದರಿಸಿದರು. ನಂತರ ಅವರು ಸ್ಥಳದಿಂದ ಪರಾರಿಯಾಗುವ ಮೊದಲು ಹಣವನ್ನು ದೋಚಿದ್ದರು.

ವಿಜಯಪುರದಲ್ಲಿ (Vijayapura Canara Bank Robbery) ಕೆನರಾ ಬ್ಯಾಂಕ್‌ ದರೋಡೆ

ಈ ವರ್ಷದ ಮೇ 25 ರಂದು ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದ ಬಸವನ ಬಾಗೇವಾಡಿ ತಾಲೂಕಿನ ಕೆನರಾ ಬ್ಯಾಂಕಿನಿಂದ ₹53 ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ದರೋಡೆ ಮಾಡಲಾಗಿತ್ತು. ಇದರಲ್ಲಿ 58 ಕೆಜಿ ಚಿನ್ನ, 5.20 ಲಕ್ಷದ ನಗದು ಹಣ ಸೇರಿದ್ದವು.

ಕೋಲಾರ (Kolar ATM Robbery) ಎಸ್‌ಬಿಐ ಎಟಿಎಂ ದರೋಡೆ

ಜೂನ್‌ 2025ರಲ್ಲಿ ಕೋಲಾರದ ಗುಲ್‌ಪೇಟ್‌ ಪ್ರದೇಶದ ಎಸ್‌ಬಿಐ ಎಟಿಎಂ ಅನ್ನು ದರೋಡೆ ಮಾಡಲಾಗಿತ್ತು. ಖದೀಮರು ಗ್ಯಾಸ್‌ ಕಟ್ಟರ್‌ ಬಳಸಿ ಕ್ಯಾಸ್‌ ಬಾಕ್ಸ್‌ಅನ್ನು ಓಪನ್‌ ಮಾಡಿ 27 ಲಕ್ಷ ರೂಪಾಯಿ ಹಣ ಕದ್ದಿದ್ದರು.

ಬಾಗಲಕೋಟೆ (Bagalkote ATM Robbery) ಎಟಿಎಂ ದರೋಡೆ

ಬಾಗಲಕೋಟೆಯ ಬಾದಾಮಿ ತಾಲೂಕಿನ ಕಕನೂರ ಗ್ರಾಮದಲ್ಲಿನ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯ ಎಟಿಎಂಅನ್ನು ಸೆಪ್ಟೆಂಬರ್‌ ವೇಳೆಗೆ ದರೋಡೆ ಮಾಡಲಾಗಿತ್ತು. ಈ ವೇಳೆ ಖದೀಮರು ಎಟಿಎಂನಿಂದ 10 ಲಕ್ಷ ಹಣ ದೋಚಿದ್ದರು. ಸಿಸಿಟಿವಿ ಕ್ಯಾಮೆರಾಗೆ ಬಣ್ಣ ಬಳಿದು, ಗ್ಯಾಸ್‌ ಕಟರ್‌ ಬಳಸಿ ಮೂರು ಲಾಕರ್‌ ಒಡೆಯಲು ಪ್ರಯತ್ನಿಸಿದ್ದರು. ಇದರಲ್ಲಿ ಒಂದು ಮಾತ್ರವೇ ಓಪನ್‌ ಆಗಿತ್ತು.

ಇವುಗಳು ಈ ವರ್ಷವಷ್ಟೇ ಆಗಿರುವ ದರೋಡೆ ಕೇಸ್‌ಗಳು. ಇದರಲ್ಲಿ ಕೆಲವೊಂದನ್ನು ಪತ್ತೆ ಹಚ್ಚಲು ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ, ಹೆಚ್ಚಿನವರು ಇನ್ನೂ ಉತ್ತರವೇ ಸಿಗದ ಪ್ರಶ್ನೆಯಾಗಿ ಉಳಿದುಕೊಂಡಿದೆ.