ಭಾರತದ ಪೌರತ್ವಕ್ಕಾಗಿ ಪಾಕಿಸ್ತಾನ ಮೂಲದ ಇಬ್ಬರು ಅಪ್ರಾಪ್ತ ಮಕ್ಕಳ ಪರ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ. ಪಾಕ್ ಪ್ರಜೆ ಮದುವೆಯಾಗಿ ವಿಚ್ಚೇದನ ಪಡೆದಿರುವ ಬೆಂಗಳೂರು ಮೂಲದ ಮಹಿಳೆ ತನ್ನ ಮಕ್ಕಳ ವಿಚಾರದಲ್ಲಿ ತೀವ್ರ ತಲೆಕೆಡಿಸಿಕೊಳ್ಳುವಂತಾಗಿದೆ.

ಬೆಂಗಳೂರು(ಏ.06): ಪಾಕಿಸ್ತಾನ ಮೂಲದ ಇಬ್ಬರು ಅಪ್ರಾಪ್ತ ಮಕ್ಕಳು ಭಾರತದ ಪೌರತ್ವಕ್ಕಾಗಿ ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಮಾನವೀಯತೆ ಆಧಾರದಲ್ಲಿ ಪಾಸ್‌ಪೋರ್ಟ್ ಪಡೆದ ಭಾರತಕ್ಕೆ ಮರಳಿದ ಬೆಂಗಳೂರು ಮೂಲದ ಮಹಿಳೆ ಹಾಗೂ ಇಬ್ಬರು ಮಕ್ಕಳಿಗೆ ಕಾನೂನಿನ ತೊಡಕು ಎದುರಾಗಿದೆ. ಪಾಕಿಸ್ತಾನ ಪೌರತ್ವ ತ್ಯಜಿಸದೆ ಭಾರತ ಪೌರತ್ವ ನೀಡಲು ಸಾಧ್ಯವಾಗದ ಕಾರಣ, ಕರ್ನಾಟಕ ಹೈಕೋರ್ಟ್ ಅರ್ಜಿ ವಜಾ ಮಾಡಿದೆ. 

ಬೆಂಗಳೂರಿನ ಅಮೀನಾ ರಾಹೀಲ್, ಪಾಕಿಸ್ತಾನದ ಮೂಲದ ಅಸಾದ್ ಮಲಿಕ್ ಜೊತೆ 2002ರಲ್ಲಿ ವಿವಾಹವಾಗಿದ್ದಾರೆ. ದುಬೈನಲ್ಲಿ ಅದ್ಧೂರಿ ಮದುವೆ ಸಮಾರಂಭ ನಡೆದಿತ್ತು. ಉದ್ಯೋಗ ಕಾರಣ ಅಸಾದ್ ಹಾಗೂ ಅಮೀನಾ ದುಬೈನಲ್ಲೇ ನೆಲೆಸಿದ್ದರು. ದಂಪತಿಗಳಿಗೆ 17 ವಯಸ್ಸು ಹಾಗೂ 14 ವರ್ಷದ ಇಬ್ಬರು ಮಕ್ಕಳಿದ್ದಾರೆ. 2014ರಲ್ಲಿ ಅಮೀನಾ ಹಾಗೂ ಅಸಾದ್ ದುಬೈ ನ್ಯಾಯಾಲಯದಿಂದ ವಿಚ್ಚೇದನ ಪಡೆದಿದ್ದಾರೆ. ಈ ವೇಳೆ ಮಕ್ಕಳ ಪಾಲನ ಹಾಗೂ ಎಲ್ಲಾ ಹಕ್ಕನ್ನು ತಾಯಿಗೆ ನೀಡಲಾಗಿದೆ. ಇತ್ತ ಅಮೀನಾ ದುಬೈನಲ್ಲಿ ಉದ್ಯೋಗದಲ್ಲಿ ಮುಂದವರಿದಿದ್ದಾರೆ. ಆದರೆ 2021ರಲ್ಲಿ ಅಮೀನಾ ದುಬೈ ಜೀವನ ಕಷ್ಟವಾದ ಕಾರಣ ತಾಯಿ ಮನಗೆ ಮರಳಲು ನಿರ್ಧರಿಸಿದ್ದಾರೆ.

ಭಾರತೀಯ ಶ್ರೀಮಂತರು ಭಾರತ ಪೌರತ್ವ ತ್ಯಜಿಸ್ತಿರೋದು ಯಾಕೆ ಗೊತ್ತಾ?

ತಾಯಿ ಅಮೀನಾ ಭಾರತದ ಪ್ರಜೆಯಾದರೂ, ಮಕ್ಕಳಿಬ್ಬರು ಪಾಕಿಸ್ತಾನದ ಪ್ರಜೆಗಳಾಗಿದ್ದಾರೆ. ತಂದೆ ಪಾಕಿಸ್ತಾನ ಪ್ರಜೆಯಾದ ಕಾರಣ ಮಕ್ಕಳಿಗೆ ಪಾಕಿಸ್ತಾನದ ಪೌರತ್ವ ಸಿಕ್ಕಿದೆ. ಆದರೆ ಅಮೀನಾ ಭಾರತಕ್ಕೆ ಮರಳಲು ರಾಯಭಾರ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಇಬ್ಬರು ಅಪ್ರಾಪ್ತ ಮಕ್ಕಳ ಬಳಿ ಭಾರತದಲ್ಲಿ ಪಾಸ್‌ಪೋರ್ಟ್ ಇಲ್ಲದ ಕಾರಣ ಕಾನೂನು ತೊಡಕು ಎದುರಾಗಿತ್ತು. ಅಮೀನಾ ಹಾಗೂ ಮಕ್ಕಳು ಬೆಂಗಳೂರಿನಲ್ಲಿ ನೆಲಸಲು ಮಾನ್ಯತೆ ಇಲ್ಲದಾಯಿತು. ಈ ವೇಳೆ ಮಕ್ಕಳ ಪಾಕಿಸ್ತಾನ ಪಾಸ್‌ಪೋರ್ಟ್ ಕಚೇರಿಗೆ ಹಿಂದುರುಗಿಸಿ, ಮಾನವೀಯತೆ ಆಧಾರದಲ್ಲಿ ಭಾರತ ರಾಯಭಾರ ಕಚೇರಿ ತಾತ್ಕಾಲಿಕ ಪಾಸ್‌ಪೋರ್ಟ್ ನೀಡಿತ್ತು. ಬಳಿಕ ಬೆಂಗಳೂರಿಗೆ ಆಗಮಿಸಿದ ಅಮೀನಾ ಹಾಗೂ ಇಬ್ಬರು ಮಕ್ಕಳು ತಾಯಿ ಮನೆಯಲ್ಲಿ ವಾಸವಾಗಿದ್ದಾರೆ.

ತಾತ್ಕಾಲಿಕ ಪಾಸ್‌ಪೋರ್ಟ್ ಅವಧಿ ಅಂತ್ಯಗೊಂಡಿದೆ. ಇತ್ತ ಗೃಹ ಸಚಿವಾಲಯಕ್ಕೆ ಮನವಿ ಮಾಡಿದರೂ ಉತ್ತರ ಬಂದಿರಲಿಲ್ಲ. ಹೀಗಾಗಿ ಅಪ್ರಾಪ್ತ ಮಕ್ಕಳಿಗೆ ಭಾರತ ಪೌರತ್ವ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. 17 ವರ್ಷ ಹಾಗೂ 14 ವರ್ಷದ ಮಕ್ಕಳು ಪಾಕಿಸ್ತಾನ ಪೌರತ್ವ ತ್ಯಜಿಸಿ ಭಾರತದ ಪೌರತ್ವ ಪಡೆಯಬೇಕಿದೆ.ಆದರೆ ಈ ಕುರಿತು ಪಾಕಿಸ್ತಾನ ರಾಯಭಾರ ಕತೇರಿಯನ್ನು ಸಂಪರ್ಕಿಸಲಾಗಿದೆ. ಈ ವೇಳೆ ಭಾರತದ ಪೌರತ್ವ ನೀಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ, ಆದರೆ ಪಾಕಿಸ್ತಾನ ಪೌರತ್ವ ತ್ಯಜಿಸಲು ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಅನ್ನೋ ನಿಯಮವಿದೆ. ಈ ಕಾರಣದಿಂದ ಗೃಹ ಸಚಿವಾಲಯ ಅಮೀನಾ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು.

2022ರಲ್ಲಿ ಭಾರತದ ಪೌರತ್ವ ತೊರೆದು ಹೋದವರೆಷ್ಟು ಜನ... ಇಲ್ಲಿದೆ ಡಿಟೇಲ್ಸ್

ಇತ್ತ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಅರ್ಜಿಯನ್ನು ವಿಚಾರಣೆ ನಡೆಸಿತ್ತು. 21 ವರ್ಷವಾಗದೇ ಪಾಕ್ ಪೌರತ್ವ ತ್ಯಜಿಸಲು ಸಾಧ್ಯವಿಲ್ಲದ ಕಾರಣ, ಭಾರತದ ಪೌರತ್ವ ನೀಡುವುದು ಅಸಾಧ್ಯವಾಗಿದೆ. ಒಂದು ದೇಶದ ಪೌರತ್ವ ಇರುವಾಗಲೇ ಮತ್ತೊಂದು ದೇಶ ಅಪ್ರಾಪ್ತರಿಗೆ ಪೌರತ್ವ ನೀಡಲು ಸಾಧ್ಯವಿಲ್ಲ. ಹೀಗಾಗಿ ಅಪ್ರಾಪ್ತರು ಪಾಕಿಸ್ತಾನ ಪೌರತ್ವ ತ್ಯಜಿಸಿದ ಬಳಿಕ ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಪೀಠ ಆದೇಶದಲ್ಲಿ ಹೇಳಿದೆ. ಈ ಮೂಲಕ ಅರ್ಜಿಯನ್ನು ವಜಾ ಮಾಡಿದೆ.

ಅಮೀನಾ ಪರ ವಾದ ಮಂಡನೆ ವೇಳೆ, ಮಕ್ಕಳಿಗೆ ಸದ್ಯ ಯಾವುದೇ ಗುರುತಿನ ಚೀಟಿ ಇಲ್ಲ. ಮಕ್ಕಳು ಯಾವುದೇ ಗುರುತು ಹೊಂದಿಲ್ಲ. ಕಾರಣ ಭಾರತಕ್ಕೆ ತಾತ್ಕಾಲಿಕ ಪಾಸ್‌ಪೋರ್ಟ್ ಪಡೆದು ಆಗಮಿಸುವ ವೇಳೆ ಪಾಕಿಸ್ತಾನದ ಪಾಸ್‌ಪೋರ್ಟ್ ರಾಯಭಾರ ಕಚೇರಿಯಲ್ಲಿ ಸಲ್ಲಿಕೆ ಮಾಡಲಾಗಿದೆ. ತಾಯಿ ಅಮೀನಾ ಭಾರತೀಯ ಪ್ರಜೆಯಾಗಿದ್ದಾರೆ. ಹೀಗಾಗಿ ಮಕ್ಕಳಿಗೂ ಪೌರತ್ವ ನೀಡಿ ತಾಯಿ ಮಕ್ಕಳು ಜೊತೆಯಾಗಿ ನೆಲೆಸುವಂತೆ ಮಾಡಬೇಕು ಎಂದು ಮನವಿ ಮಾಡಲಾಗಿತ್ತು.

ಈ ವಾದ ತರಿಸ್ಕರಿಸಿದ ನ್ಯಾಯಾಲಯ, ಭಾರತದ ಸಂವಿಧಾನ ಎರಡು ಪೌರತ್ವಕ್ಕೆ ಅವಕಾಶ ನೀಡುವುದಿಲ್ಲ. 1955ರ ಪೌರತ್ವ ಕಾಯ್ದೆ ಪ್ರಕಾರ ಮತ್ತೊಂದು ದೇಶದ ಪೌರತ್ವವನ್ನು ತ್ಯಜಿಸಿದ ಬಳಿಕವಷ್ಟೇ ಭಾರತ ಪೌರತ್ವ ನೀಡುತ್ತದೆ. ಇತ್ತ 1951ರ ಪಾಕಿಸ್ತಾನ ಪೌರತ್ವ ಕಾಯ್ದೆ ಪ್ರಕಾರ, 21 ವರ್ಷವಾಗದೆ ಅಪ್ರಾಪ್ತರು ಪಾಕಿಸ್ತಾನ ಪೌರತ್ವ ತ್ಯಜಿಸಲು ಸಾಧ್ಯವಿಲ್ಲ. ಇಲ್ಲಿ ಕಾನೂನು ಸ್ಪಷ್ಟವಾಗಿದೆ. ಇದರಲ್ಲಿ ಗೊಂದಲಗಳಿಲ್ಲ. ಹೀಗಾಗಿ ಅರ್ಜಿದಾರರು ಕಾನೂನು ಪ್ರಕಾರವೇ ಮುನ್ನಡೆಯಲು ಸಾಧ್ಯ ಎಂದಿದೆ.