BDA officer threatens lawyer Bengaluru ಬೆಂಗಳೂರಿನಲ್ಲಿ ಬಿಡಿಎ ಅಧಿಕಾರಿ ವೆಂಕಟೇಶ್, ವಂಚನೆ ಪ್ರಕರಣವೊಂದರಲ್ಲಿ ವಕಾಲತ್ತು ವಹಿಸಿದ್ದ ವಕೀಲ ಹರಿಪ್ರಸಾದ್ ಅವರ ಕಚೇರಿಗೆ ನುಗ್ಗಿ ಡ್ರ್ಯಾಗನ್‌ನಿಂದ ಚುಚ್ಚಿ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ.

ಬೆಂಗಳೂರು (ಮಾ.18): ಬೆಂಗಳೂರಿನಲ್ಲಿ ಬಿಡಿಎ ಅಧಿಕಾರಿಯೊಬ್ಬರ ದರ್ಪ ಮಿತಿಮೀರಿದ್ದು, ವಕೀಲರೊಬ್ಬರಿಗೆ ನೇರವಾಗಿ ಕೊಲೆ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಬಿಡಿಎ ಅಧಿಕಾರಿ ವೆಂಕಟೇಶ್ ಎಂಬಾತನ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದೆ. ನೀತಾ ಎಂಬ ಮಹಿಳೆಗೆ ಆಗಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಕಾಲತ್ತು ವಹಿಸಿದ್ದ ವಕೀಲ ಹರಿಪ್ರಸಾದ್ ಗೆ ಅಧಿಕಾರಿ ವೆಂಕಟೇಶ್ ಜೀವ ಬೆದರಿಕೆ ಹಾಕಿದ್ದಾನೆ ಎಂಬ ಆರೋಪಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಚೇರಿಗೆ ನುಗ್ಗಿ ಡ್ರ್ಯಾಗನ್‌ನಿಂದ ಚುಚ್ಚಿ ಸಾಯಿಸುವ ಧಮ್ಕಿ

ಮಹಿಳೆಯ ಪರವಾಗಿ ವಕಾಲತ್ತು ವಹಿಸಬಾರದೆಂದು ವಕೀಲ ಹರಿಪ್ರಸಾದ್ ಅವರ ಕಚೇರಿಗೇ ನುಗ್ಗಿದ ಬಿಡಿಎ ಅಧಿಕಾರಿ ವೆಂಕಟೇಶ್, ಕೈಯಲ್ಲಿ ಡ್ರ್ಯಾಗನ್ ಹಿಡಿದು ಬೆದರಿಕೆ ಹಾಕಿದ್ದಾನೆ. 'ಈ ವಿಷಯವನ್ನು ಮಾಧ್ಯಮಗಳಿಗೆ ಅಥವಾ ಪೊಲೀಸರಿಗೆ ತಿಳಿಸಿದರೆ ಇದೇ ಡ್ರ್ಯಾಗನ್‌ನಿಂದ ಚುಚ್ಚಿ ಕೊಲೆ ಮಾಡುತ್ತೇನೆ' ಎಂದು ವಾರ್ನಿಂಗ್ ನೀಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಿಡಿಎ ಅಧಿಕಾರಿಯ ದರ್ಪ ಕಂಡು ವಕೀಲರೇ ಆತಂಕದಲ್ಲಿ ಬದುಕುವಂತಾಗಿದೆ.

ನನಗೆ ಪ್ರಭಾವಿ ರಾಜಕಾರಣಿಗಳ ಪರಿಚಯವಿದೆ: ಬಿಡಿಎ ಅಧಿಕಾರಿ ದರ್ಪ

'ನನಗೆ ಪ್ರಭಾವಿ ರಾಜಕಾರಣಿಗಳ ಪರಿಚಯವಿದೆ, ನಾನು ಬಿಡಿಎ ಅಧಿಕಾರಿ' ಎಂದು ಹೇಳಿಕೊಂಡು ವೆಂಕಟೇಶ್ ದರ್ಪ ಪ್ರದರ್ಶಿಸಿದ್ದಾನೆ. ಅಷ್ಟೇ ಅಲ್ಲದೆ, ನಾನು ಈಗಾಗಲೇ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ 6 ಕೋಟಿ ರೂಪಾಯಿ ಹಣ ನೀಡಿದ್ದೇನೆ, ಅದನ್ನು ರಿಕವರಿ ಮಾಡುವುದು ಹೇಗೆ ಎಂದು ನೀನೇ ಹೇಳು' ರಾಜಕಾರಣಿಗಳಿಗೆ ಲಂಚ ನೀಡಿ ಅಧಿಕಾರ ನಡೆಸುತ್ತಿರುವ ಬಗ್ಗೆ ವಕೀಲರನ್ನೇ ಪ್ರಶ್ನಿಸಿದ್ದಾನೆ. ಆ ಮೂಲಕ ಹಣ ವಸೂಲಿಗೆ ತಡೆಯೊಡ್ಡಿದರೆ ಕೊಲೆ ಮಾಡುವುದಾಗಿ, ತನಗೆ ಪ್ರಭಾವಿ ವ್ಯಕ್ತಿಗಳ ಬೆಂಬಲ ಇರುವುದಾಗಿ ಬಹಿರಂಗವಾಗಿಯೇ ವಕೀಲರಿಗೆ ಬೆದರಿಕೆ ಹಾಕಿದ್ದಾನೆಂದು ಆರೋಪಿಸಲಾಗಿದೆ.

ಈ ಹಿಂದೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ವೆಂಕಟೇಶ್

ಆರೋಪಿ ಬಿಡಿಎ ಅಧಿಕಾರಿ ವೆಂಕಟೇಶ್ ಈ ಹಿಂದೆಯೂ ಭ್ರಷ್ಟಾಚಾರ ಆರೋಪದ ಮೇಲೆ ಕಳೆದ ವರ್ಷ ಈತನ ಮೇಲೆ ಲೋಕಾಯುಕ್ತ ದಾಳಿ ನಡೆದಾಗ ಬರೋಬ್ಬರಿ 1.53 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿತ್ತು. ಇದರ ಜೊತೆಗೆ, ಈತ ಈ ಹಿಂದೆ 'ರೈಸ್ ಪುಲ್ಲಿಂಗ್' ದಂಧೆಯಲ್ಲೂ ಭಾಗಿಯಾಗಿದ್ದ ಎಂಬ ಗಂಭೀರ ಆರೋಪಗಳಿವೆ. ಆದರೂ ಹುದ್ದೆಯಲ್ಲಿ ಮುಂದುವರಿದಿರುವುದು ಆಡಳಿತ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ.

ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ತಮಗೆ ಪ್ರಾಣಾಪಾಯವಿರುವ ಹಿನ್ನೆಲೆಯಲ್ಲಿ ವಕೀಲ ಹರಿಪ್ರಸಾದ್ ಅವರು ಈಗ ಪೊಲೀಸರ ಮೊರೆ ಹೋಗಿದ್ದಾರೆ. ಬಿಡಿಎ ಅಧಿಕಾರಿ ವೆಂಕಟೇಶ್ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆಗೆ ಮುಂದಾಗಿದ್ದಾರೆ. ಸರ್ಕಾರಿ ಅಧಿಕಾರಿಯೊಬ್ಬನ ಈ ಗೂಂಡಾ ವರ್ತನೆಗೆ ವಕೀಲರ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.