ಕೊಲೆ ಹಾಗೂ ದರೋಡೆ, ಇನ್ನಿತರ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳನ್ನು ಪ್ರತಿನಿತ್ಯ ವಿಚಾರಣೆ ನಡೆಸುವಂತೆ ರಾಜ್ಯದ ಎಲ್ಲ ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್‌ ಆದೇಶಿಸಿದೆ.

ಬೆಂಗಳೂರು (ಆ.25): ಕೊಲೆ ಹಾಗೂ ದರೋಡೆ, ಇನ್ನಿತರ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳನ್ನು ಪ್ರತಿನಿತ್ಯ ವಿಚಾರಣೆ ನಡೆಸುವಂತೆ ರಾಜ್ಯದ ಎಲ್ಲ ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್‌ ಆದೇಶಿಸಿದೆ. ವಿಚಾರಣಾ ನ್ಯಾಯಾಲಯದ ವಿಚಾರಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಜಾಮೀನು ನೀಡಬೇಕು ಎಂದು ಕೋರಿ ಗುಂಡ್ಲುಪೇಟೆಯ ತ್ರಿವಳಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಕಳೆದ ಮೂರು ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಅನ್ಸು ಅಲಿಯಾಸ್‌ ಅನ್ಸಾರ್‌ ಆಲಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್‌ ಈ ಆದೇಶ ಮಾಡಿದೆ.

ಇತ್ತೀಚಿನ ದಿನಗಳಲ್ಲಿ ಸೆಷನ್ಸ್‌ ಕೋರ್ಚ್‌ಗಳು ಅಪರಾಧ ಪ್ರಕರಣಗಳ ವಿಚಾರಣೆ ವಿಳಂಬ ಮಾಡುತ್ತಿರುವ ಕಾರಣಕ್ಕೆ ಜಾಮೀನು ನೀಡಬೇಕೆಂದು ಕೋರಿ ಹಲವು ಆರೋಪಿಗಳು ಅರ್ಜಿ ಸಲ್ಲಿಸಿದ್ದಾರೆ. ಸೂಕ್ತ ಕಾರಣ ನಮೂದಿಸದೆ ವಿಚಾರಣೆ ಮುಂದೂಡುವಂತಿಲ್ಲ. ಅನಗತ್ಯವಾಗಿ ವಿಚಾರಣೆ ಮುಂದೂಡುವುದು ತ್ವರಿತ ನ್ಯಾಯದಾನ ಮಾಡಬೇಕೆಂಬುದನ್ನು ಪ್ರತಿಪಾದಿಸುವ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 309ರ ಸ್ಪಷ್ಟಉಲ್ಲಂಘನೆಯಾಗುತ್ತದೆ. ಈ ಕುರಿತು ಸುಪ್ರೀಂ ಕೋರ್ಚ್‌ ಸ್ಪಷ್ಟಆದೇಶ ಮಾಡಿದೆ. ಅದರಂತೆ ರಾಜ್ಯದ ಎಲ್ಲ ವಿಚಾರಣಾ ನ್ಯಾಯಾಲಯಗಳು ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ಪ್ರತಿನಿತ್ಯ ವಿಚಾರಣೆ ನಡೆಸಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

ಮತ್ತೊಂದು ಏರ್‌ಲೈನ್ಸ್‌ ಸ್ಪೈಸ್‌ ಜೆಟ್‌ಗೆ ಆರ್ಥಿಕ ಸಂಕಷ್ಟ, 100 ಕೋಟಿ ರು. ಮರುಪಾವತಿಗೆ

ಗುಂಡ್ಲುಪೇಟೆಯಲ್ಲಿ ಝಕುಲ್ಲಾ, ಕೈಸರ್‌ ಮತ್ತು ಇದ್ರೀಸ್‌ ಎಂಬುವರ ಕೊಲೆ ಪ್ರಕರಣ 2020ರಲ್ಲಿ ನಡೆದಿತ್ತು. ಅಕ್ಕಿ ಮತ್ತು ಗೋವು ಸಾಗಣೆ ಸಂಬಂಧ ನಡೆದಿದ್ದ ಗಲಾಟೆಯೇ ಕೊಲೆಗೆ ಕಾರಣ ಎಂದು ಹೇಳಲಾಗಿತ್ತು. ಅನ್ಸಾರ್‌ ಸೇರಿದಂತೆ 19 ಮಂದಿ ಆರೋಪಿಗಳು ಚಾಕು ಹಾಗೂ ಕತ್ತಿ ಸೇರಿ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿದ್ದಾರೆ ಎಂದು ಮುಜಿಬುಲ್‌ ರೆಹಮಾನ್‌ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆರೋಪಿ ಅನ್ಸಾರ್‌ನನ್ನು ಬಂಧಿಸಿದ್ದರು. 2021ರ ಮಾ.8ರಂದು ಆತನ ಮೊದಲ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು. ನಂತರ 2022ರ ಮಾ.22ರಂದು ಎರಡನೇ ಬಾರಿಯೂ ವಜಾ ಮಾಡಿತ್ತು. ಅನ್ಸಾರ್‌ ಮೂರನೇ ಬಾರಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ.

ವಿಚಾರಣೆ ವೇಳೆ ಅನ್ಸಾರ್‌ ಪರ ವಕೀಲರು, ಅರ್ಜಿದಾರರು ಮೂರು ವರ್ಷಗಳಿಗೂ ಅಧಿಕ ಕಾಲ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ, ಪ್ರಕರಣದ ವಿಚಾರಣೆ ಇನ್ನೂ ಆರಂಭವಾಗಿಲ್ಲ. ವಿಚಾರಣಾ ನ್ಯಾಯಾಲಯ ಪ್ರಕರಣದ ವಿಚಾರಣೆ ಮುಂದೂಡುತ್ತಿದೆ. ಪ್ರಾಸಿಕ್ಯೂಷನ್‌ ಸಾಕ್ಷಿಗಳ ಸಾಕ್ಷ್ಯ ದಾಖಲಿಸಿಲ್ಲ. ಸಂವಿಧಾನದ ಅಡಿಯಲ್ಲಿ ತ್ವರಿತ ವಿಚಾರಣೆಯನ್ನು ಖಾತರಿಪಡಿಸಲಾಗಿದೆ. ವಿಚಾರಣೆ ವಿಳಂಬವಾಗಿರುವುದರಿಂದ ಜಾಮೀನು ಪಡೆಯಲು ಅನ್ಸಾರ್‌ ಅರ್ಹರು ಎಂದು ವಾದಿಸಿದರು.

ಸೆ.2ರಂದು ಸೂರ‍್ಯಯಾನ ಸಾಕಾರ ಸಾಧ್ಯತೆ, ನೇಸರನ ಅಧ್ಯಯನಕ್ಕೆ ತೆರಳಲಿರುವ ಆದಿತ್ಯ ಎಲ್‌-1

ಈ ವಾದ ತಿರಸ್ಕರಿಸಿದ ಹೈಕೋರ್ಟ್‌, ಆರೋಪಿ 4-5 ಬಾರಿ ಎದೆಯ ಭಾಗದಲ್ಲಿ ಇರಿದ ಕಾರಣ ಗಂಭೀರವಾಗಿ ಗಾಯಗೊಂಡು ಝಕುಲ್ಲಾ ಸಾವನ್ನಪ್ಪಿರುವ ವಿಚಾರ ಮರಣೋತ್ತರ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಜತೆಗೆ ಓರ್ವ ಸಾಕ್ಷಿ ತನ್ನ ಹೇಳಿಕೆಯಲ್ಲಿ ಅರ್ಜಿದಾರನ ಹೆಸರನ್ನೇ ಉಲ್ಲೇಖಿಸಿದ್ದಾರೆ. ಝಕುಲ್ಲಾ ಮತ್ತಿತರ ಕೊಲೆ ಪ್ರಕರಣದಲ್ಲಿ ಅನ್ಸು ಪ್ರಮುಖ ಆರೋಪಿ ಎಂಬುದಾಗಿ ತನಿಖಾಧಿಕಾರಿ ಹೇಳಿದ್ದಾರೆ. ಆದ್ದರಿಂದ ಅರ್ಜಿದಾರನಿಗೆ ಜಾಮೀನು ನೀಡಲಾಗದು ಎಂದು ನ್ಯಾಯಪೀಠ ಆದೇಶಿಸಿದೆ. ಆ ಮೂಲಕ ಮೂರನೇ ಬಾರಿಗೂ ಅನ್ಸಾರ್‌ಗೆ ಹೈಕೋರ್ಟ್‌ ಜಾಮೀನು ನಿರಾಕರಿಸಿದೆ.