ಸೆ.2ರಂದು ಸೂರ‍್ಯಯಾನ ಸಾಕಾರ ಸಾಧ್ಯತೆ, ನೇಸರನ ಅಧ್ಯಯನಕ್ಕೆ ತೆರಳಲಿರುವ ಆದಿತ್ಯ ಎಲ್-1
ಚಂದ್ರಯಾನದ ಯಶಸ್ಸಿನ ಬೆನ್ನಲ್ಲೇ ಭಾರತವು ಸೌರಯಾನದ ‘ಆದಿತ್ಯ’ ಮಿಶನ್ ಕೈಗೊಳ್ಳಲು ಉದ್ದೇಶಿಸಿದ್ದು, ಇದು ಸೆ.2ರಂದು ನೆರವೇರುವ ಸಾಧ್ಯತೆ ಇದೆ
ಬೆಂಗಳೂರು (ಆ.25): ಚಂದ್ರಯಾನದ ಯಶಸ್ಸಿನ ಬೆನ್ನಲ್ಲೇ ಭಾರತವು ಸೌರಯಾನದ ‘ಆದಿತ್ಯ’ ಮಿಶನ್ ಕೈಗೊಳ್ಳಲು ಉದ್ದೇಶಿಸಿದ್ದು, ಇದು ಸೆ.2ರಂದು ನೆರವೇರುವ ಸಾಧ್ಯತೆ ಇದೆ. ಈ ಬಗ್ಗೆ ಶುಕ್ರವಾರ ನಡೆಯಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಭೆಯಲ್ಲಿ ಅಂತಿಮ ದಿನಾಂಕ ನಿಗದಿಪಡಿಸುವ ನಿರೀಕ್ಷೆಯಿದೆ.
ಸದಸ್ಯದ ಮಾಹಿತಿ ಪ್ರಕಾರ ಸೆ.2ರಂದು ಬೆಳಗ್ಗೆ 11.30ಕ್ಕೆ ಶ್ರೀಹರಿಕೋಟಾ ಉಡ್ಡಯನ ಕೇಂದ್ರದಿಂದ ಆದಿತ್ಯ-ಎಲ್1 ವ್ಯೋಮನೌಕೆಯನ್ನು ಹೊತ್ತ ರಾಕೆಟ್ ಉಡ್ಡಯನ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಶುಕ್ರವಾರದ ಇಸ್ರೋ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.
ಈ ನಡುವೆ ಆದಿತ್ಯ ಯೋಜನೆ ಗುರುವಾರ ಮಾಧ್ಯಮಗಳ ಜತೆ ಮಾತನಾಡಿದ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್, ‘Ü ಚೊಚ್ಚಲ ಸೌರ ಮಿಷನ್ ‘ಆದಿತ್ಯ’ ಕಾರ್ಯ ಪ್ರಗತಿಯಲ್ಲಿದ್ದು, ಸೆಪ್ಟೆಂಬರ್‌ನಲ್ಲಿ ಉಡಾವಣೆಗೆ ಸಿದ್ಧವಾಗುತ್ತಿದೆ’ ಎಂದರು
ಇನ್ನು ನಾವು ನಮ್ಮ ಮೊದಲ ಮಾನವಸಹಿತ ಮಿಷನ್ ‘ಗಗನಯಾನ’ ಪ್ರಾರಂಭಿಸುವವರೆಗೆ ಅನೇಕ ಪರೀಕ್ಷಾ ಕಾರ್ಯಾಚರಣೆ ಹಮ್ಮಿಕೊಂಡಿದ್ದೇವೆ. ಮಾನವಸಹಿತ ಗಗನಯಾನ ಬಹುಶಃ 2025ರಲ್ಲಿ ನೆರವೇರಬಹುದು ಎಂದು ಹೇಳಿದರು.
ಏನಿದು ಆದಿತ್ಯ- ಎಲ್1?: ಇದು ಸೂರ್ಯನ ಅಧ್ಯಯನಕ್ಕೆ ಇಸ್ರೋ ರೂಪಿಸಿರುವ ಉಪಗ್ರಹ. ಆದಿತ್ಯ ಎನ್ನುವುದು ಸೂರ್ಯನ ಹೆಸರನ್ನು ಸೂಚಿಸಿದರೆ, ಎಲ್ 1 ಎನ್ನುವುದು ಲ್ಯಾಗ್‌ರೇಂಜ್ ಪಾಯಿಂಟ್ 1 ಎನ್ನುವುದನ್ನು ಸೂಚಿಸುತ್ತದೆ. ಸೂರ‍್ಯ ಹಾಗೂ ಭೂಮಿ ನಡುವಿನ ನಿಖರ ಪ್ರದೇಶವೊಂದರಲ್ಲಿ ಇದು ನೆಲೆಗೊಳ್ಳುತ್ತದೆ. ಸೂರ್ಯನ ಪ್ರಭಾವಲಯ, ಉಷ್ಣತೆಯ ಸಮಸ್ಯೆಗಳು, ಪ್ರಭಾವಲಯದಿಂದ ಹೊರಹೊಮ್ಮುವ ಭಾರೀ ಪ್ರಮಾಣದ ಜ್ವಾಲೆ, ಜ್ವಾಲೆಗೂ ಮುನ್ನಾ ಸ್ಥಿತಿ, ಜ್ವಾಲೆಯ ಚಟುವಟಿಕೆಗಳು, ಜ್ವಾಲೆಯ ಗುಣಲಕ್ಷಣ, ಬಾಹ್ಯಾಕಾಶದ ಹವಾಮಾನ ಮೊದಲಾದ ವಿಷಯಗಳ ಕುರಿತು ಮಾಹಿತಿ ಸಂಗ್ರಹಿಸಲಿದೆ.