ಮತ್ತೊಂದು ಏರ್‌ಲೈನ್ಸ್ ಸ್ಪೈಸ್ ಜೆಟ್‌ಗೆ ಆರ್ಥಿಕ ಸಂಕಷ್ಟ, 100 ಕೋಟಿ ರು. ಮರುಪಾವತಿಗೆ ಕೋರ್ಟ್ ಸೂಚನೆ
ದೇಶದಲ್ಲಿ ಮತ್ತೊಂದು ಏರ್‌ಲೈನ್ಸ್ ಸಂಕಷ್ಟಕ್ಕೆ ಈಡಾಗಿದೆ. ತನ್ನಿಂದ ಸಾಲ ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸ್ಪೈಸ್‌ಜೆಟ್ ಕಂಪನಿ ದಿಲ್ಲಿ ಹೈಕೋರ್ಟ್‌ನಲ್ಲಿ ಅಳಲು ತೋಡಿಕೊಂಡಿದೆ. ಕಂಪನಿಯು ಕಲಾನಿಧಿ ಮಾರನ್‌ಗೆ 396 ಕೋಟಿ ರು. ನೀಡಬೇಕಿದೆ.

ನವದೆಹಲಿ (ಆ.25): ಸಾಲ ಮರುಪಾವತಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ, ತಾನು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದೇನೆ ಎಂದು ದೇಶದ ಖ್ಯಾತ ವಿಮಾನಯಾನ ಕಂಪನಿ ಸ್ಪೈಸ್‌ಜೆಟ್ ಹೇಳಿಕೊಂಡಿದೆ. ಇದರಿಂದಾಗಿ ದೇಶದ ಮತ್ತೊಂದು ಏರ್‌ಲೈನ್ಸ್ ಸಂಕಷ್ಟಕ್ಕೀಡಾದಂತಾಗಿದೆ. ಈ ಹಿಂದೆ ಜೆಟ್ ಏರ್‌ವೇಸ್, ಕಿಂಗ್ ಫಿಶರ್ ಹಾಗೂ ಇತ್ತೀಚೆಗೆ ಗೋ ಫಸ್ಟ್ ಕಂಪನಿಗಳು ಆರ್ಥಿಕ ಮುಗ್ಗಟ್ಟು ಎದುರಿಸಿದ್ದವು. ಈ ಸಾಲಿಗೆ ಇನ್ನೊಂದು ಕಂಪನಿ ಸೇರಿಕೊಂಡಿದೆ.
ಈ ಹಿಂದೆ ಕಂಪನಿಯ ಮಾಲೀಕತ್ವ ಬದಲಾದಾಗ ಕಂಪನಿಯು ಮೂಲ ಮಾಲೀಕ ಕಲಾನಿಧಿ ಮಾರನ್‌ಗೆ ಸ್ಪೈಸ್‌ಜೆಟ್‌ನ ಹಾಲಿ ಸಿಎಂಡಿ ಅಜಯ್ ಸಿಂಗ್ 578 ಕೋಟಿ ರು. ಹಣ ನೀಡಬೇಕಿತ್ತು. ಆದರೆ ಈ ಪೈಕಿ ಇನ್ನೂ 396 ಕೋಟಿ ರು. ಡಾಲರ್ ಹಣ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಮಾರನ್ ಕೋರ್ಚ್ ಮೊರೆ ಹೋಗಿದ್ದಾರೆ.
ಇದರ ವಿಚಾರಣೆ ಗುರುವಾರ ನಡೆದಾಗ, ‘ನಾವು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದೇವೆ’ ಎಂದು ಸ್ಪೈಸ್‌ಜೆಟ್ ಹೇಳಿತು ಹಾಗೂ ಸದ್ಯಕ್ಕೆ 75 ಕೋಟಿ ರು. ಮಾತ್ರ ನೀಡಲು ಶಕ್ತ ಇರುವುದಾಗಿ ಹೇಳಿತು. ಆದರೆ ಇದಕ್ಕೊಪ್ಪದ ನ್ಯಾಯಾಧೀಶರು ಸೆ.10ರ ಒಳಗೆ 100 ಕೋಟಿ ರು ನೀಡದಿದ್ದರೆ ವಿಮಾನಗಳನ್ನು ಜಪ್ತಿ ಮಾಡಿಕೊಂಡು ಹಣ ಪಡೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು. ಆಗ ನಿಗದಿತ ದಿನದಲ್ಲಿ ಹಣ ನೀಡಲು ಒಪ್ಪಿಕೊಂಡಿತು.