ಕೆಲಸದ ಒತ್ತಡದಿಂದ ನಿದ್ದೆಗೆ ಜಾರಿದ್ದ KSRTC ಉದ್ಯೋಗಿಯ ಅಮಾನತು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯವು, ಉದ್ಯೋಗಿಯನ್ನು ಅತಿಯಾಗಿ ದುಡಿಸಿಕೊಳ್ಳುವುದು ಮತ್ತು ಅಮಾನತು ಮಾಡುವುದು ತಪ್ಪು ಎಂದು ಹೇಳಿದೆ. ವಿಶ್ರಾಂತಿ ಮತ್ತು ಕೆಲಸದ ಸಮಯದ ಮಿತಿಯ ಬಗ್ಗೆ ಉದ್ಯೋಗದಾತರಿಗೆ ತಿಳಿಹೇಳಿದೆ. ಅಲ್ಲದೆ, ನೌಕರರ ಕೆಲಸ ಮತ್ತು ಜೀವನದ ನಡುವೆ ಸಮತೋಲನವಿರಬೇಕು ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಕೆಲಸದ ಅನಿವಾರ್ಯತೆಯಿಂದ ಎಷ್ಟೋ ಸಂದರ್ಭಗಳಲ್ಲಿ ಹಲವೆಡೆ ಉದ್ಯೋಗಿಗಳ ಪಡುವ ಶ್ರಮ ಅಷ್ಟಿಷ್ಟಲ್ಲ. ಇದನ್ನೇ ಬಂಡವಾಳವಾಗಿಸಿಕೊಳ್ಳುವ ಕಂಪೆನಿ, ಸಂಸ್ಥೆಗಳೂ ಕಮ್ಮಿಯೇನಿಲ್ಲ. ಜೀವನೋಪಾಯಕ್ಕೆ ಕೆಲಸ ಅನಿವಾರ್ಯವಾಗಿರುವ ಸಂದರ್ಭಗಳಲ್ಲಿ ಹಲವೆಡೆಗಳಲ್ಲಿ ಉದ್ಯೋಗಿಗಳು ಪಡುವ ಪಾಡು ಯಾರಿಗೂ ಬೇಡ. ಆದರೆ ಅವರಿಂದ ಕಿಂಚಿತ್ ತಪ್ಪಾದರೂ ಅಮಾನತು, ವಜಾ ಎನ್ನುವ ತೂಗುಕತ್ತಿ ತಲೆಯ ಮೇಲೆ ತೂಗಾಡುತ್ತಲೇ ಇರುತ್ತದೆ. ಅಂಥದ್ದೇ ಒಂದು ಸನ್ನಿವೇಶದಲ್ಲಿ ಡಬಲ್ ಶಿಫ್ಟ್ ಮಾಡಿದ ಕಾರಣಕ್ಕೆ ನಿದ್ದೆಗೆ ಜಾರಿದ್ದ ಕಾರಣಕ್ಕೆ ಅಮಾನತುಗೊಂಡ ಉದ್ಯೋಗಿಯ ನೆರವಿಗೆ ಹೈಕೋರ್ಟ್ ಧಾವಿಸಿರುವ ಕುತೂಹಲದ ಆದೇಶವೊಂದು ಹೊರಬಿದ್ದಿದೆ. ಕರ್ನಾಟಕ ಸಾರಿಗೆ ಸಂಸ್ಥೆಯ ಕೊಪ್ಪಳದ ಕುಕನೂರು ಡಿಪೋದಲ್ಲಿ ಕೆಎಸ್‌ಟಿ ಕಾನ್ಸ್‌ಟೆಬಲ್ ಚಂದ್ರಶೇಖರ್ ಎನ್ನುವ ಉದ್ಯೋಗಿಯ ಅಮಾನತು ಆದೇಶವನ್ನು ರದ್ದು ಮಾಡುವ ಮೂಲಕ ನ್ಯಾಯಮೂರ್ತಿಗಳು, ನಿದ್ದೆಯ ಪಾಠವನ್ನೂ ಮಾಡಿದ್ದಾರೆ.
"ವಿಶ್ರಾಂತಿ ಮತ್ತು ವಿರಾಮದ ಹಕ್ಕು, ಕೆಲಸದ ಸಮಯದ ಸಮಂಜಸ ಮಿತಿ' ಇವುಗಳ ಕುರಿತು ಉದ್ಯೋಗದಾತರಿಗೆ ಪಾಠ ಮಾಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, "ಉದ್ಯೋಗಿಯನ್ನು 24 ಗಂಟೆಗಳಲ್ಲಿ ಎರಡು ಪಾಳಿಗಳ ಮೂಲಕ, 60 ದಿನಗಳ ಕಾಲ ವಿರಾಮವಿಲ್ಲದೆ ಅತಿಯಾದ ಕೆಲಸ ಮಾಡುವಂತೆ ಒತ್ತಾಯಿಸುವುದೂ ಅಲ್ಲದೇ, ಉದ್ಯೋಗಿಯನ್ನು ಅಮಾನತುಗೊಳಿಸುವುದು ಮೂರ್ಖತನ, ಇದು ನಿಸ್ಸಂದೇಹವಾಗಿ ಪ್ರಾಮಾಣಿಕತೆಯ ಕೊರತೆಯನ್ನು ತೋರಿಸುತ್ತದೆ' ಎಂದು ಹೇಳಿದ್ದಾರೆ. ಇದೇ ವೇಳೆ ನ್ಯಾಯಮೂರ್ತಿಗಳು, ಒಂದು ವೇಳೆ ಒಂದೇ ಪಾಳಿಯಲ್ಲಿ ಇದ್ದಾಗ, ಹಿಗೆ ನಿದ್ದೆಗೆ ಜಾರಿದ್ದರೆ ಮಾತ್ರ ಅದು ಅಪರಾಧವಾಗುತ್ತಿತ್ತು. ಆಗ ಅಮಾನತು ಆದೇಶ ಸರಿಯಾಗಿರುತ್ತಿತ್ತು ಎಂದೂ ಸ್ಪಷ್ಟಪಡಿಸಿದ್ದಾರೆ.
'ಗ್ಯಾರೆಂಟಿ'ಯಿಂದ ಸಂಕಷ್ಟಕ್ಕೆ ಸಿಲುಕಿರೋ KSRTCಗೆ ಸುಪ್ರೀಂನಿಂದ ಬಿಗ್ ಶಾಕ್! ಖಾಸಗಿ ಬಸ್ಗಳು ಫುಲ್ ಖುಷ್
ಇದೇ ವೇಳೆ ಕೆಲಸದ ಪಾಳಿಗಳ ಬಗ್ಗೆಯೂ ಬುದ್ಧಿಮಾತು ಹೇಳಿರುವ ನ್ಯಾಯಮೂರ್ತಿಗಳು, ''ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಒಪ್ಪಂದಗಳ ಪ್ರಕಾರ ಕೆಲವೊಂದು ನಿಯಮಗಳಿವೆ. ಕೆಲವು ಅಸಾಧಾರಣ ಸಂದರ್ಭಗಳನ್ನು ಹೊರತುಪಡಿಸಿದರೆ ಯಾವುದೇ ಉದ್ಯೋಗಿಗಳ ಕೆಲಸದ ಸಮಯವು ವಾರದಲ್ಲಿ 48 ಗಂಟೆಗಳು ಮತ್ತು ದಿನಕ್ಕೆ 8 ಗಂಟೆಗಳನ್ನು ಮೀರಬಾರದು ಎಂದು ಹೇಳಲಾಗಿದೆ. ಉದ್ಯೋಗಿಗಳ ಕೆಲಸ ಮತ್ತು ಜೀವನದ ಸಮತೋಲನ ಹೊಂದಿರಬೇಕು ಎಂದಿದ್ದಾರೆ. ಆದ್ದರಿಂದ ಡಬಲ್ ಶಿಫ್ಟ್ನಲ್ಲಿ ಕೆಲಸ ಮಾಡಿದ ಕಾರಣ, ನಿದ್ದೆಗೆ ಜಾರಿದ ಅರ್ಜಿದಾರರಿಗೆ ಅಮಾನತು ಮಾಡಿರುವುದು ಸರಿಯಲ್ಲ ಎಂದಿರುವ ನ್ಯಾಯಮೂರ್ತಿಗಳು, ಅಮಾನತು ಆದೇಶವನ್ನು ವಜಾ ಮಾಡಿದ್ದಾರೆ.
ಇನ್ನು ಅರ್ಜಿದಾರರ ಬಗ್ಗೆ ಹೇಳುವುದಾದರೆ, ಅವರ ಪರ ವಕೀಲರು ನಿದ್ದೆಗೆ ಜಾರಿದ್ದ ಬಗ್ಗೆ ಕಾರಣವನ್ನೂ ನೀಡಿದ್ದರು. ವೈದ್ಯರ ಸಲಹೆಯಂತೆ ಅರ್ಜಿದಾರ ಚಂದ್ರಶೇಖರ್ ಅವರು ಮಾತ್ರೆಗಳನ್ನು ಸೇವಿಸುತ್ತಿದ್ದರು. ನಿರಂತರವಾಗಿ ಎರಡು ಮತ್ತು ಮೂರನೇ ಪಾಳಿಯಲ್ಲಿ ಕೆಲಸ ಮಾಡಬೇಕಾಗಿ ಬಂದದ್ದರಿಂದ ನಿದ್ರೆಯ ಕೊರತೆ ಉಂಟಾಯಿತು. ಅರಿವಿಗೆ ಬಾರದೇ ನಿದ್ದೆ ಹೋದರು' ಎಂದರು. ಇವರು ನಿದ್ರೆ ಮಾಡುತ್ತಿದ್ದಾಗ ಅದನ್ನು ಯಾರೋ ವಿಡಿಯೋ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರ, ಚಂದ್ರಶೇಖರ್ ಅವರಿಂದ ವಿವರಣೆ ದಾಖಲಿಸಿಕೊಂಡಿತ್ತು. ಬಳಿಕ ವಿಚಕ್ಷಣಾ ಇಲಾಖೆಯು ವರದಿ ಸಲ್ಲಿಸಿದ ನಂತರ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು.
ಮಾವನ ಆಸ್ತಿಯಲ್ಲಿ ಅಳಿಯನಿಗೂ ಪಾಲಿದ್ಯಾ? ಹೈಕೋರ್ಟ್ ನೀಡಿರುವ ಮಹತ್ವದ ತೀರ್ಪೇನು? ಇಲ್ಲಿದೆ ಡಿಟೇಲ್ಸ್
