ಕರ್ನಾಟಕದಲ್ಲಿ ಮುಂದಿನ 3 ದಿನ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಕರಾವಳಿ ಮತ್ತು ಒಳನಾಡಿನಲ್ಲಿ ಮಳೆ ಚಟುವಟಿಕೆ ಹೆಚ್ಚಾಗಲಿದ್ದು, 7 ಜಿಲ್ಲೆಗಳಿಗೆ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಬೆಂಗಳೂರು (ಜು.16): ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದ ಮೇಲಿನ ವಾಯುಭಾರ ಕುಸಿತದ ಪರಿಣಾಮವಾಗಿ ಕರ್ನಾಟಕದಲ್ಲಿ ಮುಂದಿನ 3 ದಿನಗಳು ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರ್ನಾಟಕದ ಕರಾವಳಿ ಹಾಗೂ ಒಳನಾಡು ಭಾಗಗಳಲ್ಲಿ ಮಳೆ ಚಟುವಟಿಕೆ ಹೆಚ್ಚಾಗಲಿದ್ದು, ಒಟ್ಟು 7 ಜಿಲ್ಲೆಗಳಿಗೆ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಆರೆಂಜ್ ಅಲರ್ಟ್ ಜಾರಿ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಭೀತಿ
ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಹಾಗೂ ನಾಳೆ ಭಾರೀ ಮಳೆಯಾಗುವ ಸಾಧ್ಯತೆಯಿರುವುದರಿಂದ ಆರೆಂಜ್ ಅಲರ್ಟ್ ಜಾರಿಯಾಗಿದೆ. ಬಿರುಗಾಳಿಯೊಂದಿಗೆ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಬೆಂಗಳೂರು ಸೇರಿದಂತೆ ಹಲವೆಡೆ ಯೆಲ್ಲೋ ಅಲರ್ಟ್
ರಾಜಧಾನಿ ಬೆಂಗಳೂರು ಸೇರಿದಂತೆ ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಮಂಡ್ಯ, ಮೈಸೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಜುಲೈ 18 ಮತ್ತು 19 ರಂದು ಸಾಧಾರಣದಿಂದ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಿಗೆ 2 ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇಂದಿನ ಮಳೆ ಭವಿಷ್ಯ: ರಾಜ್ಯದ ಕರಾವಳಿ & ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಿಗೆ ಚದುರಿದಿಂದ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆ ಸಾಧ್ಯತೆಯಿದೆ. ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರದಿಂದ ಸಾದಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇಂದು ಬೆಳಿಗ್ಗೆವರೆಗೆ ರಾಜ್ಯದಲ್ಲಿ ದಾಖಲಾದ ಮಳೆ ಪ್ರಮಾಣದ ವಿವರಗಳು:
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (KSNDMC) ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಪಿಸಲಾಗಿರುವ ದೂರಸ್ಥ ಮಳೆ ಮಾಪನ ಕೇಂದ್ರಗಳಲ್ಲಿ ಜು.16ರ ಬೆಳಗ್ಗೆ 8.30ರ ಅನ್ವಯ ದಾಖಲಾದ ಮಳೆ ಪ್ರಮಾಣವನ್ನು ಜಿಲ್ಲಾವಾರು ಮಳೆಯನ್ನು ಹಂಚಿಕೆ ಮಾಡಲಾಗಿದೆ.
- ವ್ಯಾಪಕ ಮಳೆ: ರಾಜ್ಯದ 04 ಜಿಲ್ಲೆಗಳು (ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು}.
- ಸಾಧಾರಣ ವ್ಯಾಪಕ ಮಳೆ: ರಾಜ್ಯದ 04 ಜಿಲ್ಲೆಗಳು (ಶಿವಮೊಗ್ಗ ಚಿಕ್ಕಮಗಳೂರು ಬೆಳಗಾವಿ ಮತ್ತು ಹಾವೇರಿ).
- ಅಲ್ಲಲ್ಲಿ ಚದುರಿದಂತೆ ಮಳೆ: ರಾಜ್ಯದ 01 ಜಿಲ್ಲೆ (ದಾವಣಗೆರೆ).
- ಕೆಲವೆಡೆ ತೀರಾ ಹಗುರ ಮಳೆ: ರಾಜ್ಯದ 19 ಜಿಲ್ಲೆಗಳಾದ ಹಾಸನ, ಚಿತ್ರದುರ್ಗ, ಧಾರವಾಡ, ಯಾದಗಿರಿ, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ತುಮಕೂರು, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ವಿಜಯನಗರ, ಕಲ್ಪುರಗಿ, ಗದಗ, ಚಾಮರಾಜನಗರ, ವಿಜಯಪುರ, ಮೈಸೂರು, ಕೊಪ್ಪಳ, ರಾಯಚೂರು, ಕೋಲಾರ ಮತ್ತು ಮಂಡ್ಯದಲ್ಲಿ ಹಗುರವಾದ ಮಳೆ ಸುರಿದಿದೆ.
- ಅತ್ಯಲ್ಪಮಳೆ/ಒಣಹವೆ: ರಾಜ್ಯದ 03 ಜಿಲ್ಲೆಗಳಾದ ರಾಮನಗರ, ಬೀದರ್ ಮತ್ತು ಬಳ್ಳಾರಿಯಲ್ಲಿ ಒಣಹವೆ ಮುಂದುವರೆದಿದೆ.
- ಗರಿಷ್ಟಮಳೆ: 137.ಮಿ.ಮೀ. (ಉತ್ತರ ಕನ್ನಡ, ಜಿಲ್ಲೆಯ ಸಿದ್ದಾಪುರ ತಾಲೂಕಿನ ನೀಲ್ಕುಂದ ಗ್ರಾಮದಲ್ಲಿ ನಿನ್ನೆ ಅತ್ಯಧಿಕ ಮಳೆಯಾಗಿದೆ.)
ಜುಲೈ 15 ರಂದು ಬೆಳಗ್ಗೆ 8.30ರಿಂದ ಜುಲೈ 16ರ ಬೆಳಗ್ಗೆ 5.30ರ ವರೆಗೆ ದಾಖಲಾಗಿದ ಮಳೆಯ ಪ್ರಮಾಣ ಹೀಗಿದೆ:
- ಮಂಗಳೂರು ವಿಮಾನ ನಿಲ್ದಾಣ: 71.2 mm
- ಅಗುಂಬೆ (ಶಿವಮೊಗ್ಗ): 61.0 mm
- ಮಂಗಳೂರು ನಗರ: 27.5 mm
- ಶಕ್ತಿನಗರ (ಮಂಗಳೂರು): 28.6 mm (ಸಿಡಿಲು ಸಹಿತ)
- ಹೊನ್ನಾವರ: 18.8 mm
- ಹಾವೇರಿ: 11.0 mm
- ಕಾರವಾರ: 5.0 mm
- ಧಾರವಾಡ: 2.0 mm
- ಬೆಳಗಾವಿ: 1.0 mm
- ಬೆಂಗಳೂರು ನಗರದಲ್ಲಿ ಗೋಪಾಲನಗರದಲ್ಲಿ 1.5 mm, ಹೆಸರಘಟ್ಟದಲ್ಲಿ 5.5 mm, ದೊಡ್ಡಬಳ್ಳಾಪುರದಲ್ಲಿ 0.5 mm ಮಳೆಯಾಗಿದೆ.
ಎಚ್ಚರಿಕೆ ಮತ್ತು ಮುನ್ನೆಚ್ಚರಿಕೆ ಕ್ರಮ
ಜಿಲ್ಲಾಡಳಿತ, ಅಗ್ನಿಶಾಮಕ ಮತ್ತು ಆಪತ್ತಿನ ನಿರ್ವಹಣಾ ಇಲಾಖೆಗಳನ್ನು ಸಜ್ಜಾಗಿರಿಸಲು ಸೂಚನೆ ನೀಡಲಾಗಿದೆ. ಜನರು ಅವಶ್ಯಕತೆ ಇಲ್ಲದಿದ್ದರೆ ಮನೆ ಹೊರಗೆ ಹೋಗದಂತೆ ಸೂಚಿಸಲಾಗಿದೆ. ನದಿ, ಕೆರೆಗಳ ಸಮೀಪದಲ್ಲಿ ಹೋಗುವುದು ತಪ್ಪಿಸುವಂತೆ ಸೂಚನೆ ಇದೆ. ಮಳೆಯ ಪರಿಣಾಮವಾಗಿ ಕೆಲವು ಭಾಗಗಳಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ರೈತರು, ಪ್ರವಾಸಿಗರು ಹಾಗೂ ಸಾರ್ವಜನಿಕರು ಹವಾಮಾನ ಇಲಾಖೆಯ ನಿರಂತರ ಮುನ್ಸೂಚನೆಗಳನ್ನು ಅನುಸರಿಸುವುದು ಅಗತ್ಯ.
