ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರವನ್ನು ₹200ಕ್ಕೆ ಸೀಮಿತಗೊಳಿಸಿದ್ದ ಸರ್ಕಾರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಹೊಂಬಾಳೆ ಫಿಲ್ಮ್ಸ್ ಸೇರಿದಂತೆ ಹಲವು ಚಿತ್ರಮಂದಿ ಮಾಲೀಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಆದೇಶ ಹೊರಡಿಸಿದ್ದು, ಮಾಲೀಕರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಬೆಂಗಳೂರು (ಸೆ.23): ಕರ್ನಾಟಕ ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್‌ಗಳು ಮತ್ತು ಚಿತ್ರಮಂದಿರಗಳಲ್ಲಿ ಸಿನಿಮಾ ಟಿಕೆಟ್ ದರವನ್ನು ₹200 ಕ್ಕೆ ಸೀಮಿತಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಹೊಂಬಾಳೆ ಫಿಲ್ಮ್ಸ್ ಸೇರಿದಂತೆ ಹಲವು ಚಿತ್ರಮಂದಿರಗಳ ಮಾಲೀಕರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಮಧ್ಯಂತರ ಆದೇಶ ನೀಡಿದೆ.
ಸರ್ಕಾರದ ಆದೇಶ ಮತ್ತು ಮಾಲೀಕರ ಆಕ್ಷೇಪಣೆ:
ರಾಜ್ಯ ಸರ್ಕಾರವು ಎಲ್ಲಾ ಚಿತ್ರಮಂದಿರಗಳಲ್ಲಿ ಜಿಎಸ್‌ಟಿ ಹೊರತುಪಡಿಸಿ, ಸಿನಿಮಾ ಟಿಕೆಟ್ ದರವನ್ನು ₹200ಕ್ಕೆ ಏಕರೂಪವಾಗಿ ನಿಗದಿಪಡಿಸಿ ಆದೇಶ ಹೊರಡಿಸಿತ್ತು. ಇದು ಸಾರ್ವಜನಿಕರ ಹಿತದೃಷ್ಟಿಯಿಂದ ಕೈಗೊಂಡ ನಿರ್ಧಾರ ಎಂದು ಸರ್ಕಾರ ತನ್ನ ಬಜೆಟ್‌ನಲ್ಲಿಯೂ ಘೋಷಿಸಿತ್ತು. ಆದರೆ, ಸರ್ಕಾರದ ಈ ನಿರ್ಧಾರ ಏಕಪಕ್ಷೀಯವಾಗಿದ್ದು, ಯಾವುದೇ ಸೂಕ್ತ ಅಂಕಿ-ಅಂಶಗಳನ್ನು ಪರಿಗಣಿಸದೆ ಇರುವುದು ಕಾನೂನುಬಾಹಿರ ಎಂದು ಮಲ್ಟಿಪ್ಲೆಕ್ಸ್ ಮಾಲೀಕರು ಮತ್ತು ಚಲನಚಿತ್ರ ನಿರ್ಮಾಪಕರು ಆಕ್ಷೇಪ ವ್ಯಕ್ತಪಡಿಸಿದ್ದರು.
ನ್ಯಾಯಾಲಯದಲ್ಲಿ ವಾದ-ಪ್ರತಿವಾದ:
ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ ಮತ್ತು ಧ್ಯಾನ್ ಚಿನ್ನಪ್ಪ ವಾದ ಮಂಡಿಸಿದರು. ಅವರು,'ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ ನಡೆಸಲು ಮತ್ತು ಉತ್ತಮ ಗುಣಮಟ್ಟದ ಚಲನಚಿತ್ರಗಳನ್ನು ನಿರ್ಮಿಸಲು ಭಾರಿ ಶ್ರಮ ಹಾಗೂ ಬಂಡವಾಳ ಬೇಕಾಗುತ್ತದೆ. ಸರ್ಕಾರದ ಈ ನಿಯಮ ಕಾನೂನುಬಾಹಿರವಾಗಿದ್ದು, ಸಿನಿಮಾದ ಹೂಡಿಕೆಗೆ ನಿರ್ಬಂಧ ಹೇರುವಂತಿದೆ' ಎಂದು ವಾದಿಸಿದರು.
ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಇಸ್ಮಾಯಿಲ್ ಜಬೀವುಲ್ಲಾ ಅವರು ವಾದ ಮಂಡಿಸಿ, 'ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಟಿಕೆಟ್ ದರ ನಿಗದಿ ಮಾಡಲಾಗಿದೆ. ಈ ಬಗ್ಗೆ ಬಜೆಟ್‌ನಲ್ಲಿಯೂ ಘೋಷಣೆ ಮಾಡಲಾಗಿತ್ತು' ಎಂದು ತಿಳಿಸಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ನಂತರ, ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಇದೀಗ ಟಿಕೆಟ್ ದರವನ್ನು ₹200ಕ್ಕೆ ಸೀಮಿತಗೊಳಿಸಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿ ಮಧ್ಯಂತರ ಆದೇಶ ನೀಡಿದೆ. ಇದರಿಂದಾಗಿ ಚಿತ್ರಮಂದಿರ ಮಾಲೀಕರಿಗೆ ತಾತ್ಕಾಲಿಕವಾಗಿ ದೊಡ್ಡ ರಿಲೀಫ್ ದೊರೆತಿದೆ.
