ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ 'ರಾಮೇಶ್ವರಂ ಕೆಫೆ' ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ತನಿಖೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಮೇಲ್ನೋಟಕ್ಕೆ ಆರೋಪಗಳು ಸುಳ್ಳು ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ತನಿಖೆಯನ್ನು ಸ್ಥಗಿತಗೊಳಿಸಲು ಆದೇಶಿಸಿದೆ.
ಬೆಂಗಳೂರು (ಡಿ.22): ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ (BIAL) 'ರಾಮೇಶ್ವರಂ ಕೆಫೆ' ಮಳಿಗೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಎಫ್‌ಐಆರ್ ತನಿಖೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಸಂಸ್ಥೆಯ ಪ್ರವರ್ತಕರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯವು, ಮುಂದಿನ ಆದೇಶದವರೆಗೆ ತನಿಖೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದೆ.
ಏನಿದು ಪ್ರಕರಣ?
ಬೆಂಗಳೂರು ವಿಮಾನ ನಿಲ್ದಾಣದ ಬಿಐಎಎಲ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 59/2025 ರಡಿ ರಾಮೇಶ್ವರಂ ಕೆಫೆಯ ವಿರುದ್ಧ ದೂರು ದಾಖಲಾಗಿತ್ತು. ಇದನ್ನು ಪ್ರಶ್ನಿಸಿ ರಾಮೇಶ್ವರಂ ಕೆಫೆ ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು, 'ಈ ಆರೋಪಗಳು ಮೇಲ್ನೋಟಕ್ಕೆ ಸುಳ್ಳು ಮತ್ತು ಪ್ರತೀಕಾರದ ಸ್ವರೂಪದಿಂದ ಕೂಡಿದಂತೆ ಕಾಣುತ್ತಿವೆ' ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ಈ ಪ್ರಕರಣದ ಬಗ್ಗೆ ವಿವರವಾದ ಪರಿಶೀಲನೆಯ ಅಗತ್ಯವಿದೆ ಎಂದು ಹೇಳಿ ರಾಜ್ಯ ಸರ್ಕಾರ ಮತ್ತು ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಅಪಪ್ರಚಾರದ ವಿರುದ್ಧ ಕೆಫೆ ಆಡಳಿತ ಮಂಡಳಿ ಗರಂ
ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿಗಳ ಕುರಿತು ರಾಮೇಶ್ವರಂ ಕೆಫೆ ಸ್ಪಷ್ಟನೆ ನೀಡಿದೆ. 'ಕೆಲವು ವ್ಯಕ್ತಿಗಳು ಮತ್ತು ಸಾಮಾಜಿಕ ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಸತ್ಯವನ್ನು ಮರೆಮಾಚಿ, ಬ್ರ್ಯಾಂಡ್‌ನ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ. ಇಂತಹ ದಾರಿತಪ್ಪಿಸುವ ನಿರೂಪಣೆಗಳು ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡುತ್ತಿವೆ' ಎಂದು ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ನೈರ್ಮಲ್ಯದ ಬಗ್ಗೆ ಪರೀಕ್ಷಾ ವರದಿಗಳು ಸಕಾರಾತ್ಮಕ:
ರಾಮೇಶ್ವರಂ ಕೆಫೆಯು ತನ್ನ ಪ್ರಕಟಣೆಯಲ್ಲಿ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದೆ. ವಿಮಾನ ನಿಲ್ದಾಣದ ಆರೋಗ್ಯ ಸಂಸ್ಥೆ (GOI) ಮತ್ತು FSSAI ಇತ್ತೀಚೆಗೆ ನಡೆಸಿದ ತಪಾಸಣೆಗಳಲ್ಲಿ ಮಳಿಗೆಯ ನೈರ್ಮಲ್ಯ ಮತ್ತು ಆಹಾರದ ಗುಣಮಟ್ಟ ಅತ್ಯುತ್ತಮವಾಗಿದೆ ಎಂದು ರೇಟಿಂಗ್ ನೀಡಲಾಗಿದೆ. ನಮ್ಮ ಬ್ರ್ಯಾಂಡ್‌ನ ಎಲ್ಲಾ ಮಳಿಗೆಗಳಲ್ಲಿ ಕಟ್ಟುನಿಟ್ಟಾದ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಿದೆ. ನ್ಯಾಯಾಂಗ ಪ್ರಕ್ರಿಯೆಯನ್ನು ದುರ್ಬಲಗೊಳಿಸುವ ಅಥವಾ ಆಧಾರರಹಿತವಾಗಿ ಬ್ರ್ಯಾಂಡ್ ಅಪಖ್ಯಾತಿಗೊಳಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಪಾರದರ್ಶಕತೆಗೆ ಬದ್ಧ
ನಾವು ಕಾನೂನು ಪ್ರಕ್ರಿಯೆಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಸತ್ಯಕ್ಕೆ ಜಯ ಸಿಗಲಿದೆ ಎಂಬ ವಿಶ್ವಾಸ ನಮಗಿದೆ. ಸಾರ್ವಜನಿಕರು ಮತ್ತು ಮಾಧ್ಯಮಗಳು ಆನ್‌ಲೈನ್‌ನಲ್ಲಿ ಹರಿದಾಡುವ ಆಧಾರರಹಿತ ಸುದ್ದಿಗಳ ಬದಲಾಗಿ ಅಧಿಕೃತ ನ್ಯಾಯಾಲಯದ ದಾಖಲೆಗಳನ್ನು ಮಾತ್ರ ನಂಬಬೇಕು' ಎಂದು ಕೆಫೆ ಆಡಳಿತ ಮಂಡಳಿ ವಿನಂತಿಸಿದೆ. ಹೈಕೋರ್ಟ್ ನೀಡಿರುವ ಈ ತಡೆಯಾಜ್ಞೆಯು ರಾಮೇಶ್ವರಂ ಕೆಫೆಗೆ ದೊಡ್ಡ ಕಾನೂನು ಜಯ ತಂದುಕೊಟ್ಟಿದ್ದು, ಸುಳ್ಳು ದೂರುಗಳ ವಿರುದ್ಧದ ಹೋರಾಟಕ್ಕೆ ಬಲ ನೀಡಿದಂತಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


