ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಘೀ, ಚಿಕೂನ್‌ಗುನ್ಯಾಗೆ ಕಡಿವಾಣ ಹಾಕುವ ಉದ್ದೇಶದಿಂದ ಸೊಳ್ಳೆ ನಿರ್ಮೂಲನೆಗೆ ಇದೀಗ ಆರೋಗ್ಯ ಇಲಾಖೆ ಮುಂದಾಗಿದೆ. ಇದಕ್ಕಾಗಿ ನೀರಿನ ಮೂಲಗಳಲ್ಲೇ ಲಾರ್ವಾ ನಿರ್ಮೂಲನೆಗೆ 1500 ಸ್ವಯಂ ಸೇವಕರ ನೇಮಿಸಲು ಅನುಮೋದನೆ ನೀಡಿದೆ.

ಬೆಂಗಳೂರು : ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಘೀ, ಚಿಕೂನ್‌ಗುನ್ಯಾಗೆ ಕಡಿವಾಣ ಹಾಕುವ ಉದ್ದೇಶದಿಂದ ಸೊಳ್ಳೆ ನಿರ್ಮೂಲನೆಗೆ ಇದೀಗ ಆರೋಗ್ಯ ಇಲಾಖೆ ಮುಂದಾಗಿದೆ. ಇದಕ್ಕಾಗಿ ನೀರಿನ ಮೂಲಗಳಲ್ಲೇ ಲಾರ್ವಾ ನಿರ್ಮೂಲನೆಗೆ ರಾಜ್ಯಾದ್ಯಂತ 1500 ಸ್ವಯಂ ಸೇವಕರನ್ನು ನೇಮಿಸಿ ನಿತ್ಯ 400 ರು. ಕೂಲಿ ನೀಡಲು ಆರು ಕೋಟಿ ರು. ವೆಚ್ಚ ಸೇರಿ ರೋಗ ನಿಯಂತ್ರಣದ ವಿವಿಧ ಕ್ರಮಗಳಿಗಾಗಿ ಒಟ್ಟು 7.25 ಕೋಟಿ ರು. ವೆಚ್ಚ ಮಾಡುವ ಪ್ರಸ್ತಾಪಕ್ಕೆ ಇಲಾಖೆ ಅನುಮೋದನೆ ನೀಡಿದೆ.

ಈ ಯೋಜನೆಯಡಿ ಲಾರ್ವಾ ನಿರ್ಮೂಲನೆಗೆ 100 ದಿನಗಳ ಮಟ್ಟಿಗೆ 1,500 ಸ್ವಯಂ ಸೇವಕರ ನೇಮಕಕ್ಕೆ 6 ಕೋಟಿ ರು. ವೆಚ್ಚ ಮಾಡಲು ಅವಕಾಶ ನೀಡಲಾಗಿದೆ. ಎಲ್ಲ ಸ್ಥಳೀಯ ಸಂಸ್ಥೆಗಳು, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಸ್ವಯಂ ಸೇವಕರು ಪ್ರತಿ ದಿನ 400 ರು. ಕೂಲಿಯಂತೆ ಕೆಲಸ ಮಾಡಲಿದ್ದಾರೆ.

ರೋಗ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಪ್ರತಿ ಜಿಲ್ಲೆಗೆ ಒಬ್ಬರಂತೆ ಕೀಟ ಸಂಗ್ರಹಕಾರರನ್ನೂ ನೇಮಿಸಿಕೊಳ್ಳಲು ಸೂಚಿಸಲಾಗಿದೆ. ಕೀಟ ಸಂಗ್ರಹಕಾರರು (ಇನ್ಸೆಕ್ಟ್‌ ಕಲೆಕ್ಟರ್) ವಿವಿಧ ಪ್ರದೇಶಗಳಿಂದ ಕೀಟ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲು ಸಹಕರಿಸಲಿದ್ದಾರೆ.ಡೆಂಘೀ ಪರೀಕ್ಷೆಗೆ ಎಲಿಸಾ ಕಿಟ್‌, ಈಡಿಸ್‌ ಸೊಳ್ಳೆಯ ವೈರಾಣು ಪರೀಕ್ಷೆ, ಆರ್‌ಟಿ-ಪಿಸಿಆರ್‌ ಪರೀಕ್ಷೆ ಸೇರಿ ವಿವಿಧ ವೆಚ್ಚಗಳಿಗೆ ಸೇರಿ ಒಟ್ಟು 7.25 ಕೋಟಿ ರು. ವೆಚ್ಚ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಇಲಾಖೆ ಆದೇಶದಲ್ಲಿ ತಿಳಿಸಿದೆ.

  • ಲಾರ್ವಾ ನಿರ್ಮೂಲನೆಗೆ 100 ದಿನ 1500 ಜನರ ನೇಮಕ
  • ಡೆಂಘೀ, ಚಿಕೂನ್‌ಗುನ್ಯಾ ಹತ್ತಿಕ್ಕಲು ರಾಜ್ಯ ಸರ್ಕಾರ ನಿರ್ಧಾರ
  • -ನಿತ್ಯ 400 ರು. ವೇತನ- ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಘೀ, ಚಿಕೂನ್‌ಗುನ್ಯಾ ಕಾಯಿಲೆಗಳು. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಕ್ರಮ
  • - ನೀರಿನ ಮೂಲಗಳಲ್ಲೇ ಲಾರ್ವಾ ನಿರ್ಮೂಲನೆಗೆ ರಾಜ್ಯಾದ್ಯಂತ 1500 ಸ್ವಯಂ ಸೇವಕರ ನೇಮಕಕ್ಕೆ ನಿರ್ಧಾರ
  • - 100 ದಿನಗಳ ಅವಧಿಗೆ ನೇಮಕಗೊಳ್ಳಲಿರುವ ಈ ಸ್ವಯಂಸೇವಕರಿಗೆ ನಿತ್ಯ 400 ರು. ಪಾವತಿಗೆ ತೀರ್ಮಾನ
  • - ಇದಕ್ಕೆ 6 ಕೋಟಿ ರು. ವೆಚ್ಚ. ಇದಲ್ಲದೆ ರೋಗ ನಿಯಂತ್ರಣದ ವಿವಿಧ ಕ್ರಮಗಳಿಗೆ ಒಟ್ಟು 7.25 ಕೋಟಿ ರು. ವೆಚ್ಚ