ವಿನಾಶಕಾರಿ ತಂತ್ರಜ್ಞಾನ ರೂಪಿಸುವಲ್ಲಿ ಸದಾ ಮುಂದಿರುವ ಚೀನಾ ಇದೀಗ ಸೊಳ್ಳೆ ಗಾತ್ರದ ರೊಬೋಟ್ ಒಂದನ್ನು ರೂಪಿಸಿದೆ. ಇದು ಎಷ್ಟು ಖತರ್ನಾಕ್ ಇದೆ ಎನ್ನುವ ವಿಷಯ ಇಲ್ಲಿದೆ ನೋಡಿ. ಇದರ ವಿಡಿಯೋ ಕೂಡ ವೈರಲ್ ಆಗಿದೆ.
ಖತರ್ನಾಕ್ ಬುದ್ಧಿಯ ತಂತ್ರಜ್ಞಾನ ತಯಾರಿಸುವುದಲ್ಲಿ ಚೀನಾ ಸದಾ ಮುಂದು. ಆದರೆ ಹೇಳಿ-ಕೇಳಿ ಚೀನಾದ ಪ್ರಾಡಕ್ಟ್ ಅದು. ಆಪರೇಷನ್ ಸಿಂದೂರದ ಸಮಯದಲ್ಲಿಯೂ ಪಾಕಿಸ್ತಾನಕ್ಕೆ ಕ್ಷಿಪಣಿ ಕೊಟ್ಟು ಮಂಗಳಾರತಿ ಮಾಡಿಸಿಕೊಂಡಿತ್ತು ಚೀನಾ. ಹಾಗೆಂದು ಹೊಸ ಹೊಸ ಆವಿಷ್ಕಾರವನ್ನಂತೂ ನಿಲ್ಲಿಸುವುದೇ ಇಲ್ಲ ಈ ಡ್ರ್ಯಾಗನ್ ದೇಶ. ಇದೀಗ ಒಂದು ಸೊಳ್ಳೆಯಂಥ ಹಾರುವ ರೋಬೋಟ್ ಅನ್ನು ಸೃಷ್ಟಿಮಾಡಿದೆ ಚೀನಾ. ಇದು ರಹಸ್ಯ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಕಣ್ಗಾವಲು, ಸೈಬರ್ ಅಪರಾಧ ಮತ್ತು ಜೈವಿಕ ಯುದ್ಧದಲ್ಲಿಯೂ ಸಹ ಬಳಸುವಂಥದ್ದಾಗಿದೆ.
ಚೀನಾಗೆ ಸದಾ ಭಾರತದ ಮೇಲೆ ಕಣ್ಣು. ಆದ್ದರಿಂದ ಇಲ್ಲಿಯ ರಕ್ಷಣಾ ವಿಷಯಗಳನ್ನು ತಿಳಿದುಕೊಳ್ಳಲು ಈ ಸೊಳ್ಳೆಯನ್ನು ಬಿಡುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಚೀನಾದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾಲಯ (NUDT) ಅಭಿವೃದ್ಧಿಪಡಿಸಿದ, ಕೀಟ ಗಾತ್ರದ 0.6 ಸೆಂಟಿ ಮೀಟರ್ ಇರುವ ಡ್ರೋನ್ ಇತ್ತೀಚೆಗೆ ದೇಶದ ಅಧಿಕೃತ ಮಿಲಿಟರಿ ಚಾನೆಲ್ CCTV 7 ನಲ್ಲಿ ಕಾಣಿಸಿಕೊಂಡಿದೆ. ಇದನ್ನು ನೋಡಿದರೆ, ಮೊದಲ ನೋಟದಲ್ಲಿ, ಕಪ್ಪು ಕೋಲಿನಂತಹ ದೇಹ, ಎಲೆಗಳ ಆಕಾರದಲ್ಲಿರುವ ಸೂಕ್ಷ್ಮ ಹಳದಿ ರೆಕ್ಕೆಗಳು ಮತ್ತು ಮೂರು ತಂತಿಯ ಕಾಲುಗಳನ್ನು ಹೊಂದಿರುವ ನಿರುಪದ್ರವ ಕೀಟದಂತೆ ಕಾಣುತ್ತದೆ. ಆದಾಗ್ಯೂ, ಅದರ ಸಣ್ಣ ಚೌಕಟ್ಟಿನ ಹಿಂದೆ ಗುಪ್ತಚರ ಸಂಗ್ರಹಣೆ ಮತ್ತು ರಹಸ್ಯ ಯುದ್ಧಭೂಮಿ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಮಿಲಿಟರಿ ಎಂಜಿನಿಯರಿಂಗ್ ಇರುವುದು ಮಾತ್ರ ನಂಬಲಸಾಧ್ಯವಾದಂಥದ್ದು.
ಇಲ್ಲಿಯ ಟಿವಿಯಲ್ಲಿ ನಡೆದ ಪ್ರದರ್ಶನದಲ್ಲಿ, NUDT ವಿದ್ಯಾರ್ಥಿ ಲಿಯಾಂಗ್ ಹೆಕ್ಸಿಯಾಂಗ್ ರೋಬೋಟ್ ಅನ್ನು ಎತ್ತಿ ಹಿಡಿದು, "ಇಲ್ಲಿ ನನ್ನ ಕೈಯಲ್ಲಿ ಸೊಳ್ಳೆಯಂತಹ ರೀತಿಯ ರೋಬೋಟ್ ಇದೆ. ಈ ರೀತಿಯ ಮಿನಿಯೇಚರ್ ಬಯೋನಿಕ್ ರೋಬೋಟ್‌ಗಳು ಯುದ್ಧಭೂಮಿಯಲ್ಲಿ ಮಾಹಿತಿ ವಿಚಕ್ಷಣ ಮತ್ತು ವಿಶೇಷ ಕಾರ್ಯಾಚರಣೆಗಳಿಗೆ ವಿಶೇಷವಾಗಿ ಸೂಕ್ತವಾಗಿವೆ ಎಂದು ಹೇಳಿದ್ದಾನೆ. ಇದನ್ನು ನೆರೆಯ ದೇಶಗಳ ವಿಷಯ ಸಂಗ್ರಹಕ್ಕೂ ತಕ್ಕನಾಗಿದೆ ಎಂದೂ ಹೇಳಿರುವುದು ತಿಳಿದಿದೆ. ಇದನ್ನು ರಾಡಾರ್ ಅಡಿಯಲ್ಲಿ ಹಾರುವಂತೆ ನಿರ್ಮಿಸಲಾಗಿದೆ. ಈ ಸಾಧನವನ್ನು ರಹಸ್ಯಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಇದು ನೈಸರ್ಗಿಕ ಪರಿಸರದಲ್ಲಿ ಬೆರೆಯುವಷ್ಟು ಚಿಕ್ಕದಾಗಿದೆ ಮತ್ತು ಸಾಂಪ್ರದಾಯಿಕ ಭದ್ರತಾ ವ್ಯವಸ್ಥೆಗಳಿಂದ ಪತ್ತೆಹಚ್ಚಲು ಕಷ್ಟ.
ಚೀನೀ ವಿಜ್ಞಾನಿಗಳು ಸಂವಹನ ಗೇರ್, ಸಂವೇದಕಗಳು, ವಿದ್ಯುತ್ ಘಟಕಗಳು ಮತ್ತು ನಿಯಂತ್ರಣ ಎಲೆಕ್ಟ್ರಾನಿಕ್ಸ್‌ಗಳನ್ನು ಅದರ ಕೀಟ ಗಾತ್ರದ ದೇಹಕ್ಕೆ ತುಂಬಿಸಿದ್ದಾರೆ. ಡ್ರೋನ್‌ನ ನಾಲ್ಕು ರೆಕ್ಕೆಗಳ ಆವೃತ್ತಿಯನ್ನು ಸ್ಮಾರ್ಟ್‌ಫೋನ್ ಮೂಲಕ ನಿಯಂತ್ರಿಸಬಹುದು ಮತ್ತು ಮಾನವನಂತಹ ಯಂತ್ರಗಳು ಮತ್ತು ಕೀಟ-ಮಾಪಕ ಫ್ಲೈಯರ್‌ಗಳು ಸೇರಿದಂತೆ ಜೈವಿಕ-ಪ್ರೇರಿತ ರೊಬೊಟಿಕ್ಸ್‌ನಲ್ಲಿ NUDT ಯ ವ್ಯಾಪಕ ಕೆಲಸದ ಭಾಗವಾಗಿದೆ.ಆದರೆ ಇದೀಗ ಜಾಗತಿಕ ಕಳವಳವನ್ನು ಹುಟ್ಟುಹಾಕಿದೆ. ಹ್ಯಾಕಿಂಗ್, ಬೇಹುಗಾರಿಕೆ ಮತ್ತು ಜೈವಿಕ ಯುದ್ಧದ ಅಪಾಯಗಳ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ರಕ್ಷಣಾ ತಜ್ಞ ತಿಮೋತಿ ಹೀತ್, ಅಂತಹ ಡ್ರೋನ್‌ಗಳನ್ನು ಅಪರಾಧಿಗಳು ಪಾಸ್‌ವರ್ಡ್‌ಗಳನ್ನು ಅಥವಾ ಸೂಕ್ಷ್ಮ ಡೇಟಾವನ್ನು ಕದಿಯಲು ಬಳಸಬಹುದು ಎಂದು ಹೇಳಿದ್ದಾರೆ. ಈ ಹಿಂದೆ ಗೂಗಲ್‌ನೊಂದಿಗೆ ಕೆಲಸ ಮಾಡಿದ್ದ ಭವಿಷ್ಯಶಾಸ್ತ್ರಜ್ಞ ಟ್ರೇಸಿ ಫಾಲೋಸ್, ಇದು ಭವಿಷ್ಯದಲ್ಲಿ ಮಾರಕ ವೈರಸ್‌ಗಳು ಅಥವಾ ಇತರ ಹಾನಿಕಾರಕ ವಸ್ತುಗಳನ್ನು ಸಾಗಿಸಲು ಬಳಕೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ! ಈ ಯಂತ್ರಗಳನ್ನು ಯುದ್ಧ ವಲಯಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದರೂ, ಅವುಗಳ ಅನ್ವಯಿಕೆಗಳು ಔಷಧ, ಕೃಷಿ ಮತ್ತು ವಿಪತ್ತು ಪರಿಹಾರಕ್ಕೂ ವಿಸ್ತರಿಸಬಹುದು ಎಂದು ತಜ್ಞರು ಹೇಳುತ್ತಾರೆ.
