ಎನ್‌.ಎಲ್‌.ಶಿವಮಾದು

ಬೆಂಗಳೂರು(ಡಿ.13): ರಾಜ್ಯದಲ್ಲಿ ಶಬ್ದ ಮಾಲಿನ್ಯ ತಡೆಯಲು ಹಾಗೂ ನಿಶ್ಶಬ್ದ ವಲಯಗಳನ್ನು ಗುರುತಿಸಲು ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ ಚಾಟಿ ಬೀಸಿದ್ದರಿಂದ ಎಚ್ಚೆತ್ತುಕೊಂಡಿರುವ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯದ ವಿವಿಧೆಡೆ ಶಬ್ದ ಮಾಲಿನ್ಯ ಪತ್ತೆ ಹಚ್ಚುವ ಮಾಪಕಗಳನ್ನು ಅಳವಡಿಸಲು ಮುಂದಾಗಿದೆ.

ರಾಜ್ಯಾದ್ಯಂತ ಇಲ್ಲಿಯವರೆಗೂ 233 ಶಬ್ದ ಮಾಲಿನ್ಯ ಉಪಕರಣಗಳು ಮಾತ್ರ ಅಳವಡಿಸಲಾಗಿತ್ತು. ಹೈಕೋರ್ಟ್‌ ನಿರ್ದೇಶನದ ಬಳಿಕ 108 ಉಪಕರಣಗಳನ್ನು ಪೊಲೀಸರಿಗೆ ವಿತರಿಸಲಾಗಿದೆ. ಇದರೊಂದಿಗೆ ಒಟ್ಟು ಶಬ್ದಮಾಲಿನ್ಯ ಉಪಕರಣಗಳ ಸಂಖ್ಯೆ 341ಕ್ಕೆ ಏರಿದೆ.

ಬಳ್ಳಾರಿ: ಭಾರೀ ಧೂಳು, ಸ್ಪಾಂಜ್ ಐರನ್ ಕಂಪನಿಗೆ ಮುತ್ತಿಗೆ ಹಾಕಲು ಯತ್ನ

ಈ ಮಾಪಕಗಳನ್ನು ಹೆಚ್ಚು ಶಬ್ದ ಮಾಡುವ ಸ್ಥಳಗಳಿಂದ ಸಾರ್ವಜನಿಕರಿಂದ ದೂರು ಬರುವ ಸ್ಥಳಗಳಲ್ಲಿ, ದೇವಸ್ಥಾನ, ಮಸೀದಿ, ಚಚ್‌ರ್‍, ರಾಜಕೀಯ ಸಮಾವೇಶ, ಧಾರ್ಮಿಕ ಸಮಾರಂಭಗಳಲ್ಲಿ ಧ್ವನಿವರ್ಧಕ ಅಳವಡಿಸಿ ಶಬ್ದ ಮಾಡುವುದು ಹಾಗೂ ಅತಿ ಹೆಚ್ಚು ವಾಹನಗಳು ಸಂಚರಿಸುವ ಸಿಗ್ನಲ್‌ಗಳಲ್ಲಿ ಅಳವಡಿಸಿ ಯಾವ ಪ್ರಮಾಣದಲ್ಲಿ ಶಬ್ದ ಮಾಲಿನ್ಯವಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನವನ್ನು ಮಾಲಿನ್ಯ ನಿಯಂತ್ರಣ ಮಂಡಳಿಯು (ಕೆಎಸ್‌ಪಿಸಿಬಿ) ಪೊಲೀಸ್‌ ಇಲಾಖೆಯ ಜತೆಗೂಡಿ ಮಾಡಲಿದೆ ಎಂದು ಮಂಡಳಿ ಅಧ್ಯಕ್ಷ ಶ್ರೀನಿವಾಸುಲು ತಿಳಿಸಿದ್ದಾರೆ.

ಅಲ್ಲದೆ, ಹೆಚ್ಚುವರಿಯಾಗಿ 68 ಉಪಕರಣಗಳನ್ನು ಸದ್ಯದಲ್ಲಿಯೇ ಖರೀದಿ ಮಾಡಲಾಗುತ್ತದೆ. ಅಗತ್ಯವಿದ್ದರೆ ಮತ್ತಷ್ಟುಉಪಕರಣಗಳನ್ನು ಸಹ ನೀಡಲಾಗುವುದು. ನ್ಯಾಯಾಲಯದ ನಿರ್ದೇಶನದಂತೆ ರಾಜ್ಯಾದ್ಯಂತ ಶಬ್ದ ಮಾಲಿನ್ಯ ಪತ್ತೆ ಹಚ್ಚುವ ಉಪಕರಣಗಳನ್ನು ಅಳವಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

'ಕೆಟ್ಟ ಚಾಳಿ' ಗಾಳಿ ವಿಷವಾಗಿದ್ದರೂ ಮತ್ತೆ ಪಟಾಕಿ ಸುಡುವರಿಗೆ ಏನ್ ಹೇಳ್ಬೇಕು?

ಏನಿದು ಪ್ರಕರಣ?:

ಬೆಂಗಳೂರಿನಲ್ಲಿ ಶಬ್ದ ಮಾಲಿನ್ಯ ತಡೆಗೆ ಸರ್ಕಾರ, ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಮಧ್ಯರಾತ್ರಿಯೂ ಪಬ್‌, ಬಾರ್‌ಗಳಿಂದ ಜೋರಾಗಿ ಸಂಗೀತ ಕೇಳುತ್ತದೆ ಎಂದು ಆರೋಪಿಸಿ ಕೆಲವರು ಹೈಕೋರ್‌್ಟಗೆ ಪಿಐಎಲ್‌ ಸಲ್ಲಿಸಿದ್ದರು. ಇದರ ವಿಚಾರಣ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ, ನ್ಯಾ

ಪ್ರದೀಪ್‌ ಸಿಂಗ್‌ ಯೆರೂರ್‌ ಪೀಠ, ರಾಜ್ಯಾದ್ಯಂತ ಶಬ್ದ ಮಾಲಿನ್ಯ ತಡೆಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿತ್ತು. ಅದರಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಪೊಲೀಸ್‌ ಇಲಾಖೆ ಸಹಕಾರದೊಂದಿಗೆ ಶಬ್ದ ಮಾಲಿನ್ಯ ಉಪಕರಣ ಅಳವಡಿಕೆಗೆ ಮುಂದಾಗಿದೆ.

ಜೈಲು ಶಿಕ್ಷೆ

ರಾಜ್ಯದ ಎಲ್ಲ ಶಾಲಾ-ಕಾಲೇಜು, ಧಾರ್ಮಿಕ ಕೇಂದ್ರ, ಆಸ್ಪತ್ರೆ, ಸರ್ಕಾರಿ ಕಚೇರಿಗಳು ಮತ್ತು ಕೋರ್ಟ್‌ ಸುತ್ತಮುತ್ತ 100 ಮೀಟರ್‌ ವ್ಯಾಪ್ತಿ ’ನಿಶ್ಶಬ್ದ ವಲಯ’ ಎಂದು ಘೋಷಿಸಿದೆ. ಈ ವಲಯದೊಳಗೆ ಕರ್ಕಶ ಹಾರ್ನ್‌, ಪಟಾಕಿ ಸಿಡಿಸುವುದು ಸೇರಿದಂತೆ ಶಬ್ದ ಮಾಲಿನ್ಯ ಮಾಡಿದವರು ಒಂದು ಸಾವಿರ ರು. ದಂಡದ ಜತೆಗೆ ಮೂರು ತಿಂಗಳವರೆಗೆ ಜೈಲು ಶಿಕ್ಷೆಗೂ ಗುರಿಯಾಗಬೇಕಾಗುತ್ತದೆ. ಇದೇ ರೀತಿಯಲ್ಲಿ ಬೇರೆ ವಲಯಗಳಲ್ಲಿಯೂ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುತ್ತದೆ.

'ಈ ಅವಧಿಯಲ್ಲಿ ಮಾತ್ರ ಪಟಾಕಿ ಸಿಡಿಸಬೇಕು, ಆದೇಶ ಉಲ್ಲಂಘಿಸಿದ್ರೆ ಕ್ರಮ ಫಿಕ್ಸ್‌'

ಶಬ್ದದ ಮಿತಿ ಎಷ್ಟು?

ಸೂಕ್ಷ್ಮ ವಲಯಗಳಲ್ಲಿ 50 ಡೆಸಿಬಲ್‌ಗಿಂತ ಹೆಚ್ಚಿರಬಾರದು. ವಸತಿ ಪ್ರದೇಶಗಳಲ್ಲಿ 55, ವಾಣಿಜ್ಯ ಪ್ರದೇಶಗಳಲ್ಲಿ 65 ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ 75 ಡೆಸಿಬಲ್‌ಗಿಂತ ಹೆಚ್ಚಿನ ಪ್ರಮಾಣದ ಶಬ್ದ ಮಾಡಬಾರದು ಎಂಬ ನಿಯಮವಿದೆ.

ರಾಜ್ಯಾದ್ಯಂತ ಶಬ್ದ ಮಾಲಿನ್ಯ ಪತ್ತೆ ಹಚ್ಚುವ ಮಾಪಕಗಳನ್ನು ಅಳವಡಿಸಲಾಗುತ್ತಿದೆ. ಪೊಲೀಸರಿಗೆ ಇತ್ತೀಚೆಗೆ ವಿತರಿಸಿರುವ 108 ಉಪಕರಣ ಸೇರಿ ಇಲ್ಲಿಯವರೆಗೂ 341 ಮಾಪಕಗಳನ್ನು ಅಳವಡಿಸಿದ್ದು, ನಿಯಮ ಉಲ್ಲಂಘಿಸಿ ಶಬ್ದ ಮಾಲಿನ್ಯ ಉಂಟು ಮಾಡುವವರ ಮೇಲೆ ಕ್ರಮ ಜರುಗಿಸಲಾಗುವುದು.

- ಶ್ರೀನಿವಾಸುಲು, ಸದಸ್ಯ ಕಾರ್ಯದರ್ಶಿ, ಕೆಎಸ್‌ಪಿಸಿಬಿ