ಬೆಂಗಳೂರು(ನ.14): ಕೊರೋನಾ ಹಿನ್ನೆಲೆಯಲ್ಲಿ ಪಟಾಕಿಯ ಬಾಕ್ಸ್‌ ಮೇಲೆ ‘ಸಿಎಸ್‌ಐ ಆರ್‌-ನೀರಿ’ ಮತ್ತು ‘ಪಿಇಎಸ್‌ಒದ ಲೋಗೊ’ ಮತ್ತು ‘ಕ್ಯೂಆರ್‌ ಕೋಡ್‌’ ಇರುವ ‘ಹಸಿರು ಪಟಾಕಿ’ಗಳನ್ನು ಮಾತ್ರ ಮಾರಾಟ ಹಾಗೂ ಬಳಸಬೇಕು, ಈ ಸಂಬಂಧ ಈಗಾಗಲೇ ಹೊರಡಿಸಿರುವ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರ ಆದೇಶಿಸಿದೆ. ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಬೇಕು ಎಂಬ ಷರತ್ತು ವಿಧಿಸಲಾಗಿದೆ.

ಹಸಿರು ಪಟಾಕಿ ಹೆಚ್ಚು ಮಾಲಿನ್ಯ, ಶಬ್ದದ ಪ್ರಮಾಣ ಕಡಿಮೆ ಇರುತ್ತದೆ ಎಂಬುದನ್ನು ಆದೇಶದಲ್ಲಿ ವಿವರಿಸಲಾಗಿದೆ. ಕೌನ್ಸಿಲ್‌ ಅಫ್‌ ಸೈಟಿಂಫಿಕ್‌ ಅಂಡ್‌ ಇಂಡಸ್ಟ್ರಿಯಲ್‌ ರಿಸಚ್‌ರ್‍ - ನ್ಯಾಷನಲ್‌ ಎನ್ವರ್‌ ಮೆಂಟಲ್‌ ಅಂಡ್‌ ಇಂಜಿನಿಯರಿಂಗ್‌ ರಿಸಚ್‌ರ್‍ ಇನ್ಸಿಟ್ಯೂಟ್‌ (ನೀರಿ) ಮಾರ್ಗದರ್ಶಿ ಸೂತ್ರದ ಅನ್ವಯ ಹಸಿರು ಪಟಾಕಿ ತಯಾರಾಗಬೇಕು. ಇದಕ್ಕೆ ಪೆಟ್ರೋಲಿಯಂ ಅಂಡ್‌ ಎಕ್ಸ್‌ಪ್ಲೊಸೀವ್‌ ಸೇಫ್ಟಿಸಂಸ್ಥೆ ಪ್ರಮಾಣೀಕರಿಸಿರಬೇಕು. ಹಸಿರು ಪಟಾಕಿಯು ಸುರ್‌ಸುರ್‌ ಬತ್ತಿ, ಹೂ ಕುಂಡ ಇತ್ಯಾದಿ ರೂಪದಲ್ಲಿ ಲಭ್ಯವಿದೆ. ಇದು ವಾಯು ಮಾಲಿನ್ಯ ಸೃಷ್ಟಿಸುವುದಿಲ್ಲ ಎಂದು ಸರ್ಕಾರ ತನ್ನ ಆದೇಶದಲ್ಲಿ ಹೇಳಿದೆ.

ದೀಪಾವಳಿ ಸಂದರ್ಭದಲ್ಲಿ ‘ಹಸಿರು ಪಟಾಕಿ’ಗಳನ್ನು ಹೊರತುಪಡಿಸಿ ಉಳಿದ ಯಾವುದೇ ಪಟಾಕಿಗಳನ್ನು ಸಿಡಿಸಬಾರದು ಮತ್ತು ಮಾರಾಟ ಮಳಿಗೆಗಳಲ್ಲಿಯೂ ಹಸಿರು ಪಟಾಕಿ ಹೊರತುಪಡಿಸಿ ಬೇರೆ ಪಟಾಕಿಗಳನ್ನು ಮಾರಾಟ ಮಾಡದಂತೆ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಹಾಗೆಯೇ ಪಟಾಕಿ ಮಾರಾಟ ಮತ್ತು ಬಳಕೆಯ ಬಗ್ಗೆ ವಿವರವಾದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

'ಹಸಿರು ಪಟಾಕಿಯಿಂದಲೂ ಕಣ್ಣಿಗೆ ಹಾನಿ'

ಕಠಿಣ ಎಚ್ಚರಿಕೆ ನೀಡಿದ ಮಂಡಳಿ:

ಇದೇ ವೇಳೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಪಟಾಕಿ ನಿಯಮವನ್ನು ಉಲ್ಲಂಘಿಸುವವರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದೆ. ಹಸಿರು ಪಟಾಕಿಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ರಾಸಾಯನಿಕಗಳಾದ ಆಲ್ಯೂಮಿನಿಯಂ, ಬೇರಿಯಂ, ಪೊಟಾಸಿಯಂ ನೈಟ್ರೇಟ್‌ ಮತ್ತು ಕಾರ್ಬನ್‌ ಅಂಶಗಳು ಕಡಿಮೆ ಪ್ರಮಾಣದಲ್ಲಿವೆ. ಅನ್ಯ ಪಟಾಕಿಗಳಿಂದ ಶೇ.30ರಷ್ಟು ಕಡಿಮೆ ಕಣಗಳನ್ನು ಹೊರ ಹಾಕುತ್ತವೆ. ಶಬ್ದ ಕೂಡ 125 ಡೆಸಿಬಲ್‌ಗಳಿಗಿಂತ ಕಡಿಮೆ ಪ್ರಮಾಣದಲ್ಲಿರುತ್ತದೆ. ರಾಜ್ಯಾದ್ಯಂತ ಹಬ್ಬದ ಸಮಯದಲ್ಲಿ ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಬೇಕು. ಪಟಾಕಿ ಮಳಿಗೆಗಳಲ್ಲಿ ಸರಾಗವಾಗಿ ಗಾಳಿಯಾಡುವಂತಿರಬೇಕು. ಒಂದು ಮಾರಾಟ ಮಳಿಗೆಯಿಂದ ಮತ್ತೊಂದು ಮಳಿಗೆಗೆ ಕನಿಷ್ಠ 6 ಅಡಿ ಅಂತರವಿರಬೇಕು. ಮಾರಾಟ ಮಳಿಗೆ ಪರವಾನಗಿ ಪ್ರತಿಯು ಗ್ರಾಹಕರಿಗೆ ಕಾಣುವಂತೆ ಪ್ರದರ್ಶಿಸುವುದು. ಪಟಾಕಿ ಮಾರಾಟ ಮಳಿಗೆಗಳ ಸುತ್ತ ಪ್ರತಿ ದಿನ ಸ್ಯಾನಿಟೈಸೇಷನ್‌ ಮಾಡುವುದು ಹಾಗೂ ಪಟಾಕಿಗಳ ಖರೀದಿಗೆ ಬರುವ ಸಾರ್ವಜನಿಕರಿಗೆ ಸ್ಯಾನಿಟೈಸರ್‌ ಹಾಗೂ ಥರ್ಮಲ್‌ ಸ್ಕಾ್ಯನಿಂಗ್‌ ವ್ಯವಸ್ಥೆ ಕಲ್ಪಿಸಬೇಕು. ಸಾಮಾಜಿಕ ಅಂತರ ಮತ್ತು ಮಾಸ್ಕ್‌ ಧರಿಸುವಂತೆ ನೋಡಿಕೊಳ್ಳಬೇಕು. ಜನದಟ್ಟಣೆ ಉಂಟಾಗದಂತೆ ಜಾಗ್ರತೆ ವಹಿಸಬೇಕು.

ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆ, ಮಹಾನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ದಳ, ಜಿಲ್ಲಾಡಳಿತ ಹಾಗೂ ಇನ್ನಿತರ ಪಾಲಿಕೆ/ಪ್ರಾಧಿಕಾರಗಳಿಂದ ಹೊರಡಿಸಿದ ಸೂಚನೆಗಳನ್ನು ಸಹ ಕಡ್ಡಾಯವಾಗಿ ಪಾಲಿಸಬೇಕು. ನಿಯಮಗಳನ್ನು ಉಲ್ಲಂಘಿಸುವವರಿಗೆ ಶಿಸ್ತುಕ್ರಮ ಹಾಗೂ ಕಾನೂನು ಕ್ರಮ ಜರುಗಿಸಬೇಕು ಎಂದು ಈಗಾಗಲೇ ಆದೇಶ ಹೊರಡಿಸಲಾಗಿದೆ.