Karnataka 2nd PUC exam funds ದ್ವಿತೀಯ ಪಿಯುಸಿ ಪರೀಕ್ಷಾ ವೆಚ್ಚಗಳಿಗಾಗಿ ರಾಜ್ಯ ಸರ್ಕಾರ 81.20 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಅಲ್ಲದೆ, ಪ್ರೌಢಶಾಲಾ ಶಿಕ್ಷಕರನ್ನು ಪಿಯು ಕಾಲೇಜು ಉಪನ್ಯಾಸಕರನ್ನಾಗಿ ಬಡ್ತಿ ನೀಡುವ ಅರ್ಹತಾ ಪರೀಕ್ಷೆಯನ್ನು ಮೇ 26 ರಿಂದ ನಡೆಸಲು ತೀರ್ಮಾನಿಸಲಾಗಿದೆ.

ಬೆಂಗಳೂರು (ಮೇ.7): ಕಳೆದ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷಾ ಸಂಬಂಧಿತ ಎಲ್ಲ ವೆಚ್ಚಗಳ ಪಾವತಿಗಾಗಿ ರಾಜ್ಯ ಸರ್ಕಾರ ಬುಧವಾರ ಒಂದೇ ಕಂತಿನಲ್ಲಿ 81.20 ಕೋಟಿ ರು. ಅನುದಾನ ಬಿಡುಗಡೆಗೊಳಿಸಿದೆ. ಬಜೆಟ್‌ನಲ್ಲಿ 2026-27ನೇ ಸಾಲಿನ ಪದವಿ ಪೂರ್ವ ಪರೀಕ್ಷಾ ಕಾರ್ಯಗಳ ವೇತನೇತರ ವೆಚ್ಚಗಳಿಗಾಗಿ 101.50 ಕೋಟಿ ರು. ನಿಗದಿ ಮಾಡಲಾಗಿತ್ತು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷರ ಪ್ರಸ್ತಾವನೆ ಮೇರೆಗೆ ರಾಜ್ಯ ಸರ್ಕಾರ ಈ 101.50 ಕೋಟಿ ರು. ಅನುದಾನದ ಪೈಕಿ ಪೂರಕ ವೆಚ್ಚಕ್ಕೆ 30.40 ಕೋಟಿ ರು. ಪ್ರಯಾಣ ವೆಚ್ಚಕ್ಕೆ 24.80 ಕೋಟಿ ರು. ರಹಸ್ಯ ಸೇವಾ ವೆಚ್ಚಕ್ಕೆ 15.20 ಕೋಟಿ ರು. ಸಾಮಗ್ರಿ ಮತ್ತು ಸರಬರಾಜಿಗೆ 10.80 ಕೋಟಿ ರು. ಸೇರಿ ಒಟ್ಟು 81.20 ಕೋಟಿ ರು. ಬಿಡುಗಡೆಗೊಳಿಸಿದೆ.

Add Asianetnews Kannada as a Preferred SourcegooglePreferred

ದ್ವಿತೀಯ ಪಿಯುಸಿ ಪರೀಕ್ಷಾ ಕಾರ್ಯ ಮತ್ತು ಮೌಲ್ಯಮಾಪನ ಕಾರ್ಯಗಳಿಗೆ ಸಂಬಂಧಿಸಿದ ಎಲ್ಲ ಸಿಬ್ಬಂದಿ, ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಸಂಭಾವನೆ, ಸಾರಿಗೆ ಭತ್ಯೆ ಹಾಗೂ ದಿನ ಭತ್ಯೆಗಳನ್ನು ನೇರ ನಗದು ವರ್ಗಾವಣೆ(ಡಿಬಿಟಿ) ಮುಖಾತರವೇ ಪಾವತಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪ್ರೌಢಶಾಲಾ ಶಿಕ್ಷಕರ ಬಡ್ತಿಗೆ 26ರಿಂದ ಅರ್ಹತಾ ಪರೀಕ್ಷೆ

ಬೆಂಗಳೂರು: ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕ ವೃಂದದಿಂದ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕ ವೃಂದಕ್ಕೆ ಬಡ್ತಿ ನೀಡುವ ಅರ್ಹತಾ ಪರೀಕ್ಷೆಯನ್ನು ಮೇ 26ರಿಂದ 29ರವರೆಗೆ ನಡೆಸಲು ತೀರ್ಮಾನಿಸಿರುವುದಾಗಿ ಶಾಲಾ ಶಿಕ್ಷಣ ಆಯುಕ್ತರು ತಿಳಿಸಿದ್ದಾರೆ. ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಮತ್ತು ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಎರಡು ಹಂತದಲ್ಲಿ ಪರೀಕ್ಷೆಗಳು ನಡೆಯಲಿವೆ.

ಮೇ 26ರಂದು ಬೆಳಗ್ಗೆ ಕನ್ನಡ, ಉರ್ದು, ಜೀವಶಾಸ್ತ್ರ ಮತ್ತು ಗಣಿತ, ಮಧ್ಯಾಹ್ನ ಇಂಗ್ಲೀಷ್ ಮತ್ತು ಸಂಸ್ಕೃತ, ಮೇ 27ರಂದು ಬೆಳಗ್ಗೆ ಇತಿಹಾಸ, ಮಧ್ಯಾಹ್ನ ಹಿಂದಿ, ಮೇ 28ರಂದು ಬೆಳಗ್ಗೆ ಅರ್ಥಶಾಸ್ತ್ರ, ಮಧ್ಯಾಹ್ನ ರಾಜಕೀಯ ಶಾಸ್ತ್ರ, ಮೇ 29 ರಂದು ಬೆಳಗ್ಗೆ ಸಮಾಜಶಾಸ್ತ್ರ, ನಂತರ ಭೂಗೋಳಶಾಸ್ತ್ರ ಪರೀಕ್ಷೆ ನಡೆಯಲಿದೆ. ಅರ್ಹತಾ ಪರೀಕ್ಷೆಯನ್ನು ಈ ಹಿಂದೆಯೇ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಜನಗಣತಿಯ ಕಾರ್ಯದಲ್ಲಿ ಶಿಕ್ಷಕರು ತೊಡಗಿದ್ದರಿಂದ ಹೊಸ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.