ಕಾಂಗ್ರೆಸ್ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಪೂರೈಸದೆ, ಫಲಾನುಭವಿಗಳಿಗೆ ಹಣ ತಲುಪದೆ ಇದ್ದರೂ, ಗ್ಯಾರಂಟಿ ಅನುಷ್ಠಾನ ಸಮಿತಿಯ ಕಾರ್ಯಕರ್ತರಿಗೆ 7.65 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಹಣವನ್ನು ಸಭಾ ಭತ್ಯೆ, ಗೌರವಧನ ಮುಂತಾದವುಗಳಿಗೆ ಬಳಸಲಾಗುವುದು ಎಂದು ಹೇಳಲಾಗಿದೆ.

ಬೆಂಗಳೂರು (ಮೇ.31): ಪಂಚ ಗ್ಯಾರಂಟಿ ಮೇಲೆ ರಾಜ್ಯದಲ್ಲಿ ಅಧಿಕಾರ ಹಿಡಿದುಕೊಂಡಿರುವ ಕಾಂಗ್ರೆಸ್‌ ಸರಿಯಾಗಿ ಎರಡು ವರ್ಷವೂ ಅದನ್ನೂ ಪೂರೈಸಲು ಸಾಧ್ಯವಾಗಿಲ್ಲ. ಗೃಹಲಕ್ಷ್ಮೀಯ ಹಣ ಪ್ರತಿ ತಿಂಗಳು ಮಹಿಳೆಯರ ಖಾತೆಗೆ ಜಮೆ ಆಗುತ್ತಿಲ್ಲ. ಶಕ್ತಿ ಯೋಜನೆಯ ಅಧ್ವಾನವನ್ನು ಜನರೇ ನೋಡುತ್ತಿದ್ದಾರೆ. ಇನ್ನು ಯುವನಿಧಿ ಎಷ್ಟು ಸಕ್ಸಸ್‌ ಅನ್ನೋದರ ಬಗ್ಗೆ ಸರ್ಕಾರವೇ ಮಾತನಾಡುತ್ತಿಲ್ಲ. ಇನ್ನು ಅನ್ನಭಾಗ್ಯದ ಲೋಪದೋಷಗಳನ್ನು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಗೃಹಜ್ಯೋತಿಯ ಸರಾಸರಿಯನ್ನು 2ನೇ ವರ್ಷ ಇನ್ನೂ ಪರಿಷ್ಕರಣೆ ಮಾಡಿಲ್ಲ.

ಇಷ್ಟೆಲ್ಲಾ ಸಮಸ್ಯೆಗಳು ಗ್ಯಾರಂಟಿ ಯೋಜನೆಯಲ್ಲಿರುವ ಕಾರಣ ಫಲಾನುಭವಿಗಳಿಗೆ ಸರಿಯಾಗಿ ಹಣ ಕೈಸೇರುತ್ತಿಲ್ಲ. ಆದರೆ, ಗ್ಯಾರಂಟಿ ಅನುಷ್ಠಾನ ಸಮಿತಿಯಲ್ಲಿದ್ದ ಕಾಂಗ್ರೆಸ್‌ನ ಕಾರ್ಯಕರ್ತರಿಗೆ ಸರ್ಕಾರ ತನ್ನ ಖಜಾನೆ ತೆರೆದಿದೆ.

ಕಾಂಗ್ರೆಸ್ ಕಾರ್ಯಕರ್ತರಿಗೆ 7.65 ಕೋಟಿ ಹಣ ಬಿಡುಗಡೆಗೆ ಸರ್ಕಾರ ಆದೇಶ ನೀಡಿದೆ. ಆ ಮೂಲ ಕಾರ್ಯಕರ್ತರನ್ನ ಸಮಾಧಾನ ಮಾಡಲು‌ ಕೈ ಕಾರ್ಯಕರ್ತರು ಮುಂದಾಗಿದೆ. ಒಂದೆಡೆ ಜನರಿಗೆ ಗ್ಯಾರಂಟಿ ಘೋಷಣೆ ಮಾತ್ರ ಇದ್ದರೆ, ತನ್ನ ಕಾರ್ಯಕರ್ತರಿಗೆ ಸರ್ಕಾರದ ಖಜಾನೆಯಿಂದ ದಂಡಿಯಾಗಿ ಹಣ ಬಿಡುಗಡೆ ಮಾಡಿದೆ.

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರ ಗೌರವಧನ ಮತ್ತು ಸದಸ್ಯರಿಗೆ ಹಣ ಬಿಡುಗಡೆಗೆ ಆದೇಶ ನೀಡಲಾಗಿದೆ. ಏಪ್ರಿಲ್ ತಿಂಗಳಿಂದ ಆಗಸ್ಟ್ ವರೆಗೂ ಸಭಾ ಭತ್ಯೆ ಬಿಡುಗಡೆಗೆ ಸೂಚನೆ ನೀಡಲಾಗಿದ್ದು, ಮೂರು ತಿಂಗಳ ಅಡ್ವಾನ್ಸ್ ಹಣ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.

ಅಧಿಕಾರಿಗಳಿಗೆ ಷರತ್ತು

ಆದೇಶದಲ್ಲಿ ಅಧಿಕಾರಿಗಳಿಗೆ ಷರತ್ತು ಕೂಡ ವಿಧಿಸಲಾಗಿದೆ. ಈ ಅನುದಾನವನ್ನು ಆರ್ಥಿಕ ಇಲಾಖೆಯಿಂದ ಕಾಲಕಾಲಕ್ಕೆ ನೀಡಲಾಗಿರುವ ಸೂಚನೆಗಳ ಅನುಸಾರ ಆದ್ಯತೆಯ ಮೇಲೆ ವೆಚ್ಚ ಮಾಡಬೇಕು. ಷರಾದಲ್ಲಿ ತಿಳಿಸಿರುವ ಉದ್ದೇಶಕ್ಕೆ ಮಾತ್ರ ವೆಚ್ಚ ಮಾಡಬೇಕು. ಯಾವುದೇ ಹಂತದಲ್ಲಿ ಅನುಷ್ಠಾನ ಅಧಿಕಾರಿ ಹಂತದಲ್ಲಿ ವಿಳಂಬವಾಗಿ. ಅನುದಾನ ವ್ಯತ್ಯಾಸವಾದಲ್ಲಿ ಮತ್ತೊಮ್ಮೆ ಅನುದಾನವನ್ನು ಒದಗಿಸುವುದಿಲ್ಲ. ಭತ್ಯೆ ವಿಳಂಬಗೊಳಿಸಿದ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮವಹಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಲೂಟಿ ಹೊಡೆಯೋದು ಗೊತ್ತಾಗುತ್ತಿದೆ ಎಂದ ಮಾಜಿ ಸಿಎಂ ಡಿವಿ ಸದಾನಂದ ಗೌಡ

ಗ್ಯಾರಂಟಿ ಅನುಷ್ಠಾನ ಸಮಿತಿಗೆ ಹಣ ಬಿಡುಗಡೆ ಸರ್ಕಾರ ಆದೇಶ ನೀಡಿದ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಸಿಎಂ ಬಿಜೆಪಿಯ ಡಿವಿ ಸದಾನಂದ ಗೌಡ, ಕಾಂಗ್ರೆಸ್ ಸರ್ಕಾರ ಇರುವುದೇ ಅದಕ್ಕೆ. ಕಾಂಗ್ರೆಸ್ ಗ್ಯಾರಂಟಿ ಜನರಿಗಲ್ಲ ಹೊರತು ರಾಜ್ಯದ ಹಿತಾಸಕ್ತಿಗೆ ಅಲ್ಲ. ನೀವೂ ಸಹ ಲೂಟಿ ಹೊಡೆಯಿರಿ ಅಂತ ಕಾರ್ಯಕರ್ತರಿಗೆ ಕಾಂಗ್ರೆಸ್ ಹಣ ಕೊಡುತ್ತಿದೆ. ಜನರ ಕಿಸೆಯಿಂದಲೇ ಹಣವನ್ನು ಪಡೆದು ಜನರಿಗೆ ಕೊಡುತ್ತಿದೆ. ಜನರಿಗೆ ಕೊಟ್ಟ ಭರವಸೆ ಈಡೇರಿಸಿಲ್ಲ.. ಕಾರ್ಯಕರ್ತರ ಒಲೈಕೆ ಮಾಡುವ ಕೆಲಸ ಮಾಡುತ್ತಿದೆ. ಸರ್ಕಾರದಲ್ಲಿ ಅಧಿಕಾರಿಗಳು ಯಾಕೆ ಇರುವುದು? ಜನರ ಕಿಸೆಯಿಂದಲೇ ಸರ್ಕಾರ ಹಣವನ್ನು ಲೂಟಿ ಮಾಡುತ್ತಿದೆ ಎಂದಿದ್ದಾರೆ.