2025-26ನೇ ಸಾಲಿನ ಯುಡೈಸ್ ವರದಿಯ ಪ್ರಕಾರ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ತೀವ್ರ ಶಿಕ್ಷಕರ ಕೊರತೆ ಇರುವುದು ಬೆಳಕಿಗೆ ಬಂದಿದೆ. ಇದರ ಜೊತೆಗೆ ಗ್ರಾಮೀಣ ಭಾಗದ ಶಾಲೆಗಳಲ್ಲಿ ಮೂಲಸೌಕರ್ಯಗಳ ಅಭಾವವಿದ್ದು, ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಶಿಕ್ಷಕರ ಕಾಯಂ ನೇಮಕಾತಿ ಮತ್ತು ಸೌಲಭ್ಯಗಳ ಸುಧಾರಣೆ ಅತ್ಯಗತ್ಯವಾಗಿದೆ.
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಮೂಲಸೌಕರ್ಯ ಸುಧಾರಣೆಯ ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಶಿಕ್ಷಣ ವ್ಯವಸ್ಥೆಯ ನೈಜ ಸ್ಥಿತಿಯನ್ನು ಬಿಂಬಿಸುವ ಆತಂಕಕಾರಿ ವರದಿಯೊಂದು ಹೊರಬಿದ್ದಿದೆ. 2025-26ನೇ ಸಾಲಿನ ಯುಡೈಸ್ (UDISE) ಮಾಹಿತಿಯ ಪ್ರಕಾರ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ತೀವ್ರ ಕೊರತೆ ಇರುವುದು ಬೆಳಕಿಗೆ ಬಂದಿದೆ. ಇದು ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ನೇರ ಪರಿಣಾಮ ಬೀರವುದರಲ್ಲಿ ಸಂದೇಹವೇ ಇಲ್ಲ.
ದಾಖಲಾತಿ ಹೆಚ್ಚಿದ್ದರೂ ಶಿಕ್ಷಕರ ಕೊರತೆ!
ವರದಿಯ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿರುವ ಒಟ್ಟು 48,527 ಸರ್ಕಾರಿ ಶಾಲೆಗಳಲ್ಲಿ 1ರಿಂದ 12ನೇ ತರಗತಿಯವರೆಗೆ ಸುಮಾರು 45,39,093 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಈ ಬೃಹತ್ ಸಂಖ್ಯೆಯ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಲಭ್ಯವಿರುವ ಶಿಕ್ಷಕರ ಸಂಖ್ಯೆ ಕೇವಲ 1,93,644 ಮಾತ್ರ. ಇನ್ನು ತರಗತಿವಾರು ಶಿಕ್ಷಕರು ಎಷ್ಟಿದ್ದಾರೆಂದು ಪರಿಶೀಲಿಸಿದಾಗ ಅಭಾವದ ತೀವ್ರತೆಯ ಸ್ಪಷ್ಟ ಚಿತ್ರಣ ಕಣ್ಣಿಗೆ ಕಾಣುತ್ತಿದೆ.
- 1ರಿಂದ 5ನೇ ತರಗತಿ: 34,830 ಶಿಕ್ಷಕರು
- 1ರಿಂದ 8ನೇ ತರಗತಿ: 94,875 ಶಿಕ್ಷಕರು
- 6ರಿಂದ 8ನೇ ತರಗತಿ: ಕೇವಲ 322 ಶಿಕ್ಷಕರು
ವಿಶೇಷವಾಗಿ 6ರಿಂದ 8ನೇ ತರಗತಿಯ ಹಂತದಲ್ಲಿ ಶಿಕ್ಷಕರ ಸಂಖ್ಯೆ ಕನಿಷ್ಠ ಮಟ್ಟದಲ್ಲಿದ್ದು, ಹಿರಿಯ ಪ್ರಾಥಮಿಕ ತರಗತಿಗಳ ಬೋಧನೆ ಸಂಪೂರ್ಣ ಅಲ್ಲೋಲ ಕಲ್ಲೋಲ ಆಗುವ ಭೀತಿ ಉಂಟಾಗಿದೆ.
ಮೂಲಸೌಕರ್ಯಗಳ ಕೊರತೆಯಿಂದ ಕಂಗೆಟ್ಟ ಗ್ರಾಮೀಣ ಶಾಲೆಗಳು
ಕೇವಲ ಶಿಕ್ಷಕರ ಕೊರತೆ ಮಾತ್ರವಲ್ಲದೆ, ರಾಜ್ಯದ ಹಲವಾರು ಶಾಲೆಗಳು ಅಗತ್ಯ ಮೂಲಸೌಕರ್ಯಗಳಿಲ್ಲದೆ ಪರದಾಡುತ್ತಿವೆ. ಇದಕ್ಕೆ ಬಲಿಯಾಗಿರುವುದು ಗ್ರಾಮೀಣ ಭಾಗದ ಶಾಲೆಗಳೇ ಹೆಚ್ಚು. ಗ್ರಾಮೀಣ ಭಾಗದ ಶಾಲೆಗಳಲ್ಲಿ ಶಿಥಿಲಗೊಂಡ ಕಟ್ಟಡಗಳು, ಮುರಿದುಬಿದ್ದ ಪೀಠೋಪಕರಣಗಳು, ಸರಿಯಾದ ಕುಡಿಯುವ ನೀರಿನ ಕೊರತೆ ಹಾಗೂ ಶೌಚಾಲಯಗಳ ಕೊರತೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಗ್ರಂಥಾಲಯ ಹಾಗೂ ಪ್ರಯೋಗಾಲಯಗಳಂತಹ ಕನಿಷ್ಠ ಸೌಲಭ್ಯಗಳೂ ಇಲ್ಲದಿರುವುದು ವಿದ್ಯಾರ್ಥಿಗಳಿಗೆ ಕಲಿಕೆಯ ಆಸಕ್ತಿಯನ್ನು ಕುಗ್ಗಿಸುತ್ತಿದೆ.
ಅತಿಥಿ ಶಿಕ್ಷಕರೇ ಆಸರೆ!
ಈ ಹಿಂದೆ ಶಿಕ್ಷಕರ ಅಭಾವವನ್ನು ಸರಿದೂಗಿಸಲು ಸರ್ಕಾರ ಸುಮಾರು 51,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿತ್ತು. ಆದರೆ ಇದು ಕೇವಲ ಹಂಗಾಮಿ ವ್ಯವಸ್ಥೆಯಾಗಿದ್ದು, ಉತ್ತಮ ಶಿಕ್ಷಣಕ್ಕೆ ಶಿಕ್ಷಕರ ಸಂಖ್ಯೆ ಹೆಚ್ಚಿಸುವುದು ಅತ್ಯಗತ್ಯವಾಗಿದೆ.
ಇಂದಿನ ಡಿಜಿಟಲ್ ಶಿಕ್ಷಣ ಹಾಗೂ ಆಧುನಿಕ ಕಲಿಕೆಯ ಯುಗದಲ್ಲಿ, ಶಾಲೆಗಳಿಗೆ ಕಂಪ್ಯೂಟರ್ ನೀಡುವುದಕ್ಕಿಂತ ಮೊದಲು ತರಗತಿಗೆ ಅಗತ್ಯವಿರುವಷ್ಟು ಶಿಕ್ಷಕರನ್ನು ಒದಗಿಸುವುದೇ ಸರ್ಕಾರದ ಮುಂದಿರುವ ಅತಿ ದೊಡ್ಡ ಸವಾಲಾಗಿದೆ. ಖಾಸಗಿ ಶಾಲೆಗಳ ತೀವ್ರ ಪೈಪೋಟಿಯ ನಡುವೆ ಸರ್ಕಾರಿ ಶಾಲೆಗಳನ್ನು ಉಳಿಸಿಕೊಂಡು, ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ತಲುಪಿಸಬೇಕಾದರೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ತಕ್ಷಣವೇ ಶಿಕ್ಷಕರ ಕಾಯಂ ನೇಮಕಾತಿ ಮಾಡಿಕೊಳ್ಳಬೇಕು ಹಾಗೂ ಮೂಲಸೌಕರ್ಯಗಳನ್ನು ಸುಧಾರಿಸುವುದು ಅಗತ್ಯ.


