Asianet Suvarna News Asianet Suvarna News

ದೇವದಾಸಿ ಮಹಿಳೆಯರ ಸಮೀಕ್ಷೆಗೆ ನಿರ್ಧರಿಸುವುದು ಸ್ವಾಗತಾರ್ಹ: ದೇವದಾಸಿ ಮಹಿಳೆಯರ ವಿಮೋಚನಾ ಸಂಘ

 ಗಣತಿಯಲ್ಲಿ ಬಿಟ್ಟು ಹೋದ ದೇವದಾಸಿ ಮಹಿಳೆಯರ ಗಣತಿ ಮಾಡಲು ಕ್ರಮ ಕೈಗೊಳ್ಳುವಂತೆ ನಿರ್ಧರಿಸಿರುವುದು ಸ್ವಾಗತಾರ್ಹ ವಾಗಿದೆ. ಇದು ಕಳೆದ ಒಂದು ದಶಕದಿಂದ ನಾವು ನಡೆಸಿದ ಹೋರಾಟಕ್ಕೆ ದೊರೆತ ಜಯವಾಗಿದೆ ಎಂದು ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಸಮಿತಿ ಹೇಳಿದೆ.

Karnataka government decided to survey Devadasi women gow
Author
First Published Dec 10, 2022, 10:03 PM IST

ದಾವಣಗೆರೆ (ಡಿ.10): ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪ ಯೋಜನೆಯಡಿ ರಾಜ್ಯದ ದೇವದಾಸಿಯರಿಗೆ ಪುನರ್ವಸತಿ ಕಲ್ಪಿಸಲು ಒತ್ತಾಯಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಸಮಿತಿಯು ಸರ್ಕಾರಕ್ಕೆ ಒತ್ತಾಯಿಸಿದೆ. ದಾವಣಗೆರೆ ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಘದ ರಾಜ್ಯ ಗೌರವಾಧ್ಯಕ್ಷ ಯು.ಬಸವರಾಜ, ಅಧ್ಯಕ್ಷೆ ಟಿ.ವಿ.ರೇಣುಕಮ್ಮ, ಸರ್ಕಾರದ ಬೊಕ್ಕಸದಲ್ಲಿ ಅರ್ಧದಷ್ಟು ಬಳಕೆಯಾಗದೇ ಉಳಿಯುವ ಪರಿಶಿಷ್ಟ ಜಾತಿ-ಪಂಗಡಗಳ ಉಪ ಯೋಜನೆ ಹಣದಲ್ಲಿ ದೇವದಾಸಿ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸುವ ಕೆಲಸ ಸರ್ಕಾರ ಮಾಡಲಿ ಎಂದರು. ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ-ಪಂಗಡಗಳ ಉಪ ಯೋಜನೆಗೆ 30 ಸಾವಿರ ಕೋಟಿ ರು. ಹಣ ಸರ್ಕಾರ ಕಾಯ್ದಿರಿಸುತ್ತದೆ. ಆದರೆ, ಅದರಲ್ಲಿ ಒಂದಷ್ಟುಹಣ ಮಾತ್ರ ಬಳಕೆಯಾಗಿ, ಉಳಿದ ಹಣ ಬೊಕ್ಕಸದಲ್ಲಿದ್ದರೂ ದೇವದಾಸಿಯರ ಪುನರ್ವಸತಿಗೆ ಬಳಸದಿರುವುದು ಅಕ್ಷಮ್ಯ. ಈ ಬಗ್ಗೆ ಸರ್ಕಾರ ಇನ್ನಾದರೂ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.

ನಿರ್ಧಾರ ಸ್ವಾಗತಾರ್ಹ: ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಸುಮಾರು 46 ಸಾವಿರ ದೇವದಾಸಿಯರಿದ್ದಾರೆ. ಸುಮಾರು 12 ಸಾವಿರ ದೇವದಾಸಿಯರ ಹೆಸರು ಪಟ್ಟಿಯಲ್ಲೇ ಇಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಮತ್ತು ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿಗಳು ಕಳೆದೊಂದು ದಶಕದಿಂದ ಜಂಟಿಯಾಗಿ ಹೋರಾಟ ನಡೆಸಿದ್ದರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಸಚಿವರು, ಅಧಿಕಾರಿಗಳ ಜಂಟಿ ಸಬೆ ನಡೆಸಿ, ಪಟ್ಟಿಯಲ್ಲಿ ಬಿಟ್ಟು ಹೋಗಿರುವ ದೇವದಾಸಿ ಮಹಿಳೆಯರ ಗಣತಿಗೆ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದು ಸ್ವಾಗತಾರ್ಹ ಎಂದು ತಿಳಿಸಿದರು.

ಬೆಳಗಾವಿ ಅಧಿವೇಶನದ ಒಳಗಾಗಿ ದೇವದಾಸಿ ಮಹಿಳೆಯರ ಗಣತಿ ಕಾರ್ಯವನ್ನು ಸಮಾರೋಪಾದಿಯಲ್ಲಿ ಕೈಗೊಳ್ಳಬೇಕು. ಈ ಬಗ್ಗೆ ಮುಖ್ಯಮಂತ್ರಿಗಳು ಸೂಕ್ತ ಕ್ರಮ ಕೈ ಗೊಳ್ಳಬೇಕು. ದೇವದಾಸಿ ಮಹಿಳೆಯರ ಮಕ್ಕಳ ಉನ್ನತ ಶಿಕ್ಷಣ ಹಾಗೂ ಸೌಲಭ್ಯಗಳ ವಿಚಾರದಲ್ಲಿ ಯಾವುದೇ ಅಂಕಗಳು, ಪ್ರವೇಶ ಪರೀಕ್ಷೆ ಸ್ಪರ್ಧೆ ಇಲ್ಲದೇ, ಒಳ ಮೀಸಲಾತಿ ಆದಾರದಲ್ಲಿ ಮತ್ತು ನೇರ ಪ್ರವೇಶಕ್ಕೆ ಅನುವು ಮಾಡಿಕೊಡಲು ಸಚಿವರು ನಿರ್ಧರಿಸಿದ್ದು ಒಳ್ಳೆಯ ಬೆಳವಣಿಗೆ. ಈ ಬಗ್ಗೆ ಸರ್ಕಾರವು ಅಧಿಕೃತವಾಗಿ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ದೇವದಾಸಿಯರು ಹೊಲಿದಿದ್ದ ಕವದಿಯನ್ನು ಗಿಫ್ಟ್​​ಕೊಟ್ಟ ಸುಧಾಮೂರ್ತಿ​

ಜನವರಿಯಲ್ಲಿ ಸಮಾವೇಶ: ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ ಮಾತನಾಡಿ, ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ನಾಲ್ಕನೇ ರಾಜ್ಯಮಟ್ಟದ ದೇವದಾಸಿ ಮಹಿಳೆಯರ ಸಮಾವೇಶವು ಜನವರಿ 2023ರಲ್ಲಿ ದಾವಣಗೆರೆಯಲ್ಲಿ ಸಂಘಟಿಸಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 2 ಸಾವಿರ ದೇವದಾಸಿ ಮಹಿಳೆಯರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು. ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾಧ್ಯಕ್ಷೆ ಹಿರಿಯಮ್ಮ, ಚನ್ನಮ್ಮ ಇತರರಿದ್ದರು.

ದೇವದಾಸಿ ಪದ್ಧತಿ ನಿಯಂತ್ರಣ: ಕರ್ನಾಟಕಕ್ಕೆ NHRC ನೋಟಿಸ್‌

ಪ್ರತಿಭಟನೆ ನಡೆಸಿದ್ದರೂ ಸ್ಪಂದಿಸಿಲ್ಲ: ಐದಾರು ವರ್ಷದಿಂದಲೂ ಎಲ್ಲಾ ವಯೋಮಾನದ ದೇವದಾಸಿ ಮಹಿಳೆಯರ ಮಾಸಿಕ ಸಹಾಯಧನ 3 ಸಾವಿರ ರು.ಗೆ ಹೆಚ್ಚಿಸುವಂತೆ, 2 ಎಕರೆ ಜಮೀನು, ವಸತಿ ಸೌಲಭ್ಯ ಕಲ್ಪಿಸಬೇಕು. ದಲಿತ ಬಾಲಕಿಯರು, ಮಹಿಳೆಯರ ಮೇಲೆ ದೌರ್ಜನ್ಯ ಎಸಗುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವುದೂ ಸೇರಿ ವಿವಿಧ ಬೇಡಿಕೆ ಮುಂದಿಟ್ಟು ರಾಜ್ಯವ್ಯಾಪಿ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರೂ ಸರ್ಕಾರ ಮಾತ್ರ ಯಾವುದೇ ರೀತಿ ಸ್ಪಂದಿಸಿಲ್ಲ ಎಂದು ಅಧ್ಯಕ್ಷೆ ಟಿ.ವಿ.ರೇಣುಕಮ್ಮ ದೂರಿದರು.

Follow Us:
Download App:
  • android
  • ios