ಮುಸ್ಲಿಂ ಮೀಸಲು ರದ್ದತಿ ಹಾಗೂ ಅವರ ಮೀಸಲನ್ನು ಒಕ್ಕಲಿಗರು ಮತ್ತು ಲಿಂಗಾಯತರಿಗೆ ಹಂಚಿದ ಕರ್ನಾಟಕ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿರುವ ಅರ್ಜಿಗಳಿಗೆ ಪ್ರತಿಯಾಗಿ ಕರ್ನಾಟಕ ಸರ್ಕಾರ ಬುಧವಾರ ಲಿಖಿತ ಉತ್ತರ ಸಲ್ಲಿಸಿದೆ. ಇದರಲ್ಲಿ ತನ್ನ ನಿರ್ಧಾರವನ್ನು ಸರ್ಕಾರ ಸಮರ್ಥಿಸಿಕೊಂಡಿದೆ.
ನವದೆಹಲಿ(ಏ.27): ‘ಧರ್ಮದ ಆಧಾರದಲ್ಲಿ ಮೀಸಲು ನೀಡುವುದು ತಪ್ಪು. ಸಂವಿಧಾನಿಕವಾಗಿ ಧರ್ಮವೊಂದನ್ನೇ ಆಧರಿಸಿ ಮೀಸಲು ನೀಡುವಂತಿಲ್ಲ. ಹೀಗಾಗಿಯೇ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಶೇ.4ರಷ್ಟು ಮೀಸಲನ್ನು ತೆಗೆದು ಹಾಕಿದ್ದೇವೆ’ ಎಂದು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿದೆ.
ಮುಸ್ಲಿಂ ಮೀಸಲು ರದ್ದತಿ ಹಾಗೂ ಅವರ ಮೀಸಲನ್ನು ಒಕ್ಕಲಿಗರು ಮತ್ತು ಲಿಂಗಾಯತರಿಗೆ ಹಂಚಿದ ಕರ್ನಾಟಕ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿರುವ ಅರ್ಜಿಗಳಿಗೆ ಪ್ರತಿಯಾಗಿ ಕರ್ನಾಟಕ ಸರ್ಕಾರ ಬುಧವಾರ ಲಿಖಿತ ಉತ್ತರ ಸಲ್ಲಿಸಿದೆ. ಇದರಲ್ಲಿ ತನ್ನ ನಿರ್ಧಾರವನ್ನು ಸರ್ಕಾರ ಸಮರ್ಥಿಸಿಕೊಂಡಿದೆ.
ಕರ್ನಾಟಕ ಸರ್ಕಾರದ ಮುಸ್ಲಿಂ ಮೀಸಲಾತಿ ರದ್ದತಿಗೆ ಸುಪ್ರೀಂ ಕೋರ್ಟ್ ತಡೆ
‘ರಾಜ್ಯ ಸರ್ಕಾರ ಅತ್ಯಂತ ಜಾಗರೂಕವಾಗಿಯೇ ಮುಸ್ಲಿಂ ಮೀಸಲು ರದ್ದು ನಿರ್ಧಾರ ಕೈಗೊಂಡಿದೆ. ಸಂವಿಧಾನದ ಪರಿಚ್ಛೇದ 14, 15 ಹಾಗೂ 16ರ ಪ್ರಕಾರ ಧರ್ಮದ ಆಧಾರದಲ್ಲಿ ಮೀಸಲು ನೀಡುವುದು ತಪ್ಪು. ಹೀಗಾಗಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ.4ರಷ್ಟು ಮೀಸಲನ್ನು ಮಾ.27ರಂದು ರದ್ದುಗೊಳಿಸಲಾಯಿತು ಹಾಗೂ ಶೇ.10ರಷ್ಟು ಆರ್ಥಿಕ ಹಿಂದುಳಿದ ವರ್ಗ (ಇಡಬ್ಲುಎಸ್) ಕೋಟಾ ಅಡಿ ಮೀಸಲು ನೀಡಲು ನಿರ್ಧರಿಸಲಾಯಿತು’ ಎಂದು ಹೇಳಿದೆ.
ಅಲ್ಲದೆ, ‘ಧರ್ಮದ ಆಧಾರದಲ್ಲಿ ಮೀಸಲು ನೀಡುವುದು ಸಾಮಾಜಿಕ ನ್ಯಾಯ, ಜಾತ್ಯತೀತತೆ ಹಾಗೂ ಸಂವಿಧಾನದ ಸದಾಶಯಗಳಿಗೆ ವಿರುದ್ಧವಾದುದು. ಯಾರು ಸಮಾಜದಲ್ಲಿ ತಾರತಮ್ಯ ಅನುಭವಿಸಿರುತ್ತಾರೋ ಹಾಗೂ ವಂಚಿತರಾಗಿರುತ್ತಾರೋ ಅವರಿಗೆ ಮೀಸಲು ನೀಡುವುದು ಸಾಮಾಜಿಕ ನ್ಯಾಯ’ ಎಂದು ಸರ್ಕಾರ ಪ್ರತಿಪಾದಿಸಿದೆ.
ಅಲ್ಲದೆ, ‘ನಮ್ಮ ನಿರ್ಣಯದ ಹಿಂದಿನ ಉದ್ದೇಶವನ್ನು ಬೇರೆ ಬಣ್ಣ ಕಟ್ಟಿ ಅರ್ಜಿದಾರರು ಪ್ರಶ್ನಿಸಿದ್ದಾರೆ. ಅಲ್ಲದೆ, ನಿರ್ಣಯ ತೆಗೆದುಕೊಂಡ ಸಮಯದ ಬಗ್ಗೆಯೂ ಸಂದೇಹಿಸಿದ್ದಾರೆ. ಇದು ಸಂಪೂರ್ಣ ನಿರಾಧಾರವಾದುದು. ಅರ್ಜಿದಾರರು ಧರ್ಮದ ಆಧಾರದಲ್ಲಿ ಮೀಸಲು ನೀಡುವುದು ಸರಿ ಎಂದು ಸಮರ್ಥಿಸಿಕೊಳ್ಳದೆ ಮಿಕ್ಕ ಅಂಶಗಳತ್ತ ಬೊಟ್ಟು ಮಾಡಿರುವುದು ಸರಿಯಲ್ಲ. ಧರ್ಮಾಧಾರಿತ ಮೀಸಲನ್ನು ಈ ಹಿಂದೆ ನೀಡಲಾಗಿತ್ತು ಎಂಬುದನ್ನೇ ಇಟ್ಟುಕೊಂಡು ಮುಂದಿನ ದಿನಗಳಲ್ಲೂ ನೀಡಬೇಕು ಎಂದು ವಾದಿಸುವುದರಲ್ಲಿ ಯಾವುದೇ ಆಧಾರವಿಲ್ಲ’ ಎಂದಿದೆ.
‘ಕರ್ನಾಟಕ ಸರ್ಕಾರವು ಐತಿಹಾಸಿಕವಾಗಿ ಸಾಮಾಜಿಕ ಹಾಗೂ ಆರ್ಥಿಕ ಹಿಂದುಳಿದಿರುವಿಕೆಯನ್ನು ಗಮನದಲ್ಲಿ ಇರಿಸಿಕೊಂಡು ಕ್ರಮ ಕೈಗೊಂಡಿದೆ. ಈ ಮೂಲಕ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದೆ’ ಎಂದೂ ಹೇಳಿದೆ.
ಅಲ್ಲದೆ, 1979ರಲ್ಲಿ ಎಲ್.ಜಿ. ಹಾವನೂರು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ನೀಡಿದ್ದ ಶಿಫಾರಸಿಗೆ ವಿರುದ್ಧವಾಗಿ ಮುಸ್ಲಿಮರನ್ನು 1979ರಲ್ಲಿ ಒಬಿಸಿ ವರ್ಗಕ್ಕೆ ತರಲಾಗಿತ್ತು ಎಂದು ಪ್ರತಿಪಾದಿಸಿದೆ.
'ರಾಜಕಾರಣಿಗೆ ಬೇರೆ ರೂಲ್ ಮಾಡೋಕಾಗುತ್ತಾ..' ಇಡಿ-ಸಿಬಿಐ ವಿರುದ್ಧ ವಿರೋಧ ಪಕ್ಷಗಳ ಅರ್ಜಿಗೆ ಸುಪ್ರೀಂ ಕಿಡಿ!
ಮುಸ್ಲಿಮರನ್ನು ಸಂಪೂರ್ಣ ವಂಚಿತ ಮಾಡದೇ ಅವರನ್ನು ಆರ್ಥಿಕ ಹಿಂದುಳಿದ ವರ್ಗದ ಅಡಿ ಮೀಸಲಿಗೆ ತರಲಾಗಿದೆ. ಇನ್ನು ಹಿಂದುಳಿದಿರುವಿಕೆ ಗಮನಿಸಿ ಒಕ್ಕಲಿಗರಿಗೆ 2ಸಿ ಹಾಗೂ ಲಿಂಗಾಯತರಿಗೆ 2ಡಿ ಮೀಸಲು ನೀಡಲಾಗಿದೆ. ಹೀಗಾಗಿ ಮುಸ್ಲಿಂ ಮೀಸಲು ರದ್ದತಿ ನಿರ್ಧಾರ ಪ್ರಶ್ನಿಸಿದ ಅರ್ಜಿಗೆ ಯಾವುದೇ ಆಧಾರವಿಲ್ಲ ಎಂದು ಕರ್ನಾಟಕ ಸರ್ಕಾರ ಪ್ರತಿಪಾದಿಸಿದೆ.
ರಾಜ್ಯದ ವಾದ ಏನು?
- ಸಂವಿಧಾನಿಕವಾಗಿ ಧರ್ಮವೊಂದನ್ನೇ ಆಧರಿಸಿ ಮೀಸಲಾತಿ ನೀಡುವಂತಿಲ್ಲ
- ಇದನ್ನು ಗಮನಿಸಿ ಜಾಗರೂಕವಾಗಿಯೇ ಮುಸ್ಲಿಂ ಮೀಸಲು ರದ್ದತಿ ನಿರ್ಧಾರ
- ಆರ್ಥಿಕ ಹಿಂದುಳಿದ ವರ್ಗಗಳ ಮೀಸಲು ಕೋಟಾಗೆ ಮುಸ್ಲಿಮರು ಸೇರ್ಪಡೆ
- ಆದರೆ ಇದಕ್ಕೆ ಬೇರೆ ಬಣ್ಣ ಕಟ್ಟಲಾಗುತ್ತಿದೆ: ಸುಪ್ರೀಂಗೆ ರಾಜ್ಯ ಲಿಖಿತ ಉತ್ತರ
