ನಗರತ್‌ಪೇಟೆಯ ಮೂರು ಅಂತಸ್ತಿನ ಕಟ್ಟಡದಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿ ಐವರು ಮೃತಪಟ್ಟಿದ್ದಾರೆ. ಮೃತರೆಲ್ಲರೂ ರಾಜಸ್ಥಾನ ಮೂಲದ ಬಡ ಕಾರ್ಮಿಕರು. ಕಟ್ಟಡದ ಅವೈಜ್ಞಾನಿಕ ನಿರ್ಮಾಣವೇ ದುರಂತಕ್ಕೆ ಕಾರಣ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರು (ಆ.17): ನಗರತ್‌ಪೇಟೆಯ ಮೂರು ಅಂತಸ್ತಿನ ಕಟ್ಟಡದಲ್ಲಿ ಶನಿವಾರ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ರಾಜಸ್ಥಾನ ಮೂಲದ ಮದನ್ ಎಂಬ ವ್ಯಕ್ತಿ ಸಜೀವ ದಹನಗೊಂಡಿದ್ದಾರೆ. ಈ ದುರಂತದಲ್ಲಿ ಒಟ್ಟು ಐವರು ಸಾವನ್ನಪ್ಪಿದ್ದು, ಎಲ್ಲರೂ ರಾಜಸ್ಥಾನದ ಬಡ ಕಾರ್ಮಿಕರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಈ ಕಟ್ಟಡವನ್ನು ಅವೈಜ್ಞಾನಿಕವಾಗಿ ಮತ್ತು ಅಕ್ರಮವಾಗಿ ನಿರ್ಮಿಸಲಾಗಿದೆ. ಇಂತಹ ಅನಧಿಕೃತ ಕಟ್ಟಡಗಳಿಗೆ ಸಾರ್ವಜನಿಕರೂ ಜವಾಬ್ದಾರರಾಗುತ್ತಾರೆ. ಬೆಂಕಿ ಸಂಭವಿಸಿದಾಗ ಫೈಯರ್ ಫೋರ್ಸ್‌ಗೆ ಸಕಾಲದಲ್ಲಿ ತಲುಪಲು ಸಾಧ್ಯವಾಗಿಲ್ಲ, ಒಂದೂವರೆ ಕಿಲೋಮೀಟರ್ ದೂರದಿಂದ ನೀರು ತಂದು ಆರಿಸಲಾಗಿದೆ. ಮೊನ್ನೆ ವಿಲ್ಸನ್ ಗಾರ್ಡನ್‌ನಲ್ಲಿ ಸ್ಫೋಟ ಸಂಭವಿಸಿತು, ಈಗ ಈ ದುರಂತ. ಇವೆಲ್ಲ ಬೆಂಗಳೂರಿಗೆ ಶೋಭೆ ತರುವಂತಹದ್ದಲ್ಲ ಎಂದರು.

ಒಂದು ಕಟ್ಟಡ ಕುಸಿದರೆ ಪಕ್ಕದ ಕಟ್ಟಡಗಳೂ ಕುಸಿಯುವ ಸ್ಥಿತಿಯಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಇಂತಹ ಅಕ್ರಮ ಕಟ್ಟಡಗಳಿಗೆ ತಡೆಯಬೇಕು ಎಂದರು.

ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಕಟ್ಟಡದ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ, ಅವರನ್ನು ಬಂಧಿಸಲಾಗಿದೆ. ಬೆಂಗಳೂರಿನ ಎಲ್ಲ ಅನಧಿಕೃತ ಕಟ್ಟಡಗಳಿಗೆ ನೋಟಿಸ್ ನೀಡಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಾಡಿಗೆ ತೆಗೆದುಕೊಳ್ಳುವವರು ಕೇವಲ ಹಣಕ್ಕಾಗಿ ಕಟ್ಟಡ ನಿರ್ಮಿಸದೇ, ಸುರಕ್ಷತೆಗೆ ಆದ್ಯತೆ ನೀಡಬೇಕು. ಇನ್ನುಮುಂದೆ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಯಾವುದೇ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಎಚ್ಚರಿಕೆ ನೀಡಿದರು. ಈ ಘಟನೆಯು ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳ ಸಮಸ್ಯೆಯನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ.