ನಗರ್ತಪೇಟೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ ಐವರು ಮೃತಪಟ್ಟಿದ್ದಾರೆ. ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಬೆಂಗಳೂರು: ನಗರದ ನಗರ್ತಪೇಟೆಯಲ್ಲಿ ಶನಿವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ ಐವರು ಮೃತಪಟ್ಟಿದ್ದಾರೆ. ಬೆಂಕಿ ನಿಯಂತ್ರಣಕ್ಕಾಗಿ ಸುಮಾರು ಮೂರು ಗಂಟೆಗಳ ಕಾಲ ತೀವ್ರ ಶ್ರಮಪಟ್ಟ ಅಗ್ನಿಶಾಮಕ ದಳ ಮತ್ತು ಪೊಲೀಸರ ಕಾರ್ಯಾಚರಣೆ ಬಳಿಕ ಮೃತದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿದೆ.

ಅಗ್ನಿಶಾಮಕ ದಳದ ಸಾಹಸ

ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ನಿರ್ದೇಶಕ ಶಿವಶಂಕರ್ ಘಟನೆ ಕುರಿತು ಮಾಹಿತಿ ನೀಡುತ್ತಾ, “ಬೆಳಗ್ಗೆ ಸುಮಾರು ಮೂರು ಗಂಟೆಗೆ ನಮಗೆ ಮಾಹಿತಿ ಬಂದ ತಕ್ಷಣವೇ ಆರು ಅಗ್ನಿಶಾಮಕ ವಾಹನಗಳು, ಐವತ್ತಕ್ಕೂ ಹೆಚ್ಚು ಸಿಬ್ಬಂದಿ ಹಾಗೂ 20 ಮಂದಿ ಎಸ್‌ಡಿಆರ್‌ಎಫ್ ತಂಡದವರು ಸ್ಥಳಕ್ಕೆ ಧಾವಿಸಿದರು. ಜೊತೆಗೆ ಪೊಲೀಸರು ಸಹ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ಮೊದಲಿಗೆ ನೆಲ ಮಹಡಿಯಲ್ಲಿ ಒಂದು ಮೃತದೇಹ ಪತ್ತೆಯಾಯಿತು. ನಂತರ ಮೊದಲ ಮಹಡಿಯಲ್ಲಿ ಬೆಂಕಿ ಸಂಪೂರ್ಣ ಆವರಿಸಿದ್ದು, ಎರಡನೇ ಮಹಡಿಯಲ್ಲಿ ಮತ್ತೊಂದು ಮೃತದೇಹ ಪತ್ತೆಯಾಯಿತು. ಮೂರನೇ ಮಹಡಿಯಲ್ಲಿ ಇಬ್ಬರು ಸಾವಿಗೀಡಾದ ಮಾಹಿತಿ ದೊರೆತು, ಎಲ್ಲಾ ಮೃತದೇಹಗಳನ್ನು ಹೊರತೆಗೆದಿದ್ದೇವೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸೇಫ್ಟಿ ಮೆಜರ್ಸ್ ಕುರಿತು ನಾವು ಖಂಡಿತ ಕ್ರಮ ಕೈಗೊಳ್ಳುತ್ತೇವೆ,” ಎಂದರು.

ಪೊಲೀಸರ ಮಾಹಿತಿ

ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಕುಮಾರ್ ಅವರು, “ಮುಂಜಾನೆಗಿನಿಂದಲೇ ಅಗ್ನಿಶಾಮಕ ಸಿಬ್ಬಂದಿ ಹಗಲು-ರಾತ್ರಿ ತಾರತಮ್ಯವಿಲ್ಲದೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೊದಲಿಗೆ ಎರಡು ಮೃತದೇಹಗಳು ಪತ್ತೆಯಾದವು. ನಂತರ ಇನ್ನೂ ಮೂರು ಮೃತದೇಹಗಳನ್ನು ಪತ್ತೆಹಚ್ಚಿ ಒಟ್ಟಾರೆ ಐದು ಮೃತದೇಹಗಳನ್ನು ಹೊರತೆಗೆದಿದ್ದೇವೆ. ಒಳಗಡೆ ತುಂಬಾ ಹೊಗೆ ಇರುವುದು ಕಾರ್ಯಾಚರಣೆಗೆ ಅಡ್ಡಿಯಾಯಿತು. ಆದರೂ ಸಿಬ್ಬಂದಿ ಧೈರ್ಯದಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಪ್ರಸ್ತುತ ಹೊಗೆ ಕಡಿಮೆಯಾಗಿದೆ ಹಾಗೂ ಮುಂದಿನ ಕಾರ್ಯಾಚರಣೆ ಮುಂದುವರಿಯುತ್ತಿದೆ,” ಎಂದು ವಿವರಿಸಿದರು.

ದುರಂತದಲ್ಲಿ ಮೃತಪಟ್ಟವರು:

ಮದನ್ (38)

ಸಂಗೀತಾ (33)

ಮಿತೇಶ್ (8)

ವಿಹಾನ್ (5)

ಸುರೇಶ್ (36)

ಮದನ್ ಅವರ ಪತ್ನಿ ಸಂಗೀತಾ ಹಾಗೂ ಇಬ್ಬರು ಮಕ್ಕಳು ಮಿತೇಶ್ ಮತ್ತು ವಿಹಾನ್ ಬೆಂಕಿ ಅವಘಡದಲ್ಲಿ ಸಾವಿಗೀಡಾದರೆ, ಸುರೇಶ್ ಕೂಡ ಪ್ರಾಣ ಕಳೆದುಕೊಂಡಿದ್ದಾರೆ.

ಮೃತದೇಹಗಳನ್ನು ಆಸ್ಪತ್ರೆಗೆ ಶಿಫ್ಟ್

ಎಲ್ಲಾ ಮೃತದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿಗಳು ಹೊರತೆಗೆದು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲೇ ಮರಣೋತ್ತರ ಪರೀಕ್ಷೆ ನಡೆಯಲಿದೆ. ಪೊಲೀಸರು ಮೃತದೇಹಗಳನ್ನು ಶಿಫ್ಟ್ ಮಾಡುವ ಕಾರ್ಯ ನಿರ್ವಹಿಸಿದ್ದಾರೆ.

ಸುರಕ್ಷತಾ ಕ್ರಮಗಳ ಅವಶ್ಯಕತೆ

ನಗರ್ತಪೇಟೆಯ ಈ ಅವಘಡವು ಮತ್ತೊಮ್ಮೆ ನಗರದಲ್ಲಿನ ಹಳೆಯ ಕಟ್ಟಡಗಳ ಅಗ್ನಿ ಸುರಕ್ಷತಾ ಕ್ರಮಗಳ ಕೊರತೆಯನ್ನು ಬಯಲಿಗೆಳೆದಿದೆ. ಪ್ಲಾಸ್ಟಿಕ್, ರಬ್ಬರ್ ವಸ್ತುಗಳನ್ನು ದಾಸ್ತಾನು ಮಾಡಿಕೊಂಡಿರುವ ಕಟ್ಟಡಗಳಲ್ಲಿ ಬೆಂಕಿ ಆವರಿಸಿಕೊಂಡರೆ ನಿಯಂತ್ರಣ ಬಹಳ ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಟ್ಟಡ ಮಾಲೀಕರು ಹಾಗೂ ವ್ಯಾಪಾರಿಗಳು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅತ್ಯಂತ ಅವಶ್ಯಕವಾಗಿದೆ.