Asianet Suvarna News Asianet Suvarna News

ಮುಂಗಾರಿನ ಮುನಿಸಿಗೆ ಕರ್ನಾಟಕದ ಜಲಾಶಯಗಳು ಖಾಲಿ ಖಾಲಿ..!

ಮುಂಗಾರು ಆರಂಭವಾದಾಗಿನಿಂದ ಈವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ಶೇ.30ಕ್ಕಿಂತ ಕಡಿಮೆ ಮಳೆಯಾಗಿದೆ. ಅದರ ಪರಿಣಾಮ ರಾಜ್ಯದಲ್ಲಿನ 24 ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ಶೇ.40 ಕಡಿಮೆ ಪ್ರಮಾಣದ ನೀರು ಶೇಖರಣೆಯಾಗಿದೆ. ಜೂನ್‌ 20ರವರೆಗೆ ರಾಜ್ಯದ ಎಲ್ಲ ಜಲಾಶಯಗಳಲ್ಲಿ ಶೇ.24.64ರಷ್ಟುನೀರು ಶೇಖರಣೆಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಬರದ ಛಾಯೆ ಮೂಡುವಂತಾಗಿದೆ. 

Karnataka Dams Empty Due to Monsoon Rain Delay grg
Author
First Published Jun 23, 2023, 12:30 AM IST

ಗಿರೀಶ್‌ ಗರಗ

ಬೆಂಗಳೂರು(ಜೂ.23): ರಾಜ್ಯಕ್ಕೆ ಮುಂಗಾರು ಪ್ರವೇಶಿಸಿ 12 ದಿನಗಳಾಗಿದ್ದು, ಮಳೆಯ ಪ್ರಮಾಣ ಇನ್ನೂ ಏರಿಕೆಯಾಗಿಲ್ಲ. ಹೀಗಾಗಿಯೇ ರಾಜ್ಯದಲ್ಲಿನ 24 ಆಣೆಕಟ್ಟುಗಳಲ್ಲಿ ಕಳೆದ ವರ್ಷಕ್ಕಿಂತ 110 ಟಿಎಂಸಿ ನೀರು ಕಡಿಮೆ ಸಂಗ್ರಹವಾಗಿದ್ದು, ರಾಜ್ಯದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಮುಂಗಾರು ಆರಂಭವಾದಾಗಿನಿಂದ ಈವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ಶೇ.30ಕ್ಕಿಂತ ಕಡಿಮೆ ಮಳೆಯಾಗಿದೆ. ಅದರ ಪರಿಣಾಮ ರಾಜ್ಯದಲ್ಲಿನ 24 ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ಶೇ.40 ಕಡಿಮೆ ಪ್ರಮಾಣದ ನೀರು ಶೇಖರಣೆಯಾಗಿದೆ. ಜೂನ್‌ 20ರವರೆಗೆ ರಾಜ್ಯದ ಎಲ್ಲ ಜಲಾಶಯಗಳಲ್ಲಿ ಶೇ.24.64ರಷ್ಟುನೀರು ಶೇಖರಣೆಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಬರದ ಛಾಯೆ ಮೂಡುವಂತಾಗಿದೆ. ಜತೆಗೆ ಕೃಷಿ ಚಟುವಟಿಕೆಗಳು ಕುಂಠಿತವಾಗಿದ್ದು, ಬೆಂಗಳೂರು ಸೇರಿ ಹಲವು ನಗರಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗುವ ಸಾಧ್ಯತೆ ದಟ್ಟವಾಗಿದೆ.

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮುಂಗಾರು ಮಳೆ: ರೈತರ ಮೊಗದಲ್ಲಿ ಹರ್ಷ

ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆಣೆಕಟ್ಟುಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ತೀರಾ ಕಡಿಮೆಯಿದೆ. 2021ರ ಜೂನ್‌ 20ರಂದು 230.29 ಟಿಎಂಸಿ ನೀರು ಶೇಖರಣೆಯಾಗಿತ್ತು. ಅದೇ 2022ರ ಜೂನ್‌ 20 ರಂದು 275.66 ಟಿಎಂಸಿ ನೀರು ಸಂಗ್ರಹವಾಗಿತ್ತು. ಈ ವರ್ಷದ ಜೂನ್‌ 20ರಂದು ಕೇವಲ 165.04 ಟಿಎಂಸಿ ನೀರು ಮಾತ್ರ ಶೇಖರಣೆಯಾಗಿದೆ. ಅದನ್ನು ಗಮನಿಸಿದರೆ ಕಳೆದ ವರ್ಷಕ್ಕಿಂತ 110 ಟಿಎಂಸಿ ಕಡಿಮೆ ನೀರು ಸಂಗ್ರಹವಾಗುವಂತಾಗಿದೆ.

ಕೃಷ್ಣಾ ಕಣಿವೆಯಲ್ಲಿ ಕಡಿಮೆ:

ರಾಜ್ಯದಲ್ಲಿ ಕೃಷ್ಣಾ, ಕಾವೇರಿ ಹಾಗೂ ಗೋದಾವರಿ ಕಣಿವೆಗಳ ಜಲಾಶಯಗಳಿವೆ. ಅದರಲ್ಲಿ ಕೃಷ್ಣಾ ಕಣಿವೆ ವ್ಯಾಪ್ತಿಯಲ್ಲಿ 17, ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ 5 ಹಾಗೂ ಗೋದಾವರಿ ಕಣಿವೆ ವ್ಯಾಪ್ತಿಯಲ್ಲಿ 2 ಆಣೆಕಟ್ಟುಗಳಿವೆ. ಆ ಪೈಕಿ ಕೃಷ್ಣಾ ಕಣಿವೆ ವ್ಯಾಪ್ತಿಯ ಜಲಾಶಯಗಳಲ್ಲಿ ಅತೀ ಕಡಿಮೆ ನೀರು ಶೇಖರಣೆಯಾಗಿದೆ. 17 ಜಲಾಶಯಗಳಲ್ಲಿ ಶೇ.23ರಷ್ಟುಮಾತ್ರ ನೀರು ಸಂಗ್ರಹವಾಗಿದೆ. ಕಾವೇರಿ ಕಣಿವೆಯ ಆಣೆಕಟ್ಟುಗಳಲ್ಲಿ ಶೇ.27 ಹಾಗೂ ಗೋದಾವರಿ ಕಣಿವೆ ಆಣೆಕಟ್ಟುಗಳಲ್ಲಿ ಶೇ.64ರಷ್ಟುನೀರು ಶೇಖರಣೆಯಾಗಿದೆ.

ಟಿಬಿ ಡ್ಯಾಂನಲ್ಲಿ ಶೇ.4ರಷ್ಟು ನೀರು:

ರಾಜ್ಯದ ಪ್ರಮುಖ ಜಲಾಶಯಗಳಲ್ಲೊಂದಾದ ಹೊಸಪೇಟೆಯ ತುಂಗಭದ್ರಾ ಜಲಾಶಯದಲ್ಲಿ ಶೇ.4ರಷ್ಟುಮಾತ್ರ ನೀರು ಸಂಗ್ರಹವಾಗಿದೆ. ಒಟ್ಟು 105.78 ಟಿಎಂಸಿ ನೀರು ಶೇಖರಣೆ ಸಾಮರ್ಥ್ಯವಿರುವ ತುಂಗಭದ್ರಾ ಜಲಾಶಯದಲ್ಲಿ ಕೇವಲ 4.24 ಟಿಎಂಸಿ ನೀರು ಸಂಗ್ರವಾಗಿದೆ. ಸದ್ಯ 367 ಕ್ಯುಸೆಕ್ಸ್‌ ನೀರು ಒಳ ಹರಿವಿದೆ. ಉಳಿದಂತೆ ಪ್ರಮುಖ ಜಲಾಶಯಗಳಾದ ಕೃಷ್ಣರಾಜ ಸಾಗರದಲ್ಲಿ 71.98 ಟಿಎಂಸಿ ನೀರು ಸಂಗ್ರಹವಿದ್ದು, ಶೇ. 20ರಷ್ಟುಮಾತ್ರ ಜಲಾಶಯ ಭರ್ತಿಯಾಗಿದೆ. ಆಲಮಟ್ಟಿಯಲ್ಲಿ 19.98 ಟಿಎಂಸಿ ನೀರು ಶೇಖರಣೆಯಾಗಿದ್ದು, ಜಲಾಶಯದ ಶೇಖರಣೆ ಸಾಮರ್ಥ್ಯದ ಶೇ.16ರಷ್ಟುಭರ್ತಿಯಾದಂತಾಗಿದೆ. ಉಳಿದಂತೆ ಕಣ್ವ ಆಣೆಕಟ್ಟು ಶೇ.93, ವಾಣಿ ವಿಲಾಸ ಆಣೆಕಟ್ಟು ಶೇ.83, ಬೀದರ್‌ನ ಬಸವಕಲ್ಯಾಣದಲ್ಲಿನ ಮುಲ್ಲಮರಿ ಜಲಾಶಯ ಶೇ.79ರಷ್ಟುಭರ್ತಿಯಾಗಿದೆ. ಉಳಿದೆಲ್ಲ ಜಲಾಶಯಗಳ ನೀರಿನ ಮಟ್ಟಕಡಿಮೆಯಿದೆ.

ಮರಳುಗಾಡು ರಾಜಸ್ಥಾನದಲ್ಲಿ ಮಳೆಯೋ ಮಳೆ: ಮಲೆನಾಡಿನಲ್ಲಿ ಮಳೆಯೇ ಇಲ್ಲ.. ಇದೆಂತಾ ವಿಚಿತ್ರ ಅಲ್ವಾ?

ಕುಡಿವ ನೀರು, ಕೃಷಿಗೆ ಸಮಸ್ಯೆ:

ಕಾವೇರಿ ಮತ್ತು ಕೃಷ್ಣ ಕಣಿವೆಯಲ್ಲಿನ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿತದಿಂದಾಗಿ ರಾಜ್ಯದಲ್ಲಿ ಕುಡಿಯುವ ನೀರಿನ ಅಭಾವ ಮತ್ತು ಕೃಷಿ ಚಟುವಟಿಕೆಗೆ ಸಮಸ್ಯೆ ಎದುರಾಗುವಂತಾಗಿದೆ. ಕೃಷ್ಣರಾಜ ಸಾಗರ ಆಣೆಕಟ್ಟಿನಲ್ಲಿ ನೀರಿನ ಸಂಗ್ರಹ ಹಾಗೂ ಕಾವೇರಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುವ ಕಾರಣ ಬೆಂಗಳೂರು, ಮೈಸೂರು, ಮಂಡ್ಯದಲ್ಲಿ ಮಳೆಗಾಲದಲ್ಲಿಯೇ ನೀರಿನ ಸಮಸ್ಯೆ ಎದುರಾಗುವ ಲಕ್ಷಣಗಳಿವೆ. ಅದರ ಜತೆಗೆ ರಾಜ್ಯದಲ್ಲಿ ನಾಲೆಗಳಿಗೆ ನೀರು ಹರಿಸುವಷ್ಟುನೀರು ಜಲಾಶಯಗಳಲ್ಲಿ ಸಂಗ್ರಹವಾಗದ ಕಾರಣ, ಕೃಷಿ ಚಟುವಟಿಕೆಗೂ ನೀರಿನ ಅಭಾವ ಸೃಷ್ಟಿಯಾಗುವಂತಾಗಿದೆ.

ವರ್ಷ ಅಣೆಕಟ್ಟುಗಳಲ್ಲಿ ನೀರು ಸಂಗ್ರಹ

2021ರ ಜೂ.20 230 ಟಿಎಂಸಿ
2022ರ ಜೂ.20 275 ಟಿಎಂಸಿ
2023ರ ಜೂ.20 165 ಟಿಎಂಸಿ
ಕೃಷ್ಣ ಕಣಿವೆ 17 ಆಣೆಕಟ್ಟು 112.68 ಟಿಎಂಸಿ ನೀರು ಸಂಗ್ರಹ
ಕಾವೇರಿ ಕಣಿವೆ 5 ಆಣೆಕಟ್ಟು 46.78 ಟಿಎಂಸಿ ನೀರು ಸಂಗ್ರಹ
ಗೋದಾವರಿ ಕಣಿವೆ 2 ಆಣೆಕಟ್ಟು 5.57 ಟಿಎಂಸಿ ನೀರು ಸಂಗ್ರಹ

Follow Us:
Download App:
  • android
  • ios