ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮುಂಗಾರು ಮಳೆ: ರೈತರ ಮೊಗದಲ್ಲಿ ಹರ್ಷ
ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ ಹಾಗೂ ಬಯಲುಸೀಮೆಯ ಕಡೂರು ತಾಲೂಕಿನಾದ್ಯಂತ ಉತ್ತಮವಾಗಿ ಮಳೆ ಬಂದಿದೆ. ಮಳೆ ಆಶ್ರಿತ ಬೆಳೆ ಬೆಳೆಯುವ ರೈತರಿಗೆ ಭರವಸೆ ಮೂಡಿದೆ. ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಬರಬೇಕಾಗಿರುವ ವಾಡಿಕೆ ಮಳೆಯಲ್ಲಿ ಈವರೆಗೆ ಶೇ. 24 ರಷ್ಟು ಮಾತ್ರ ಮಳೆಯಾಗಿದೆ. ಬಯಲುಸೀಮೆ ಸೇರಿದಂತೆ ಮಲೆನಾಡಿ ನಲ್ಲೂ ಮಳೆ ಕೈ ಕೊಟ್ಟಿದೆ. ಆದರೆ, ಬುಧವಾರದ ಮಳೆ ಉತ್ತಮ ಮುನ್ಸೂಚನೆ ನೀಡಿದೆ.
ಚಿಕ್ಕಮಗಳೂರು(ಜೂ.22): ಮುಂಗಾರು ಮಳೆಯ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ರೈತರಿಗೆ ಬುಧವಾರ ಸುರಿದ ಮಳೆ ಕೊಂಚ ಹರ್ಷ ಮೂಡಿಸಿತು. ಜತೆಗೆ ಮುಂದೆಯೂ ಇದೇ ರೀತಿಯಲ್ಲಿ ಮಳೆ ಬರುವ ಆಶಾಭಾವನೆ ಮೂಡಿಸಿದೆ. ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ ಹಾಗೂ ಬಯಲುಸೀಮೆಯ ಕಡೂರು ತಾಲೂಕಿನಾದ್ಯಂತ ಉತ್ತಮವಾಗಿ ಮಳೆ ಬಂದಿದೆ. ಮಳೆ ಆಶ್ರಿತ ಬೆಳೆ ಬೆಳೆಯುವ ರೈತರಿಗೆ ಭರವಸೆ ಮೂಡಿದೆ. ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಬರಬೇಕಾಗಿರುವ ವಾಡಿಕೆ ಮಳೆಯಲ್ಲಿ ಈವರೆಗೆ ಶೇ. 24 ರಷ್ಟು ಮಾತ್ರ ಮಳೆಯಾಗಿದೆ. ಬಯಲುಸೀಮೆ ಸೇರಿದಂತೆ ಮಲೆನಾಡಿ ನಲ್ಲೂ ಮಳೆ ಕೈ ಕೊಟ್ಟಿದೆ. ಆದರೆ, ಬುಧವಾರದ ಮಳೆ ಉತ್ತಮ ಮುನ್ಸೂಚನೆ ನೀಡಿದೆ.
ತರೀಕೆರೆ ಹಾಗೂ ಶೃಂಗೇರಿ ತಾಲೂಕುಗಳಲ್ಲಿ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಎನ್.ಆರ್.ಪುರ ತಾಲೂಕಿನ ಹಲವೆಡೆ ಮಧ್ಯಾಹ್ನದ ನಂತರ ತುಂತುರು ಮಳೆ ಬಂದಿದೆ. ಮೂಡಿಗೆರೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಧ್ಯಾಹ್ನ ಆರಂಭವಾದ ಮಳೆ ಸಂಜೆ ನಂತರವೂ ಮುಂದುವರೆದಿತ್ತು. ಕೊಪ್ಪ ಪಟ್ಟಣ ಹಾಗೂ ತಾಲೂಕಿನ ಬಸ್ರಿಕಟ್ಟೆ, ಜಯಪುರ, ಕೊಗ್ರೆ, ಕಲ್ಕೇರೆ, ಕೆಸವೆ, ಸಿದ್ಧರಮಠ, ಹರಿಹರಪುರ, ಕಮ್ಮರಡಿ, ಕುದ್ರೆಗುಂಡಿ ಸೇರಿದಂತೆ ಸುತ್ತಮುತ್ತ ಮಧ್ಯಾಹ್ನ 2.30ಕ್ಕೆ ಆರಂಭವಾದ ಮಳೆ ನಿಧಾನ ಗತಿಯಲ್ಲಿ ಸಂಜೆಯವರೆಗೆ ಸುರಿಯಿತು.
ಅಮೆರಿಕಾದ ಮೋದಿ ಅರೈವಲ್ ಸೆರಮನಿಯಲ್ಲಿ ಚಿಕ್ಕಮಗಳೂರ ಹಳ್ಳಿ ಹೈದ!
ಚಿಕ್ಕಮಗಳೂರು ತಾಲೂಕಿನ ಮಲೆನಾಡು ಪ್ರದೇಶ ಹಾಗೂ ಮಳೆ ಆಶ್ರಿತ ಬೆಳೆ ಅವಲಂಬಿತ ಲಕ್ಯಾ, ಕಳಾಸಪುರ, ಅಂಬಳೆ ಹೋಬಳಿಯಲ್ಲಿ ಮಧ್ಯಾಹ್ನದ ನಂತರ ರಾತ್ರಿಯವರೆಗೆ ಬಿಡುವಿಲ್ಲದೆ ಮಳೆ ಸುರಿಯಿತು. ಅತ್ತ ಕಡೂರು ತಾಲೂಕಿನ ಸಖರಾಯಪಟ್ಟಣ ಹೋಬಳಿಯಲ್ಲೂ ಉತ್ತಮ ಮಳೆ ಬಂದಿತು.
ಚಿಕ್ಕಮಗಳೂರು ನಗರದಲ್ಲಿ ಮಧ್ಯಾಹ್ನ 12 ಗಂಟೆಗೆ ಆರಂಭವಾದ ಮಳೆ ಸತತವಾಗಿ ಎರಡು ಗಂಟೆಗಳ ಕಾಲ ಸುರಿತು ನಂತರ ಸ್ವಲ್ಪ ಸಮಯ ಬಿಡುವು ನೀಡಿ ಮತ್ತೆ ಮುಂದುವರೆದಿತ್ತು. ಬುಧವಾರ ಸಂತೆ ದಿನವಾಗಿದ್ದರಿಂದ ಸಂತೆಯಲ್ಲಿನ ವ್ಯಾಪಾರಸ್ಥರಿಗೆ ತುಂಬಾ ತೊಂದರೆಯಾಗಿತ್ತು. ಮಳೆಯ ನಡುವೆ ಆಗಾಗ ಗುಡುಗಿನ ಸದ್ದು ಕೇಳುತ್ತಿತ್ತು.
ಕಡೂರು ಹಾಗೂ ಬೀರೂರು ಭಾಗದಲ್ಲಿ ಮಧ್ಯಾಹ್ನ 2 ಗಂಟೆಗೆ ಆರಂಭವಾದ ಮಳೆ ಸಂಜೆ 4.30ರವರೆಗೆ ಬಿಡುವಿಲ್ಲದೆ ಸಾಧಾರಣವಾಗಿ ಸುರಿಯಿತು. ಕಡೂರು ತಾಲೂಕಿನಲ್ಲಿ ಮುಂಗಾರಿನಲ್ಲಿ ಮಳೆ ಅವಲಂಬಿತ ಕೃಷಿ ಭೂಮಿ ಹೆಚ್ಚಿದ್ದು, ಮಳೆ ಬಂದಿದ್ದರಿಂದ ರೈತರಿಗೆ ಹರ್ಷವಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮಳೆ ಮುಂದುವರೆಯಲಿ ಎಂಬ ಆಶಾಭಾ ವನೆಯನ್ನು ಹೊಂದಿದ್ದಾರೆ.