ಮುಖ್ಯಮಂತ್ರಿ ಬದಲಾವಣೆ ಕುರಿತ ಮಾಧ್ಯಮಗಳ ಪ್ರಶ್ನೆಗೆ ಸಚಿವ ಮಧು ಬಂಗಾರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ, ಗೊಂದಲವಿರುವುದು ಮಾಧ್ಯಮಗಳಲ್ಲಿ ಮಾತ್ರ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು (ನ.27): ಸಿಎಂ ಬದಲಾವಣೆ ಗೊಂದಲದ ಬಗ್ಗೆ ಹೈಕಮಾಂಡ್‌ಗೆ ಬಿಡಿ, ನೀವು ಯಾಕಯ್ಯ ಒಂದೇ ಸವನೆ ಬಡಿದುಕೊಳ್ತೀರಾ? ಎಂದು ಸಚಿವ ಮಧು ಬಂಗಾರಪ್ಪ ಮಾಧ್ಯಮಗಳ ವಿರುದ್ಧ ಗರಂ ಆದರು.
ಹೈಕಮಾಂಡ್‌ಗೆ ಬಿಡಿ, ನೀವು ಯಾಕಯ್ಯ ಬಡಿದುಕೊಳ್ತೀರಾ?
ಸಚಿವ ಸಂಪುಟ ಸಭೆಯಲ್ಲಿ ಕುರ್ಚಿ ಕದನ ಅಥವಾ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯಿತೇ ಎಂಬ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿದ ಮಧುಬಂಗಾರಪ್ಪ, ಕ್ಯಾಬಿನೆಟ್‌ನಲ್ಲಿ ರಾಜ್ಯದ ವಿಚಾರ ಚರ್ಚೆಯಾಗಿದೆಯಷ್ಟೇ. ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅದನ್ನು ಹೈಕಮಾಂಡ್‌ಗೆ ಬಿಡಿ, ನೀವು ಯಾಕಯ್ಯ ಬಡಿದುಕೊಳ್ತೀರಾ? ರಾಜ್ಯದಲ್ಲಿ ಹೋಗಿ ಯಾರಾದರೂ ಹೈಕಮಾಂಡ್ ವಿಚಾರ ಮಾತಾಡ್ತಾರಾ? ಎಂತ ಔಪಚಾರಿಕವಾಗಿಯೂ ಚರ್ಚೆ ಆಗಿಲ್ಲ, ಅದು ಮಾಡುವಂತದ್ದು ಅಲ್ಲ. ಕ್ಯಾಬಿನೆಟ್‌ನಲ್ಲಿ ಚರ್ಚೆ ಆಗಲ್ಲ, ನೀವು ಹಿಂಗೆಲ್ಲ ಪ್ರಶ್ನೆ ಕೇಳಬಾರದು ಎಂದು ಮಾಧ್ಯಮದವರ ಮೇಲೆಯೇ ಗರಂಭ ಆದರು.
ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು ಎಂದು ಒಕ್ಕಲಿಗ ಮತ್ತು ಅಹಿಂದ ಸ್ವಾಮೀಜಿಗಳು ಒತ್ತಡ ಹೇರುತ್ತಿರುವ ವಿಚಾರವಾಗಿ ಮಾತನಾಡುವುದನ್ನು ಸಚಿವರು ಸಂಪೂರ್ಣವಾಗಿ ನಿರಾಕರಿಸಿದರು. ಯಾರು ಏನೇ ಮಾಡಿದರೂ ಹೈಕಮಾಂಡ್ ನಾವು ಇತ್ಯರ್ಥ ಮಾಡ್ತೀವಿ ಅಂತ ದೊಡ್ಡವರು ಹೇಳಿರೋದ್ರಿಂದ, I don't think we should really speak about that. ನಾನು ಏನು ಹೇಳೋದಕ್ಕೆ ಹೋಗಲ್ಲ. ಹೈಕಮಾಂಡ್ ವಿಚಾರಗಳನ್ನ ನಾನು ಇಲ್ಲಿ ಹೇಳಲು ಬರುತ್ತಾ? ಅಥವಾ ಯಾರಾದರೂ ಇಲ್ಲಿ ತೀರ್ಮಾನ ಮಾಡೋಕೆ ಆಗುತ್ತಾ? ಈ ವಿಚಾರಕ್ಕೆ ನೀವು ಏನೇ ಮಾಡಿದರೂ ಡೆಲ್ಲಿಯವರು ಉತ್ತರ ಕೊಡ್ತಾರೆ, ನಾವು ಕೊಡೋದಿಲ್ಲ' ಎಂದರು.
ಗೊಂದಲ ಇರುವುದು ಮಾಧ್ಯಮಗಳಲ್ಲಿ:
ನಾಯಕತ್ವ ಬದಲಾವಣೆ ಬಗ್ಗೆ ತಮ್ಮ ನಿಲುವು ಏನು ಎಂದು ಕೇಳಿದಾಗ, 'ಸುಮ್ಮನೆ ಇಲ್ಲದೇ ಇರೋದನ್ನ ಹಚ್ಚಲು ಹೋಗಬೇಡಿ. ಡೆಲ್ಲಿಯವರು ತೀರ್ಮಾನ ಮಾಡ್ತಾರೆ ಎಂದರು. ಈ ವೇಳೆ 'ನಿಮ್ಮ ಸ್ಟ್ಯಾಂಡ್ ಯಾರ ಪರ?' ಎಂಬ ಪ್ರಶ್ನೆಗೆ, 'ನಿಮಗೆ ಯಾಕ್ರಯ್ಯಾ ಹೇಳಬೇಕು' ಎಂದು ನೇರವಾಗಿ ಉತ್ತರಿಸಲು ನಿರಾಕರಿಸಿದರು.
140 ಶಾಸಕರಲ್ಲಿ ಗೊಂದಲ ಇದೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ಗೊಂದಲ ಇರುವುದು ನಿಮ್ಮ ಮಾಧ್ಯಮದಲ್ಲಿ ಮಾತ್ರ, ನಮ್ಮಲ್ಲಿ ಏನೂ ಇಲ್ಲ. ಅದರಲ್ಲೂ ನನ್ನಲ್ಲಿ ಏನೂ ಇಲ್ಲ ಎಂದು ಹೇಳಿದರು, ಚರ್ಚೆ ಆಗಿದ್ದರೆ ವೈಯಕ್ತಿಕವಾಗಿ ಮಾಡಿದವರು ದೆಹಲಿಯಲ್ಲಿ ಉತ್ತರ ಕೊಡುತ್ತಾರೆ ಎಂದು ಹೇಳಿ ಸಚಿವ ಎಚ್‌ಕೆ ಪಾಟೀಲ್ ಅವರನ್ನು ಕೇಳುವಂತೆ ಹೇಳಿ ಅಲ್ಲಿಂದ ಹೊರಟುಹೋದರು.


