ಕೊಡಗಿನ ಭಾಗಮಂಡಲದ ಭಗಂಡೇಶ್ವರ ದೇವಾಲಯದ ಆದಾಯ ಹೆಚ್ಚಿಸಲು ಜಿಲ್ಲಾಡಳಿತವು ದೇಗುಲದ ಮುಂದೆ ಅಂಗಡಿ ಮಳಿಗೆಗಳನ್ನು ನಿರ್ಮಿಸುತ್ತಿದೆ. ಆದರೆ, ಈ ನಿರ್ಮಾಣದಿಂದ ದೇವಾಲಯದ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ ಮತ್ತು ಇದು ನಿಯಮಬಾಹಿರ ಎಂದು ಸ್ಥಳೀಯರು ಹಾಗೂ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು(ಡಿ.14) : ಕೊಡಗು ಜಿಲ್ಲೆಯ ಪುಣ್ಯ ಕ್ಷೇತ್ರವಾಗಿರುವ ಮಡಿಕೇರಿ ತಾಲ್ಲೂಕಿನ ಭಾಗಮಂಡಲದಲ್ಲಿ ಐತಿಹಾಸಿಕ ಭಗಂಡೇಶ್ವರ ದೇವಾಲಯವಿದೆ. ಈ ದೇವಾಲಯದ ಅಭಿವೃದ್ಧಿಗೆ ಆದಾಯದ ಮೂಲಗಳನ್ನು ಹುಡುಕಬೇಕೆಂದು ಜಿಲ್ಲಾಡಳಿತ ದೇವಾಲಯದ ಮುಂಭಾಗದಲ್ಲಿ ಅಂಗಡಿ ಮಳಿಗೆಗಳ ನಿರ್ಮಾಣ ಕಾರ್ಯನಡೆಸುತ್ತಿದೆ. ಆದರೆ ದೇವಾಲಯದ ಮುಂಭಾಗದಲ್ಲೇ ಈ ರೀತಿ ಅಂಗಡಿ ಮಳಿಗೆಗಳನ್ನು ನಿರ್ಮಿಸುತ್ತಿರುವುದು ದೇವಾಲಯ ಒಟ್ಟು ನೋಟಕ್ಕೆ ಧಕ್ಕೆ ತರಲಿದೆ ಎಂದು ಸ್ಥಳೀಯರು ಹಾಗೂ ದೇವಾಲಯದ ಭಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ಸ್ಥಗಿತಗೊಳಿಸದಿದ್ದರೆ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲು ಸಜ್ಜಾಗುತ್ತಿದ್ದಾರೆ.

ಹೌದು ಭಾಗಮಂಡಲದ ಭಗಂಡೇಶ್ವರ ದೇವಾಲಯಕ್ಕೆ ಅಷ್ಟೇನು ಆದಾಯವಿಲ್ಲ ಎನ್ನುವುದೇನೋ ಸತ್ಯ. ಹೀಗಾಗಿ ಅಂಗಡಿ ಮಳಿಗೆಗಳನ್ನು ನಿರ್ಮಿಸಿ ಅವುಗಳನ್ನು ಬಾಡಿಗೆಗೆ ನೀಡಿದರೆ ದೇವಾಲಯದ ಅಭಿವೃದ್ಧಿ ಕೆಲಸಕ್ಕೆ ಅನುಕೂಲ ಆಗಲಿದೆ ಎನ್ನುವುದು ಜಿಲ್ಲಾಡಳಿತದ ಆಲೋಚನೆ. ಹಾಗೆಂದು ದೇವಾಲಯ ಮುಂಭಾಗದಲ್ಲಿ ಅಂಗಡಿ ಮಳಿಗೆಗಳನ್ನು ನಿರ್ಮಿಸಿದರೆ ಇಡೀ ದೇವಾಲಯ ಸೌಂದರ್ಯವೇ ಹೊರಟು ಹೋಗಲಿದೆ. ದೇವಾಲಯ ಕಾಣುವ ಬದಲು ಅಂಗಡಿ ಮಳಿಗೆಗಳು ಮಾತ್ರವೇ ಕಾಣಲಿವೆ. ಈಗಾಗಲೇ ಮೇಲ್ಸೇತುವೆ ನಿರ್ಮಿಸಿರುವುದರಿಂದ ದೇವಾಲಯ ಅಂದ ಹಾಳಾಗಿದ್ದು, ಇದೀಗ ಎರಡು ಅಂತಸ್ತಿನ ಕಟ್ಟಡ ನಿರ್ಮಿಸಿದರೆ ದೇವಾಲಯ ಸಂಪೂರ್ಣ ಮರೆಯಲಾಗಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಕಾವೇರಿ ನದಿ ಮತ್ತು ತ್ರಿವೇಣಿ ಸಂಗಮ ಇಲ್ಲಿಯೇ ಇದ್ದು, ಬಫರ್ಝೋನ್ ಇದೆ. ಬಫರ್ ಝೋನ್ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಮಾಡದಂತೆ ನಿಯಮಗಳಿವೆ. ಆದರೂ ಜಿಲ್ಲಾಡಳಿತದಿಂದ ಕಾಮಗಾರಿ ಮಾಡಲಾಗುತ್ತಿದೆ ಎನ್ನುವುದಾದರೆ ಅವರಿಗೆ ಈ ನಿಯಮಗಳು ಅನ್ವಯವಾಗುವುದಿಲ್ಲವೇ. ಇವೆಲ್ಲವನ್ನೂ ಉಲ್ಲಂಘಿಸಿ ಕಾಮಗಾರಿ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ದೇವಾಲಯದಲ್ಲಿ ಯಾವುದೇ ಕಾಮಗಾರಿ ನಡೆಸಬೇಕಾದರೂ ಶಾಸ್ತ್ರೋಕ್ತವಾಗಿ ಅಷ್ಟಮಂಗಲ ಪ್ರಶ್ನೆಗಳನ್ನು ಕೇಳಿಯೇ ಕಾಮಗಾರಿ ನಡೆಸುತ್ತೇವೆ. ಆದರೆ ಜಿಲ್ಲಾಡಳಿತ ಇದ್ಯಾವುದನ್ನೂ ಪಾಲಿಸದೆ ಏಕಾಏಕಿ ಕಾಮಗಾರಿಗೆ ಮುಂದಾಗಿರುವುದು ನಮ್ಮ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸಿದಂತೆ ಆಗುತ್ತಿದೆ ಎಂದು ಭಾಗಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳದೆ ಕಾಮಗಾರಿ ಮುಂದುವರಿಸಿದ್ದೇ ಆದಲ್ಲಿ ತೀವ್ರ ಹೋರಾಟ ನಡೆಸುತ್ತೇವೆ ಎಂದಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ದೇವಾಲಯದ ಕಾರ್ಯನಿರ್ವಹಣ ಅಧಿಕಾರಿ ಚಂದ್ರಶೇಖರ್ ದೇವಾಲಯದ ಹೊರಭಾಗದಲ್ಲಿ ಕಾಮಗಾರಿಯನ್ನು ಮಾಡುತ್ತಿದ್ದೇವೆ. ಇದರಿಂದ ದೇವಾಲಯ ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ. ದೇವಾಲಯದ ಹೊರಭಾಗದಲ್ಲಿ ಕಾಮಗಾರಿ ಮಾಡುತ್ತಿದ್ದೇವೆ. ಮಳೆಗಾಲದಲ್ಲಿ ನೀರು ತುಂಬಿದರೂ ಯಾವುದೇ ಸಮಸ್ಯೆ ಆಗದಂತೆ ಅಷ್ಟೇ ಎತ್ತರಕ್ಕೆ ತಳಪಾಯವನ್ನು ಎತ್ತರಿಸಿ ಅಂಗಡಿ ಮಳಿಗೆಗಳನ್ನು ನಿರ್ಮಿಸುತ್ತೇವೆ. ಅವುಗಳ ಮೇಲ್ಭಾಗದಲ್ಲಿ ದೇವಾಲಯದ ಲಡ್ಡು, ಪ್ರಸಾದಗಳನ್ನು ಶೇಖರಿಸಿಟ್ಟುಕೊಳ್ಳಲು ಕೊಠಡಿಗಳು ಇರಲಿವೆ. ಇದನ್ನು ಭಕ್ತರು ಅರ್ಥ ಮಾಡಿಕೊಂಡು ದೇವಾಲಯದ ಅಭಿವೃದ್ಧಿಗೆ ಸಹಕರಿಸಬೇಕು ಎಂದಿದ್ದಾರೆ.

ಏನೇ ಆಗಲಿ ದೇವಾಲಯದ ಅಭಿವೃದ್ಧಿಗಾಗಿ ಹಣಬೇಕೆಂದು ದೇವಾಲಯದ ಮುಂಭಾಗದಲ್ಲಿ ಅಂಗಡಿ ಮಳಿಗೆಗಳನ್ನು ನಿರ್ಮಿಸುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆದರೆ ಜಿಲ್ಲಾಡಳಿತ ಅಥವಾ ದೇವಾಲಯ ಆಡಳಿತಾಧಿಕಾರಿಗಳು ಅದ್ಯಾವ ಕ್ರಮ ಕೈಗೊಳ್ಳುತ್ತಾರೆಯೋ ಕಾದು ನೋಡಬೇಕಾಗಿದೆ.