ಬೆಡ್ತಿ-ವರದಾ ನದಿ ಜೋಡಣೆ ಯೋಜನೆಗೆ ತಪ್ಪು ಕಲ್ಪನೆಯಿಂದ ವಿರೋಧಿಸುವುದು ಬೇಡವೆಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ. ಪರಿಷ್ಕೃತ ಯೋಜನೆಯಡಿ ಕೇವಲ 10% ನೀರನ್ನು ಮಾತ್ರ ಬಳಸಿಕೊಳ್ಳಲಾಗುವುದು ಮತ್ತು ಇದರಿಂದ ನದಿ ಹರಿವಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹಾವೇರಿ (ಡಿ.14): ಬೆಡ್ತಿ ವರದಾ ನದಿ ಜೋಡಣೆಗೆ ತಪ್ಪು ಕಲ್ಪನೆಯಿಂದ ವಿರೋಧ ಮಾಡಿವುದು ಬೇಡ, ನೀರಿನ ಸದ್ಬಳಕೆಗೆ ಮಾಡಿರುವ ಯೋಜನೆ ಪರಿಷ್ಕರಣೆ ಆಗಿದೆ. ಶೇ 10% ಮಾತ್ರ ನೀರನ್ನು ಬಳಸಿಕೊಳ್ಳಲು ಯೋಜಿಸಿದ್ದು, ಒಟ್ಟು ನೀರಿನ ಹರಿವಿಗೆ ಯಾವುದೇ ತೊಂದರೆಯಿಲ್ಲ, ದಯವಿಟ್ಟು ಯೋಜನೆಗೆ ಸಹಕಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಪರಮ ಪೂಜ್ಯ ಸ್ವರ್ಣವಲ್ಲಿ ಶ್ರೀಗಳ ನೇತೃತ್ವದಲ್ಲಿ ಬೆಡ್ತಿ - ವರದಾ ಕುರಿತು ಚರ್ಚೆ ಮಾಡಿದ್ದಾರೆ. ಬೆಡ್ತಿ ಯೋಜನೆಗೆ ಆಕ್ಷೇಪ ವ್ಯಕ್ರ ಪಡಿಸಿದ್ದಾರೆ. ನಾವು ಆ ಭಾಗದ ಜನರ ಗುರುಗಳ ಭಾವನೆ ಗೌರವಿಸುತ್ತೇವೆ. ತಪ್ಪು ಕಲ್ಪನೆ ಮೇಲೆ ವಿರೋಧ ಮಾಡುವುದು ಬೇಡ ಅನ್ನುವ ಮನವಿಯನ್ನು ಆದರ ಪೂರಕವಾಗಿ ಮಾಡುತ್ತೇನೆ ಎಂದರು.

ಈ ಯೋಜನೆ ಸುಮಾರು 30 ವರ್ಷದಿಂದ ಇದೆ. ನ್ಯಾಷನಲ್ ವಾಟರ್ ಡೆವಲಪ್ಮೆಂಟ್ ಆಥಾರಿಟಿ ಯಿಂದ ಬಂದಿರುವ ಯೋಜನೆ. ದಕ್ಷಿಣ ಭಾರತದ ಪ್ರಮುಖ 3 ಯೋಜನೆಗಳಲ್ಲಿ ಇದು ಒಂದು. ಈಗಿರುವ ರಾಜಕಾರಣಿಗಳು ಆಗ ಯಾರೂ ರಾಜಕಾರಣದಲ್ಲಿ ಇರಲೇ ಇಲ್ಲ ಎಂದು ಹೇಳಿದರು.

ಕೇವಲ 10% ರಷ್ಟು ನೀರು ಮಾತ್ರ ಬಳಕೆ

ಇದು ನೀರಿನ ಸದ್ಬಳಕೆಗೆ ಮಾಡಿರುವ ಯೋಜನೆ. ಈಗ ಯೋಜನೆ ಪರಿಷ್ಕರಿಣೆ ಆಗಿದೆ. ಸಣ್ಣ ಬ್ಯಾರೇಜ್ ಮಾಡಿ ಲಿಪ್ಟ್ ಮಾಡಲಾಗುತ್ತದೆ‌ ಯಾವುದೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗುವುದಿಲ್ಲ. ನದಿಯ ಕೇವಲ 10% ರಷ್ಟು ನೀರು ಮಾತ್ರ ತೆಗೆದುಕೊಳ್ಳಬೇಕು ಅನ್ನುವ ಚಿಂತನೆ ಇದೆ. ಹೀಗಾಗಿ ನದಿ ಪಾತ್ರದ ನೀರಿನ ಹರಿವಿಗೆ ಯಾವುದೇ ತೊಂದರೆ ಇಲ್ಲ. ಈ ಯೋಜನೆಗೆ ಡಿ ಪಿಆರ್ ಆಗಬೇಕು ಪರಿಸರದ ಪರಿಣಾಮಗಳ ಅಧ್ಯಯನ ಆಗಬೇಕು. ಅದರ ಸಾಧಕ ಬಾಧಕ ನೋಡುತ್ತಾರೆ. ಇದೆಲ್ಲ ಪ್ರಕ್ರಿಯೆ ಇದೆ. ದಯವಿಟ್ಟು ಸಹಕಾರ ಮಾಡಬೇಕು ಎಂದು ಮನವಿ ಮಾಡಿದರು.

ನೀರಿನ ಸಂಪತ್ತು ಸದ್ಬಳಕೆ ಆಗಬೇಕು

ಈ ನದಿ ಜೋಡಣೆ ಯೋಜನೆ ಸಂಪೂರ್ಣ ವಿವರ ಬಂದಾಗ ಪರಿಣಿತರು ತೀರ್ಮಾನ ಮಾಡುತ್ತಾರೆ. ನೀರಿನ ಸಂಪತ್ತು ಸದ್ಬಳಕೆ ಆಗಬೇಕು. ನೀರೇ ಇಲ್ಲದ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕೂಡ ಇದೆ. ನಾವು ಮಳೆಗಾಲದಲ್ಲಿ ನೀರು ಹಿಡಿದಿಟ್ಟು ಬೇಸಿಗೆಯಲ್ಲಿ ನೀರು ಉಪಯೋಗಿಸ್ತೇವೆ‌ ಬರ ಪ್ರದೇಶಕ್ಕೆ ಈ ನೀರು ಅನುಕೂಲ ಅಗುತ್ತದೆ. ಒಬ್ಬರಿಗೊಬ್ಬರು ಸಹಕಾರ ಕೊಡಬೇಕು. ಯೋಜನೆಯಿಂದ ಯಾವುದೇ ತೊಂದರೆ ಇಲ್ಲ. ಇದರಿಂದ ಬರ ಪೀಡಿತ ಹಾವೇರಿ ಮತ್ತು ಇತರ ಜಿಲ್ಲೆಗೆ ಅನುಕೂಲ ಆಗುತ್ತದೆ ಎಂದು ಹೇಳಿದರು.