ರಾಜ್ಯ ಸರ್ಕಾರದ ಋತುಚಕ್ರದ ರಜೆ ಘೋಷಣೆಗೆ ಕೃತಜ್ಞತೆ ಸಲ್ಲಿಸಿದ ಮಹಿಳಾ ನೌಕರರನ್ನುದ್ದೇಶಿಸಿ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದರು. ಇದೇ ಅಧಿವೇಶನದಲ್ಲಿ ರಜೆಗೆ ಕಾನೂನು ತರುವ ಭರವಸೆ ನೀಡಿದ ಅವರು, ಮಹಿಳೆಯರು ನಾಯಕತ್ವ ಬೆಳೆಸಿಕೊಳ್ಳಬೇಕೇ ವಿನಃ ಜಾತಿ ಸಂಘಗಳನ್ನು ಕಟ್ಟಬಾರದು ಎಂದು ಸಲಹೆ ನೀಡಿದರು.
ಬೆಂಗಳೂರು (ಡಿ.04): ರಾಜ್ಯ ಸರ್ಕಾರವು ಇತ್ತೀಚೆಗೆ ಮಹಿಳಾ ನೌಕರರಿಗೆ ಋತುಚಕ್ರದ ರಜೆ (Menstrual Leave) ಘೋಷಣೆ ಮಾಡಿದ ಹಿನ್ನೆಲೆಯಲ್ಲಿ, ನೂರಾರು ಮಹಿಳಾ ನೌಕರರು ಇಂದು ಮುಖ್ಯಮಂತ್ರಿ (CM) ಮತ್ತು ಉಪಮುಖ್ಯಮಂತ್ರಿ (DCM) ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ (ಡಿಕೆಶಿ) ಅವರು ಭಾವನಾತ್ಮಕ ಮತ್ತು ಸ್ಫೂರ್ತಿದಾಯಕ ಮಾತುಗಳನ್ನಾಡಿದರು.
ಬೆಳ್ಳಿ ಕಿರೀಟ ನಿರಾಕರಿಸಿದ ಸಿಎಂ, ಸ್ವೀಕರಿಸಿದ ಡಿಸಿಎಂ
ಮಹಿಳಾ ನೌಕರರು ತಮ್ಮ ಕೃತಜ್ಞತೆಯ ಸಂಕೇತವಾಗಿ ಸಿಎಂ ಹಾಗೂ ಡಿಸಿಎಂ ಅವರಿಗೆ ಬೆಳ್ಳಿ ಕಿರೀಟ ಹಾಕಲು ಮುಂದಾದರು. ಮುಖ್ಯಮಂತ್ರಿಗಳು ಬೆಳ್ಳಿ ಕಿರೀಟ ಹಾಕಿಸಿಕೊಳ್ಳಲು ನಯವಾಗಿ ನಿರಾಕರಿಸಿದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹಿಳಾ ನೌಕರರ ಪ್ರೀತಿಯ ಕಾಣಿಕೆಯನ್ನು ಸ್ವೀಕರಿಸಿ, ಬೆಳ್ಳಿ ಕಿರೀಟವನ್ನು ಹಾಕಿಸಿಕೊಂಡರು.
ಋತುಚಕ್ರದ ರಜೆ'ಗೆ ಇದೇ ಅಧಿವೇಶನದಲ್ಲಿ ಕಾನೂನು: ಡಿಕೆಶಿ ಭರವಸೆ
ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿಕೆಶಿ ಅವರು, ಮಹಿಳಾ ನೌಕರರ ಪ್ರಮುಖ ಬೇಡಿಕೆಯಾಗಿದ್ದ ಋತುಚಕ್ರದ ರಜೆಯನ್ನು ಘೋಷಿಸಿದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. 'ಈ ಋತುಚಕ್ರದ ರಜೆಯ ಕುರಿತು ಕಾನೂನನ್ನು ಇದೇ ಅಸೆಂಬ್ಲಿಯಲ್ಲಿ (ಅಧಿವೇಶನದಲ್ಲಿ) ತರಲು ನಾವು ಬಯಸಿದ್ದೇವೆ. ಕಾನೂನು ಸಚಿವರು ಈ ಬಗ್ಗೆ ಭರವಸೆ ಕೊಟ್ಟಿದ್ದಾರೆ' ಎಂದು ಘೋಷಿಸಿ, ಮಹಿಳಾ ನೌಕರರಿಗೆ ಮತ್ತಷ್ಟು ಭರವಸೆ ನೀಡಿದರು. ನಾವು ಕೇವಲ Complaint Box ಆಗಬಾರದು, ಹೋರಾಟದ ಶಕ್ತಿ ಆಗಬೇಕು. ಸಂಘಟನೆ ಬಹಳ ಮುಖ್ಯ" ಎಂದು ಹೇಳಿದ ಅವರು, ಮಹಿಳೆಯರು ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕು ಎಂದು ಕಿವಿಮಾತು ಹೇಳಿದರು.
ನಾಯಕತ್ವ ಬೆಳೆಸಿಕೊಳ್ಳಿ, ಜಾತಿ ಸಂಘ ಕಟ್ಟಬೇಡಿ
ಮಹಿಳೆಯರು ತಮ್ಮ ವೃತ್ತಿ ಮತ್ತು ರಾಜಕೀಯ ಜೀವನದಲ್ಲಿ ನಾಯಕತ್ವ (Leadership) ಬೆಳೆಸಿಕೊಳ್ಳುವ ಮಹತ್ವವನ್ನು ಡಿಕೆಶಿ ಒತ್ತಿ ಹೇಳಿದರು. 'ನಾವು ನಮ್ಮ ಪಕ್ಷದಲ್ಲಿ ಮಹಿಳಾ ನೌಕರರನ್ನು ಗುರುತಿಸಿ ಟಿಕೆಟ್ ಕೊಟ್ಟಿದ್ದೇವು. ಮಹಿಳೆಯರು ಕರುಣೆಯ ತವರು, ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾರೆ. ನನಗಿಂತ ನನ್ನ ಹೆಣ್ಣುಮಕ್ಕಳು ಬಹಳ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ' ಎಂದು ಭಾವುಕರಾದರು. ಅದೇ ಸಮಯದಲ್ಲಿ, ಅವರು ಒಂದು ಮುಖ್ಯ ಸಲಹೆಯನ್ನು ನೀಡಿದರು. 'ನೀವು ಜಾತಿ ಆಧಾರದ ಮೇಲೆ ಸಂಘ ಕಟ್ಟಬಾರದು. ಒಕ್ಕಲಿಗ, ಲಿಂಗಾಯತ, ಹಿಂದುಳಿದವರ ಹೆಸರಿನಲ್ಲಿ ಸಂಘ ಕಟ್ಟಬಾರದು. ಇದು ನನ್ನ ಸಲಹೆ' ಎಂದು ಸ್ಪಷ್ಟಪಡಿಸಿದರು. ಎಲ್ಲಾ ಮಹಿಳಾ ನೌಕರರು ಒಂದೇ ಸೂರಿನಡಿಯಲ್ಲಿ ಸಂಘಟಿತರಾಗಬೇಕು ಎಂಬ ಸಂದೇಶವನ್ನು ನೀಡಿದರು.
ಗ್ಯಾರಂಟಿ ನಮ್ಮ ಮೊದಲ ಆದ್ಯತೆ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳನ್ನು ನೆನಪಿಸಿದ ಡಿಕೆಶಿ, 'ನಾವು ನಮ್ಮ ಮೊದಲ ಗ್ಯಾರಂಟಿ ಅಂತ ಗೃಹ ಲಕ್ಷ್ಮೀ, ಗೃಹ ಜ್ಯೋತಿ, ಶಕ್ತಿ ಯೋಜನೆಗಳನ್ನು ಮಾಡಿದೇವು. ನೀವು ಉಪಕಾರ ಸ್ಮರಣೆ ಇರುವವರು' ಎಂದು ಮಹಿಳಾ ನೌಕರರ ಕೃತಜ್ಞತೆಯನ್ನು ಶ್ಲಾಘಿಸಿದರು. ಮಹಿಳಾ ನೌಕರರಿಗೆ ರಜೆ ಘೋಷಣೆ ಮತ್ತು ಅದನ್ನು ಕಾನೂನುಬದ್ಧಗೊಳಿಸಲು ಸರ್ಕಾರದ ಬದ್ಧತೆ, ಮಹಿಳಾ ಸಂಘಟನೆ ಮತ್ತು ನಾಯಕತ್ವದ ಬಗ್ಗೆ ಡಿ.ಕೆ.ಶಿವಕುಮಾರ್ ಅವರ ಮಾತುಗಳು ಈ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದವು.


