ಬೆಲೆ ಏರಿಕೆ ಮೂಲಕ ಈ ಸರ್ಕಾರ ಜನರಿಗೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. ಪಂಚ ಗ್ಯಾರಂಟಿ ಅಮಲಿನಲ್ಲಿ ಸಿದ್ದರಾಮಯ್ಯ, ಬೆಲೆ ಏರಿಕೆಯಿಂದ ಜನತೆ ಪರೇಶಾನ್ ಆಗಿದ್ದಾರೆ. ರಾಜ್ಯದಲ್ಲಿ ಐವತ್ತಕ್ಕೂ ಹೆಚ್ಚು ವಸ್ತುಗಳ ಬೆಲೆ ಏರಿಕೆಯಾಗಿದೆ. ಹಾಗಾಗಿ ಜನರು ತತ್ತರಿಸಿ ಹೋಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ವಾಗ್ದಳಿ ನಡೆಸಿದ್ದಾರೆ.
ಕಲಬುರಗಿ (ಏ.19) : ಬೆಲೆ ಏರಿಕೆ ಮೂಲಕ ಈ ಸರ್ಕಾರ ಜನರಿಗೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. ಪಂಚ ಗ್ಯಾರಂಟಿ ಅಮಲಿನಲ್ಲಿ ಸಿದ್ದರಾಮಯ್ಯ, ಬೆಲೆ ಏರಿಕೆಯಿಂದ ಜನತೆ ಪರೇಶಾನ್ ಆಗಿದ್ದಾರೆ. ರಾಜ್ಯದಲ್ಲಿ ಐವತ್ತಕ್ಕೂ ಹೆಚ್ಚು ವಸ್ತುಗಳ ಬೆಲೆ ಏರಿಕೆಯಾಗಿದೆ. ಹಾಗಾಗಿ ಜನರು ತತ್ತರಿಸಿ ಹೋಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ವಿರುದ್ಧ ವಾಗ್ದಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಜನರು ಸಂತೋಷವಾಗಿದ್ದಾರೆ ಎಂಬ ಭ್ರಮೆಯಲಿದ್ದಾರೆ. ಆದರೆ ನಿನ್ನೆ ಬಿಜಾಪುರದಲ್ಲಿ ನಡೆದ ಜನಾಕ್ರೋಶ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ ನೋಡಿದರೆ ರಾಜ್ಯದಲ್ಲಿ ಜನರು ಸಂತೋಷವಾಗಿಲ್ಲ ಎಂಬುದು ಖಾತ್ರಿಯಾಗುತ್ತದೆ. ಇಷ್ಟು ದಿನಗಳ ಜನಾಕ್ರೋಶ ಯಾತ್ರೆಯಲ್ಲಿ ವಿಜಯಪುರದ ಯಾತ್ರೆ ಅತ್ಯಂತ ಯಶಸ್ವಿಯಾಗಿದೆ ಎಂದರು.
ಸರ್ಕಾರದ ಈ ಜನವಿರೋಧಿ ಹಾಗೂ ಭಂಡತನದ ಕೆಲಸಗಳನ್ನೆಲ್ಲ ಜನತೆ ಮುಂದಿಡುವ ಉದ್ದೇಶದಿಂದ ಶುರುವಾಗಿರುವ ಬಿಜೆಪಿ ಜನಾಕ್ರೋಶ ಯಾತ್ರೆಗೆ ಭಾರಿ ಜನಸ್ಪಂದನೆ ದೊರಕುತ್ತಿದೆ. ಸಿಎಂ ತಮ್ಮ ಗ್ಯಾರಂಟಿಗಳ ಅಮಲಿಮಲ್ಲಿದ್ದಾರೆ. ಆ ಭ್ರಮೆಯಿಂದ ಅವರು ಹೊರಗೆ ಬರಬೇಕು. ಜನ ಬೇಸತ್ತು ಹೋಗಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ: ಜನಿವಾರ ತೆಗೆಸಿದ ಪ್ರಕರಣ: 'ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ..; ಸಿಎಂ ವಿರುದ್ಧ ವಿಜಯೇಂದ್ರ ಕಿಡಿ
ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಸಮಸ್ಯೆ ಆಲಿಸುತ್ತಿಲ್ಲ. ಕೇವಲ ಅಲ್ಪಸಂಖ್ಯಾತರ ಓಲೈಕೆ , ಹಿಂದೂಗಳ ಅಪಮಾನ ಮಾಡುವುದನ್ನೇ ಮುಂದುವರಿಸಿಕೊಂಡು ಹೊರಟಿದ್ದಾರೆ. ಬಿಜೆಪಿ ಜನಾಕ್ರೋಶ ಯಾತ್ರೆಯಿಂದ ರಾಜ್ಯ ಸರ್ಕಾರದ ಬಣ್ಣ ಬಯಲಾಗಿದೆ ಎಂದರು.
ಮುಖ್ಯಮಂತ್ರಿಗಳ ಪ್ರೀತಿಗೆ ಪಾತ್ರವಾದ ಜಾತಿಗಣತಿ ಬಗ್ಗೆ ನಿನ್ನೆ ಸಚಿವ ಸಂಪುಟ ಸಭೆ ನಡೆಸಿದರು. ಆದರೆ ಅಲ್ಲಿ ಏನೂ ಆಗಲಿಲ್ಲ. ಮುಖ್ಯಮಂತ್ರಿಗಳಿಗೆ ಇಚ್ಚಾಶಕ್ತಿ, ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡಿಸುವ ಚಿಂತನೆ ಇಲ್ಲ ಎಂಬುದು ಇದರಿಂದ ಖಾತ್ರಿಯಾಗಿದೆ. ಹಾಗೊಂದು ವೇಳೆ ಮುಖ್ಯಮಂತ್ರಿಗಳಿಗೆ ಪರಿಶಿಷ್ಟರು ಹಾಗೂ ಹಿಂದುಳಿದವರ ಬಗ್ಗೆ ಪ್ರೀತಿ ಇದ್ದಿದ್ದರೆ ಎಸ್ಸಿಪಿ-ಟಿಎಸ್ಪಿ ಪಾಲಿನ ಹಣ ವ್ಯಯ ಮಾಡುತ್ತಿರಲಿಲ್ಲ ಎಂದರು.
ನಿನ್ನೆ ಮುಖ್ಯಮಂತ್ರಿಗಳು ತಮ್ಮ ಅವಧಿಯಲ್ಲಿ ಹೊಸ ಅನುಭವ ಮಂಟಪ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ಬಸವಣ್ಣನವರ ಬಗ್ಗೆ ಮಾತಾಡಬೇಕಾದರೆ ಮುಖ್ಯಮಂತ್ರಿಗಳು ತಿಳಿದುಕೊಂಡು ಮಾತನಾಡಬೇಕು. ಬಸವಣ್ಣನವರು ನುಡಿದಂತೆ ನಡೆದವರು. ಇನ್ನೊಂದೆಡೆ ಸಿದ್ದರಾಮಯ್ಯ ವೀರಶೈವ ಲಿಂಗಾಯತರ ಮಧ್ಯೆ ಪ್ರತ್ಯೇಕ ಧರ್ಮದ ಬಗ್ಗೆ ಬೆಂಕಿ ಹಚ್ಚುವುದಕ್ಕೆ ಮುಂದಾಗಿದ್ದರು ಎಂದರು.
ಇದನ್ನೂ ಓದಿ: ಚಿತ್ತಾಪುರ ಮರಳು ಗಣಿಗಾರಿಕೆ ಸ್ಥಳಕ್ಕೆ ವಿಜಯೇಂದ್ರ ದಿಢೀರ್ ಭೇಟಿ, ಖರ್ಗೆ ಬೆಂಬಲಿಗರಿಂದ ಕಿರಿಕ್!
ಸ್ವತಃ ಡಿಕೆಶಿಯವರೇ ನಾವು ಧರ್ಮ ಒಡೆಯುವುದಾಗಿ ಹೇಳಿದ್ದರು. ಹಾಗಾಗಿ ಅನುಭವ ಮಂಟಪ ಮುಗಿಸುವುದಕ್ಕಿಂತ ಹೆಚ್ಚಾಗಿ ನಿಮ್ಮ ನಡೆಯನ್ನು ಜನರು ಗಮನಿಸುತ್ತಿದ್ದಾರೆ. ನೀವು ನಾಡಿನ ಮುಖ್ಯಮಂತ್ರಿಯೋ ಅಥವಾ ಮುಸ್ಲಿಮರ ಮುಖ್ಯಮಂತ್ರಿಯೋ ಎಂದು ಜನರು ಮಾತನಾಡುತ್ತಿದ್ದಾರೆ. ನಿಮ್ಮ ಅವಧಿಯಲ್ಲಿ ಅನುಭವ ಮಂಟಪ ಮುಗಿಸಲು ಡಿಕೆಶಿ ಬಿಡುತ್ತಾರೋ ಇಲ್ಲವೋ ಗೋತ್ತಿಲ್ಲ ಎಂದು ಟಾಂಗ್ ನೀಡಿದರು.
