ಸಿಇಟಿ ಪರೀಕ್ಷೆಗೆ ತೆರಳಿದ್ದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಲಬುರಗಿಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಘಟನೆಯನ್ನು ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯ ಆಡಳಿತ ವೈಖರಿಯನ್ನ ತೋರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಡೆದು ಆಳುವ ರಾಜಕಾರಣವೇ ಇಂತಹ ಕೃತ್ಯಗಳಿಗೆ ಪ್ರೇರಣೆಯಾಗಿದೆ ಎಂದು ಆರೋಪಿಸಿದ್ದಾರೆ.

ಕಲಬುರಗಿ (ಏ.18) ಸಿಇಟಿ ಪರೀಕ್ಷೆಗೆ ತೆರಳಿದ್ದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಲಬುರಗಿಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಘಟನೆಯನ್ನು ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯ ಆಡಳಿತ ವೈಖರಿಯನ್ನ ತೋರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಡೆದು ಆಳುವ ರಾಜಕಾರಣವೇ ಇಂತಹ ಕೃತ್ಯಗಳಿಗೆ ಪ್ರೇರಣೆಯಾಗಿದೆ ಎಂದು ಆರೋಪಿಸಿದ್ದಾರೆ.

'ಹಿರಿಯಕ್ಕನ ಚಾಳಿನೆ ಮಂದಿಗೆ ಅನ್ನೋ ಗಾದೆ ಮಾತೇ ಇದೆ. ನಾಡಿನ ದೊರೆ (ಸಿದ್ದರಾಮಯ್ಯ) ಅವರ ಚಾಳಿ ಎಲ್ಲಾ ಅಧಿಕಾರಿಗಳಿಗೂ ಬಂದಿದೆ. ಇದು ಸರಿಯಲ್ಲ,' ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಸಿಎಂ ಸಿದ್ದರಾಮಯ್ಯ ಅವರ ಆಡಳಿತ ವೈಖರಿಯೇ ಸಮಾಜದಲ್ಲಿ ಒಡಕು ಸೃಷ್ಟಿಸುವ ಕೆಲಸ ಮಾಡುತ್ತಿದೆ. ಬೇರೆ ಬೇರೆ ಸಮುದಾಯಗಳ ನಡುವೆ ಬೆಂಕಿ ಹಚ್ಚುವ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ. ಇದು ಅಧಿಕಾರಿಗಳಿಗೂ ಪ್ರೇರಣೆಯಾಗಿರಬಹುದು. ಹೀಗಾಗಿ ಇಂಥ ಘಟನೆಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಜನರೇ ಉತ್ತರ ಕೊಡುತ್ತಾರೆ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಜನಿವಾರ ತೆಗೆಯದ್ದಕ್ಕೆ ಸಿಇಟಿಯೇ ಇಲ್ಲ, ಬಿಇ ಕನಸು ನುಚ್ಚುನೂರು!

ಈ ಘಟನೆಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಮೂಡಿದ್ದು, ಸರ್ಕಾರ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಘಟನೆ ಹಿನ್ನೆಲೆ

ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ರಾಜ್ಯಾದ್ಯಂತ ನಡೆದ ಸಿಇಟಿ ಸಂದರ್ಭದಲ್ಲಿ ಶಿವಮೊಗ್ಗ ಮತ್ತು ಬೀದರ್‌ನಲ್ಲಿ ಅಧಿಕಾರಿಗಳು ತಪಾಸಣೆ ವೇಳೆ ವಿದ್ಯಾರ್ಥಿಗಳಿಗೆ ಜನಿವಾರ ತೆಗೆದು ಹಾಕುವಂತೆ ಸೂಚಿಸಿದ್ದರು. ಬೀದರ್ ಸಾಯಿಸ್ಫೂರ್ತಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬ ಜನಿವಾರ ತೆಗೆಯಲೊಪ್ಪದೆ ಸಿಇಟಿ ಗಣಿತ ಪರೀಕ್ಷೆಯಿಂದಲೇ ಹೊರಗುಳಿದಿದ್ದು, ಆತನ ಎಂಜಿನಿಯರಿಂಗ್‌ ಕನಸು ಭಗ್ನಗೊಂಡಿದೆ. ಇತ್ತ ಶಿವಮೊಗ್ಗದಲ್ಲೂ ಜನಿವಾರ ತೆಗೆಸಿದ ಘಟನೆಯೂ ನಡೆದಿದೆ. ಇದರ ವಿರುದ್ಧ ಬ್ರಾಹ್ಮಣ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿವೆ.