ಕರ್ನಾಟಕ ಸರ್ಕಾರವು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ, ಪಾಮ್ ಆಯಿಲ್ ಮತ್ತು ರಾಸಾಯನಿಕಗಳಿಂದ ತಯಾರಿಸಲಾಗುವ 'ಅನಲಾಗ್ ಪನ್ನೀರ್' ಮಾರಾಟ ಮತ್ತು ಬಳಕೆಯನ್ನು ರಾಜ್ಯಾದ್ಯಂತ ಒಂದು ವರ್ಷದ ಅವಧಿಗೆ ನಿಷೇಧಿಸಿದೆ. ಹೋಟೆಲ್‌ಗಳಲ್ಲಿ ಅಸಲಿ ಪನ್ನೀರ್ ಎಂದು ನಂಬಿಸಿ ಮಾರಾಟ ಮಾಡುತ್ತಿದ್ದ ಈ ನಕಲಿ ಪನ್ನೀರ್ ಸೇವನೆಯು ಹೃದಯಾಘಾತ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಬೆಂಗಳೂರು: ಪನ್ನೀರ್ ಪ್ರಿಯರಿಗೆ ಮತ್ತು ಆಹಾರ ಪ್ರಿಯರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆಯನ್ನು ತಡೆಯುವ ಉದ್ದೇಶದಿಂದ, ಕೃತಕವಾಗಿ ತಯಾರಿಸಲಾಗುವ ‘ಅನಲಾಗ್ ಪನ್ನೀರ್’ (Analogue Paneer) ಮಾರಾಟ ಮತ್ತು ಬಳಕೆಯನ್ನು ರಾಜ್ಯಾದ್ಯಂತ ಒಂದು ವರ್ಷದ ಅವಧಿಗೆ ನಿಷೇಧಿಸಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.

ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ವಿರುದ್ಧ ಕಠಿಣ ಕ್ರಮ

ರಾಜ್ಯದ ಹಲವು ಹೋಟೆಲ್, ರೆಸ್ಟೋರೆಂಟ್ ಹಾಗೂ ಧಾಬಾಗಳಲ್ಲಿ ಅಸಲಿ ಡೈರಿ ಪನ್ನೀರ್ ಬದಲಿಗೆ, ಅತ್ಯಂತ ಕಡಿಮೆ ವೆಚ್ಚದಲ್ಲಿ ಸಿಗುವ ಕೃತಕ ಅನಲಾಗ್ ಪನ್ನೀರ್ ಅನ್ನು ಗ್ರಾಹಕರಿಗೆ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಆಹಾರ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿ ಅನಲಾಗ್ ಪನ್ನೀರ್ ಮಾರಾಟ ಮಾಡುವ ಹಾಗೂ ಬಳಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಛತ್ತೀಸ್‌ಗಢ, ಮಹಾರಾಷ್ಟ್ರ, ಗುಜರಾತ್ ಹಾಗೂ ಹಿಮಾಚಲ ಪ್ರದೇಶಗಳ ಬಳಿಕ ಇದೀಗ ಕರ್ನಾಟಕದಲ್ಲೂ ನಕಲಿ ಮತ್ತು ಕೃತಕ ಪನ್ನೀರ್ ವಿರುದ್ಧ ಕಠಿಣ ಕ್ರಮ ಜರುಗಿಸಲು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.

ಏನಿದು ‘ಅನಲಾಗ್ ಪನ್ನೀರ್’?

ನೋಡಲು ತದ್ರೂಪು ಅಸಲಿ ಪನ್ನೀರ್‌ನಂತೆಯೇ ಕಾಣುವ ಇದು, ವಾಸ್ತವವಾಗಿ ಅಸಲಿ ಹಾಲಿನಿಂದ ತಯಾರಿಸಿದ್ದಲ್ಲ! ಹಾಲಿನ ಬದಲಾಗಿ ಆರೋಗ್ಯಕ್ಕೆ ಹಾನಿಕಾರಕವಾದ ಪಾಮ್ ಆಯಿಲ್, ಸಸ್ಯಜನ್ಯ ಕೊಬ್ಬು (Vegetable Fat), ರಾಸಾಯನಿಕಗಳು ಮತ್ತು ಎಮಲ್ಸಿಫೈಯರ್‌ಗಳನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. ಇದು ಅಸಲಿ ಪನ್ನೀರ್‌ಗಿಂತ ಅತ್ಯಂತ ಅಗ್ಗವಾಗಿದ್ದು, ಹೆಚ್ಚಿನ ದಿನಗಳ ಕಾಲ ಹಾಳಾಗದಂತೆ ಸಂಗ್ರಹಿಸಿಡಬಹುದು. ಕಡಿಮೆ ಬೆಲೆಗೆ ಸಿಗುತ್ತದೆ ಮತ್ತು ಸುಲಭವಾಗಿ ಕೆಡುವುದಿಲ್ಲ ಎಂಬ ಕಾರಣಕ್ಕೆ ಹೆಚ್ಚಿನ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳು ಲಾಭದ ಆಸೆಗೆ ಬಿದ್ದು, ಗ್ರಾಹಕರಿಗೆ ಅಸಲಿ ಪನ್ನೀರ್ ಎಂದು ನಂಬಿಸಿ ಇದನ್ನೇ ಉಣಿಸುತ್ತಿದ್ದವು.

ಆರೋಗ್ಯದ ಮೇಲಾಗುವ ಭೀಕರ ಪರಿಣಾಮಗಳು

ಸಾರ್ವಜನಿಕ ಆರೋಗ್ಯದ ಮೇಲೆ ತೀವ್ರವಾದ ಮತ್ತು ಗಂಭೀರವಾದ ದುಷ್ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಈ ನಿಷೇಧ ಹೇರಲಾಗಿದೆ. ಅನಲಾಗ್ ಪನ್ನೀರ್ ಸೇವನೆಯಿಂದ ಉಂಟಾಗುವ ಪ್ರಮುಖ ಅಪಾಯಗಳೆಂದರೆ ಅಂಗಾಂಗಗಳ ಹಾನಿ, ರಾಸಾಯನಿಕಯುಕ್ತ ಈ ಪನ್ನೀರ್ ಅನ್ನು ದೀರ್ಘಕಾಲ ಸೇವಿಸುವುದರಿಂದ ಕಿಡ್ನಿ ಮತ್ತು ಲಿವರ್ (ಯಕೃತ್ತು) ಸಮಸ್ಯೆಗಳು ತಲೆದೂರುತ್ತವೆ. ಇದರಲ್ಲಿ ಹಾನಿಕಾರಕ ಕೊಬ್ಬು ಮತ್ತು ಪಾಮ್ ಆಯಿಲ್ ಅಧಿಕವಾಗಿರುವುದರಿಂದ ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಯಾಗಿ ಹೃದಯಾಘಾತದ ಅಪಾಯ ಹೆಚ್ಚಿರುತ್ತದೆ. ಇದು ನಿಜವಾದ ಹಾಲಿನಿಂದ ಮಾಡಿರದ ಕಾರಣ, ಅಸಲಿ ಪನ್ನೀರ್‌ನಲ್ಲಿ ಸಿಗುವ ಪ್ರೋಟೀನ್ ಅಥವಾ ಕ್ಯಾಲ್ಸಿಯಂನಂತಹ ಯಾವುದೇ ಪೌಷ್ಟಿಕಾಂಶಗಳು ಇದರಲ್ಲಿ ಇರುವುದಿಲ್ಲ. ಇದನ್ನು ತಯಾರಿಸಲು ಬಳಸುವ ಕೃತಕ ರಾಸಾಯನಿಕಗಳು ದೀರ್ಘಾವಧಿಯಲ್ಲಿ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಗೆ ಕಾರಣವಾಗಬಹುದು. ಸಾರ್ವಜನಿಕರು ಹೊರಗಡೆ ಪನ್ನೀರ್ ಖಾದ್ಯಗಳನ್ನು ಸೇವಿಸುವಾಗ ಜಾಗರೂಕರಾಗಿರಲು ಮತ್ತು ಆಹಾರ ಇಲಾಖೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಇಲಾಖೆ ಸೂಚಿಸಿದೆ.