ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸಲು ನವೆಂಬರ್ 10 ಕೊನೆಯ ದಿನವಾಗಿದೆ. ಬಾಕಿ ಉಳಿದಿರುವ 41 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು 'ಅನ್ನ ಸೇವೆ' ಆಪ್ ಅಥವಾ ನ್ಯಾಯಬೆಲೆ ಅಂಗಡಿಗಳ ಮೂಲಕ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು.
ಬೆಂಗಳೂರು (ನ.5): ಪಡಿತರ ಚೀಟಿದಾರರು ಇ-ಕೆವೈಸಿ(e-KYC) ಮಾಡಿಸಲು ನ.10 ಕೊನೆಯ ದಿನವಾಗಿದ್ದು, ಬಾಕಿ ಇರುವ ಪಡಿತರ ಚೀಟಿದಾರರು ಕೊನೆಯ ದಿನಾಂಕದೊಳಗೆ ತಪ್ಪದೇ ಇ-ಕೆವೈಸಿ ಮಾಡಿಸಬೇಕೆಂದು ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ತಿಳಿಸಿದೆ.
41,33,529 ಫಲಾನುಭವಿಗಳು ಇ-ಕೆವೈಸಿ!
ರಾಜ್ಯದಲ್ಲಿ ಮರು ಇ-ಕೆವೈಸಿ ಮಾಡಿಸಬೇಕಿದ್ದ 2,67,64,276 ಪಡಿತರ ಚೀಟಿ ಫಲಾನುಭವಿಗಳ ಪೈಕಿ, ನ.3ರವರೆಗೆ 2.26 ಕೋಟಿಗೂ ಅಧಿಕ ಫಲಾನುಭವಿಗಳು ಇ-ಕೆವೈಸಿ ಮಾಡಿಸಿದ್ದಾರೆ. ಇನ್ನೂ 41,33,529 ಫಲಾನುಭವಿಗಳು ಇ-ಕೆವೈಸಿ ಮಾಡಿಸಬೇಕಿದೆ. ಈಗಾಗಲೇ ಒಂದು ಬಾರಿ ಇ-ಕೆವೈಸಿ ಮಾಡಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದ್ದು, ನ.10 ಕೊನೆಯ ದಿನವಾಗಿದೆ. ನಂತರ ಅವಧಿ ವಿಸ್ತರಣೆ ಮಾಡಲಾಗುವುದಿಲ್ಲ ಎಂದು ಇಲಾಖೆ ತಿಳಿಸಿದೆ.
ಪಡಿತರ ಇ-ಕೆವೈಸಿ ಮಾಡಿಸುವುದು ಹೇಗೆ?
ಇ-ಕೆವೈಸಿ ಮಾಡಿಸಲು ಬಾಕಿ ಉಳಿದಿರುವ ಎಲ್ಲ ಫಲಾನುಭವಿಗಳು ‘ಅನ್ನ ಸೇವೆ’ ಮೊಬೈಲ್ ಅಪ್ಲಿಕೇಶನ್ ಮೂಲಕ ಖುದ್ದಾಗಿ ಅಥವಾ ನ್ಯಾಯಬೆಲೆ ಅಂಗಡಿಗಳಲ್ಲಿ ‘ಆಹಾರ’ ತಂತ್ರಾಂಶದ ಮೂಲಕ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು. ಇಲ್ಲವಾದಲ್ಲಿ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.





