ಮಂಗಳೂರು ಮತ್ತು ಮೈಸೂರಿನ ಕೆಎಫ್‌ಸಿ ಹಾಗೂ ಪ್ರತಿಷ್ಠಿತ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ ಆಹಾರ ಸುರಕ್ಷತಾ ಅಧಿಕಾರಿಗಳು, ದೊಡ್ಡ ಪ್ರಮಾಣದ ಕೊಳೆತ ಮತ್ತು ಅವಧಿ ಮುಗಿದ ಮಾಂಸವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಮಳಿಗೆಗಳ ಗೋಡೌನ್ ಸೀಜ್ ಮಾಡಲಾಗಿದ್ದು, ಆಹಾರದ ಮಾದರಿಗಳನ್ನು ಹೆಚ್ಚಿನ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಮಂಗಳೂರು/ಮೈಸೂರು: ರಾಜ್ಯದ ಪ್ರಮುಖ ನಗರಗಳಾದ ಮಂಗಳೂರು ಮತ್ತು ಮೈಸೂರಿನಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ (FSSAI) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಕೆಎಫ್‌ಸಿ (KFC) ಮಳಿಗೆ ಹಾಗೂ ಮೈಸೂರಿನ ಐಷಾರಾಮಿ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಿರುವ ಅಧಿಕಾರಿಗಳು, ಕೊಳೆತ ಹಾಗೂ ಅವಧಿ ಮುಗಿದ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

ಸಿಟಿ ಸೆಂಟರ್ KFC ಮೇಲೆ ದಾಳಿ

ಮಂಗಳೂರಿನ ಕೆ.ಎಸ್.ರಾವ್ ರಸ್ತೆಯ ಸಿಟಿ ಸೆಂಟರ್ ಮಾಲ್‌ನಲ್ಲಿರುವ ಕೆಎಫ್‌ಸಿ ರೆಸ್ಟೋರೆಂಟ್ ಮೇಲೆ ಗ್ರಾಹಕರೊಬ್ಬರ ದೂರಿನ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗ್ರಾಹಕರೊಬ್ಬರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಚಿಕನ್ ಕೊಳೆತು ಹೋಗಿದ್ದು, ತೀವ್ರವಾಗಿ ವಾಸನೆ ಬರುತ್ತಿದೆ ಎಂದು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಅಧಿಕಾರಿಗಳು ಕೆಎಫ್‌ಸಿ ಮಳಿಗೆಗೆ ಭೇಟಿ ನೀಡಿ ತಪಾಸಣೆ ನಡೆಸಿದಾಗ ಮೇಲ್ನೋಟಕ್ಕೆ ಕೊಳೆತ ಚಿಕನ್ ಪೀಸ್‌ಗಳು ಪತ್ತೆಯಾಗಿವೆ.

ಹಳೆಯ ಮಾಂಸ ಜಪ್ತಿ

ತಪಾಸಣೆಯ ವೇಳೆ ಕಳೆದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪ್ಯಾಕ್ ಮಾಡಲಾಗಿದ್ದ ಹಳೆಯ ಕೋಳಿ ಮಾಂಸ ಪತ್ತೆಯಾಗಿದೆ. ಫ್ರೋಜನ್ ಚಿಕನ್ (Frozen Chicken) ತಿಂಗಳುಗಟ್ಟಲೆ ಬಳಕೆಗೆ ಯೋಗ್ಯವಾಗಿರುತ್ತದೆ ಎಂದು ಕೆಎಫ್‌ಸಿ ಸಿಬ್ಬಂದಿ ಸಮಜಾಯಿಷಿ ನೀಡಲು ಯತ್ನಿಸಿದ್ದಾರೆ. ಅಧಿಕಾರಿಗಳು ಕೆಎಫ್‌ಸಿ ಮಳಿಗೆಯ ಗೋಡೌನ್ ಸೀಜ್ ಮಾಡಿದ್ದು, ಚಿಕನ್ ಹಾಗೂ ಬಳಸುತ್ತಿದ್ದ ಎಣ್ಣೆಯ ಮಾದರಿಗಳನ್ನು (Samples) ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ (DHO) ಡಾ.ತಿಮ್ಮಯ್ಯ ಅವರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮಳಿಗೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು ಲ್ಯಾಬ್ ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಷಾರಾಮಿ ಹೋಟೆಲ್‌ಗಳ ಮೇಲೂ ರೇಡ್!

ಇತ್ತ ಮೈಸೂರಿನಲ್ಲೂ ಆಹಾರ ಸುರಕ್ಷತಾ ಅಧಿಕಾರಿಗಳು ವಿವಿಧ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ್ದು, ಅವಧಿ ಮುಗಿದ ಮಾಂಸ ಪತ್ತೆಯಾಗಿದೆ.

  • ಗ್ರ್ಯಾಂಡ್ ಮರ್ಕ್ಯೂರ್ (Grand Mercure) ಹೋಟೆಲ್: ಈ ಪ್ರತಿಷ್ಠಿತ ಹೋಟೆಲ್‌ನಲ್ಲಿ ಅವಧಿ ಮುಗಿದ ಸುಮಾರು 68 ಕೆಜಿ ಮಾಂಸವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
  • ಕ್ಯೂ ಸ್ಟಾರ್ (Q Star) ಹೋಟೆಲ್: ಇಲ್ಲಿಂದ 4 ಕೆಜಿ ಹಳೆಯ ಅಣಬೆಯನ್ನು (Mushrooms) ಜಪ್ತಿ ಮಾಡಲಾಗಿದೆ.

ಇದಲ್ಲದೆ, ಮೈಸೂರಿನ ಮತ್ತೊಂದು ಹೋಟೆಲ್‌ನಿಂದ 9 ಕೆಜಿ ಹಳೆಯ ಕೋಳಿ ಮಾಂಸವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಪ್ರತಿಷ್ಠಿತ ಬ್ರ್ಯಾಂಡ್‌ಗಳು ಮತ್ತು ತಾರಾ ಹೋಟೆಲ್‌ಗಳಲ್ಲೇ ಇಂತಹ ಗುಣಮಟ್ಟವಿಲ್ಲದ ಹಾಗೂ ಹಳೆಯ ಆಹಾರ ಪೂರೈಕೆಯಾಗುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ದಾಳಿ ಬೆನ್ನಲ್ಲೇ ಕೆಎಫ್‌ಸಿ ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದೆ.

ಕೆಎಫ್‌ಸಿ ಸ್ಪಷ್ಟನೆ

ಜವಾಬ್ದಾರಿಯುತ ಬ್ರ್ಯಾಂಡ್ ಆಗಿ, ಕೆಎಫ್‌ಸಿ (KFC) ಉನ್ನತ ಮಟ್ಟದ ಆಹಾರ ಸುರಕ್ಷತೆ, ಗುಣಮಟ್ಟ ಮತ್ತು ನೈರ್ಮಲ್ಯವನ್ನು ಒದಗಿಸಲು ದೃಢವಾಗಿ ಬದ್ಧವಾಗಿದೆ. ಪ್ರಸ್ತುತ ಹರಿದಾಡುತ್ತಿರುವ ಮಾಹಿತಿಯು ನೈಜ ಸತ್ಯಗಳನ್ನು ಬಿಂಬಿಸುವುದಿಲ್ಲ. ನಮ್ಮ ಗ್ರಾಹಕರಿಗೆ ಗುಣಮಟ್ಟದ ಆಹಾರವನ್ನು ಬಡಿಸುವ ನಿಟ್ಟಿನಲ್ಲಿ, ನಾವು ದೇಶದಾದ್ಯಂತ ಇರುವ ಪ್ರತಿಷ್ಠಿತ ಪೂರೈಕೆದಾರರಿಂದ ಉತ್ತಮ ಗುಣಮಟ್ಟದ ಚಿಕನ್ ಅನ್ನು ಪಡೆಯುತ್ತೇವೆ ಮತ್ತು FSSAI ಮಾರ್ಗಸೂಚಿಗಳ ಜೊತೆಗೆ ಕೆಲವು ಜಾಗತಿಕ ಗುಣಮಟ್ಟದ ಮಾನದಂಡಗಳನ್ನು ಸಕ್ರಿಯವಾಗಿ ಪಾಲಿಸುತ್ತೇವೆ.

ನಾವು ಬಡಿಸುವ ಮತ್ತು ಸಂಗ್ರಹಿಸುವ ಚಿಕನ್ ನಿಯಮಾವಳಿಗಳ ಪ್ರಕಾರವೇ ಇರುತ್ತದೆ ಮತ್ತು ಅದನ್ನು ಪ್ರತಿದಿನ ಸ್ಟೋರ್‌ನಲ್ಲಿಯೇ ತಯಾರಿಸಲಾಗುತ್ತದೆ. ಪೂರೈಕೆದಾರರ ಫಾರ್ಮ್‌ನಿಂದ (ಕೋಳಿ ಸಾಕಾಣಿಕಾ ಕೇಂದ್ರದಿಂದ) ಗ್ರಾಹಕರ ತಟ್ಟೆಯನ್ನು ತಲುಪುವವರೆಗೆ, ಪ್ರತಿಯೊಂದು ತುಂಡು ಕೂಡ ಹಲವಾರು ಕಟ್ಟುನಿಟ್ಟಾದ ಗುಣಮಟ್ಟ ಮತ್ತು ಸುರಕ್ಷತಾ ತಪಾಸಣೆಗಳಿಗೆ ಒಳಪಡುತ್ತದೆ.

ನಾವು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ ಮತ್ತು ಅನ್ವಯವಾಗುವ ಕಾನೂನು ಹಾಗೂ ನಿಯಂತ್ರಣ ನಿಯಮಾವಳಿಗಳಿಗೆ ಅನುಗುಣವಾಗಿ ಈ ವಿಷಯವನ್ನು ಪರಿಶೀಲಿಸುತ್ತಿದ್ದೇವೆ. KFCಯ ಕಟ್ಟುನಿಟ್ಟಾದ ಅಡುಗೆಮನೆಯ ಕಾರ್ಯವಿಧಾನಗಳು ಮತ್ತು ಸುರಕ್ಷತಾ ನಿಯಮಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಚ್ಛಿಸುವ ಯಾವುದೇ ಗ್ರಾಹಕರು ಕಿಚನ್ ಟೂರ್ (ಅಡುಗೆಮನೆಯ ವೀಕ್ಷಣೆ) ಗಾಗಿ ರೆಸ್ಟೋರೆಂಟ್ ಮ್ಯಾನೇಜರ್ ಅವರನ್ನು ಸಂಪರ್ಕಿಸಬಹುದು.

ತಂಡದ ಪಿಆರ್ (PR), ಕೆಎಫ್‌ಸಿ ಇಂಡಿಯಾ