ಮೇ 10ರಂದು ನಡೆದ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿರುವ ನಡುವೆಯೇ ಜಿದ್ದಾಜಿದ್ದಿನ ಸ್ಪರ್ಧೆಗೆ ಸಾಕ್ಷಿಯಾಗಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರ ಅಭಿಮಾನಿಗಳಿಂದ ಬೆಟ್ಟಿಂಗ್‌ ಭರಾಟೆ ಕೂಡ ಭರ್ಜರಿಯಾಗಿಯೇ ನಡೆಯುತ್ತಿದೆ. ಟ್ರ್ಯಾಕ್ಟರ್‌, ಕಾರು, ಕುರಿ ಜತೆಗೆ, ಅಡಕೆ ತೋಟವನ್ನೂ ಬಾಜಿ ಕಟ್ಟಿಸಾಮಾಜಿಕ ಜಾಲತಾಣಗಳಲ್ಲಿ ಪಂಥಾಹ್ವಾನ ನೀಡಲಾಗಿದೆ.

ಬೆಂಗಳೂರು (ಮೇ.13) : ಮೇ 10ರಂದು ನಡೆದ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿರುವ ನಡುವೆಯೇ ಜಿದ್ದಾಜಿದ್ದಿನ ಸ್ಪರ್ಧೆಗೆ ಸಾಕ್ಷಿಯಾಗಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರ ಅಭಿಮಾನಿಗಳಿಂದ ಬೆಟ್ಟಿಂಗ್‌ ಭರಾಟೆ ಕೂಡ ಭರ್ಜರಿಯಾಗಿಯೇ ನಡೆಯುತ್ತಿದೆ. ಟ್ರ್ಯಾಕ್ಟರ್‌, ಕಾರು, ಕುರಿ ಜತೆಗೆ, ಅಡಕೆ ತೋಟವನ್ನೂ ಬಾಜಿ ಕಟ್ಟಿಸಾಮಾಜಿಕ ಜಾಲತಾಣಗಳಲ್ಲಿ ಪಂಥಾಹ್ವಾನ ನೀಡಲಾಗಿದೆ.

ಎಲ್ಲಿ, ಯಾರ ಪರ, ಎಷ್ಟುಬೆಟ್ಟಿಂಗ್‌?

ಚನ್ನಗಿರಿ: ಕಾಂಗ್ರೆಸ್‌ನ ಶಿವಗಂಗಾ ಬಸವರಾಜು ಪರ ಇಬ್ಬರು ರೈತರಿಂದ ತಲಾ 2 ಎಕರೆ ಅಡಕೆ ತೋಟ ಪಣಕ್ಕೆ

ಗುಂಡ್ಲುಪೇಟೆ: ಬಿಜೆಪಿ ಶಾಸಕ ನಿರಂಜನ್‌ ಕುಮಾರ್‌ ಪರ 1 ಕೋಟಿ ಬೆಟ್‌ ಘೋಷಣೆ ಮಾಡಿದ ಪುರಸಭಾ ಸದಸ್ಯ

ಎಚ್‌.ಡಿ.ಕೋಟೆ: ಕಾಂಗ್ರೆಸ್‌- ಜೆಡಿಎಸ್‌ ಪರ 10 ಲಕ್ಷ ರು. ಬೆಟ್‌ ಕಟ್ಟಿಬಾಂಡ್‌ ಪೇಪರ್‌ ಮಾಡಿಸಿದ ವ್ಯಕ್ತಿಗಳು

ನಾಗಮಂಗಲ: ಚಲುವರಾಯಸ್ವಾಮಿ ಪರ .13 ಲಕ್ಷದ ಕಾರು, ಟ್ರ್ಯಾಕ್ಟರ್‌, ಟಗರು ಬಾಜಿ ಕಟ್ಟಿದ ರೈತರು

Karnataka assembly election: ಮತದಾನ ಮುಗಿತಿದ್ದಂತೆ ಜೋರಾದ ಬೆಟ್ಟಿಂಗ್!

ರಾಜ್ಯದ ಇತರೆ ಕ್ಷೇತ್ರಗಳಿಗೆ ಹೋಲಿಸಿದರೆ ನಾಗಮಂಗಲ, ಚನ್ನಗಿರಿ, ಗುಂಡ್ಲುಪೇಟೆ, ಎಚ್‌.ಡಿ.ಕೋಟೆ, ಮಧುಗಿರಿ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರ ಅಭಿಮಾನಿಗಳು ಭಾರೀ ಬೆಟ್ಟಿಂಗ್‌ ನಡೆಸುತ್ತಿದ್ದಾರೆ. ಈ ಬಾರಿ ಗೆಲುವೇನಿದ್ದರೂ ನಮ್ಮ ನಾಯಕರದ್ದೇ. ಇಲ್ಲ ಅನ್ನುವವರು ಬೆಟ್‌ ಕಟ್ಟಲು ಸಿದ್ಧರಿದ್ಧೀರಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡಿ ಪಂಥಾಹ್ವಾನ ನೀಡುತ್ತಿದ್ದಾರೆ.

ಈ ಮಧ್ಯೆ, ಎಚ್‌.ಡಿ.ಕೋಟೆ ಕ್ಷೇತ್ರದಲ್ಲಿ ಬೆಟ್‌ ಕಟ್ಟುತ್ತಿರುವ ಸಂಬಂಧ ಬಾಂಡ್‌ ಪೇಪರ್‌ನಲ್ಲಿ ಅಗ್ರಿಮೆಂಟ್‌ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿಯಬಿಟ್ಟಿರುವ ಏಳು ಮಂದಿ ವಿರುದ್ಧ ಕೇಸ್‌ ದಾಖಲಾಗಿದ್ದರೆ, ಗುಂಡ್ಲುಪೇಟೆ ಕ್ಷೇತ್ರದ ಬಿಜೆಪಿ ಶಾಸಕನ ಪರ .1 ಕೋಟಿ ಬಾಜಿಗೆ ಮುಕ್ತ ಆಹ್ವಾನ ನೀಡಿದ್ದ ಪುರಸಭಾ ಸದಸ್ಯನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಚಲುವ ಪರ ಟ್ರ್ಯಾಕ್ಟರ್‌ ಪಣಕ್ಕೆ:

ತೀವ್ರ ಪೈಪೋಟಿಗೆ ಸಾಕ್ಷಿಯಾಗಿರುವ ಮಂಡ್ಯ ಜಿಲ್ಲೆಯ ನಾಗಮಂಗಲ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಚಲುವರಾಯಸ್ವಾಮಿ ಮತ್ತು ಜೆಡಿಎಸ್‌ ಅಭ್ಯರ್ಥಿ ಸುರೇಶ್‌ಗೌಡರ ಸೋಲು-ಗೆಲುವಿನ ಲೆಕ್ಕಾಚಾರಗಳು ಬಿರುಸಿನಿಂದ ಸಾಗುತ್ತಿದ್ದರೆ, ಮತ್ತೊಂದೆಡೆ ಬೆಟ್ಟಿಂಗ್‌ ಕೂಡ ಅಷ್ಟೇ ಜೋರಾಗಿ ನಡೆಯುತ್ತಿದೆ. ತಾಲೂಕಿನ ಇಜ್ಜಲಘಟ್ಟಗ್ರಾಮದ ಅಶೋಕ್‌ ಮತ್ತು ರುದ್ರೇಶ್‌ ಎಂಬುವರು ಚಲುವರಾಯಸ್ವಾಮಿ ಪರ ಟ್ರ್ಯಾಕ್ಟರ್‌ ಪಣಕ್ಕಿಟ್ಟಿದ್ದು, ಬಚ್ಚಿಕೊಪ್ಪಲು ಗ್ರಾಮದ ಸುಬ್ಬು ಬನ್ನೂರು ತಮ್ಮ ಟಗರೊಂದನ್ನು ಪಂಥಾಹ್ವಾನಕ್ಕಿಟ್ಟಿದ್ದಾರೆ. ಈ ಕುರಿತ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಕೂಡ ಆಗಿವೆ. ಅದೇ ರೀತಿ ಸಾಮಕಹಳ್ಳಿಯಲ್ಲಿ ಸುರೇಶ್‌ಗೌಡ ಪರ ವಾಸು ಮತ್ತು ಚಲುವರಾಯಸ್ವಾಮಿ ಪರ ಹರೀಶ್‌ ಎಂಬವರು 2 ಟಗರುಗಳಿಗೆ ಪಕ್ಷದ ಬಾವುಟಗಳನ್ನು ಕಟ್ಟಿಪರಸ್ಪರ ಒಪ್ಪಂದ ಮಾಡಿಕೊಂಡು ಪಣ ಕಟ್ಟಿದ್ದಾರೆ.

ಕಾರು ಪಣಕ್ಕಿಟ್ಟಅಭಿಮಾನಿ:

ಯಾರು ಏನೇ ಹೇಳಲಿ ಚಲುವರಾಯಸ್ವಾಮಿ ಈ ಬಾರಿ ಗೆದ್ದೇ ಗೆಲ್ಲುತ್ತಾರೆಂದು ನಾಗಮಂಗಲದಲ್ಲಿ ಸಂಪತ್‌ ಕುಮಾರ್‌ ಎಂಬವರು ತಮ್ಮ .13 ಲಕ್ಷ ಮೌಲ್ಯದ ಕಾರನ್ನೇ ಪಣಕ್ಕಿಟ್ಟಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಯಾರು ಬೇಕಿದ್ದರೂ ತಮ್ಮ ಜತೆ ಬಾಜಿ ಕಟ್ಟಬಹುದು ಎಂದೂ ಆಹ್ವಾನ ನೀಡಿದ್ದಾರೆ. ಆದರೆ ಬೆಟ್‌ ಕಟ್ಟಲು ಯಾರೂ ಮುಂದೆ ಬಂದಿಲ್ಲ ಎನ್ನಲಾಗಿದೆ.

ಚನ್ನಗಿರಿಯಲ್ಲಿ ಭಾರೀ ಬಾಜಿ:

ದಾವಣಗೆರೆಯ ಚನ್ನಗಿರಿ ಕ್ಷೇತ್ರದಲ್ಲಂತೂ ಬಡ ಕೂಲಿ ಕಾರ್ಮಿಕನೊಬ್ಬ ತಾನು ಕೂಡಿಟ್ಟ10 ಸಾವಿರವನ್ನೇ ಬಾಜಿ ಕಟ್ಟಿದ್ದರೆ, ಇಬ್ಬರು ಶ್ರೀಮಂತ ರೈತರು ತಮ್ಮ ನೀರಾವರಿ ಜಮೀನನ್ನೇ ಪಣಕ್ಕಿಟ್ಟು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೆದ್ದೇ ಗೆಲ್ತಾರೆಂದು ಮೀಸೆ ತಿರುವುತ್ತಿದ್ದಾರೆ.

ಯುವ ರೈತನೊಬ್ಬ ಶಿವಗಂಗಾ ವಿ.ಬಸವರಾಜ ಗೆದ್ದೇ ಗೆಲ್ಲುತ್ತಾರೆ. ಬೇಕಿದ್ದರೆ ಇದಕ್ಕಾಗಿ ನೀರಿನ ಸೌಲಭ್ಯವಿರುವ, 2 ವರ್ಷಗಳ ಅಡಕೆ ಸಸಿ ಹೊಂದಿರುವ ತೋಟವನ್ನೇ ಪಣಕ್ಕಿಡುತ್ತೇನೆ. ಯಾರಾದರೂ ನನ್ನ ಈ ಸವಾಲು ಸ್ವೀಕರಿಸಲು ಸಿದ್ಧವಿದ್ದರೆ ಸಂಪರ್ಕಿಸಿ ಎಂಬುದಾಗಿ ಮುಕ್ತ ಆಹ್ವಾನ ನೀಡಿದ್ದಾರೆ. ಮತ್ತೊಬ್ಬ ಹಿರಿಯ ರೈತ ಈ ಬಾರಿ ಶಿವಗಂಗಾ ಪರ ಭದ್ರಾ ಕಾಲುವೆ ಪಕ್ಕದಲ್ಲಿರುವ 2 ಎಕರೆ ಅಡಕೆ ತೋಟವನ್ನೇ ಬಾಜಿ ಕಟ್ಟಿದ್ದಾರೆ. ಇದೇ ರೀತಿ ತುಮಕೂರು ಜಿಲ್ಲೆಯ ಮಧುಗಿರಿ ಕ್ಷೇತ್ರದಲ್ಲೂ ಕಾಂಗ್ರೆಸ್‌ ಅಭ್ಯರ್ಥಿ ರಾಜಣ್ಣ ಪರ ಕೆಲವರು ಅಡಕೆ ತೋಟ ಪಣಕ್ಕಿಟ್ಟಿದ್ದಾರೆ.

₹5 ಲಕ್ಷದ ಕರಾರು:

ಬೆಟ್‌ ಕಟ್ಟೋದೇ ಅಪರಾಧ. ಅಂಥದ್ದರಲ್ಲಿ ಎಚ್‌.ಡಿ.ಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪರ ಗ್ರಾಮಸ್ಥರಿಬ್ಬರು .5 ಲಕ್ಷ ಬೆಟ್‌ ಕಟ್ಟಿದ ಕುರಿತು ಅಗ್ರಿಮೆಂಟ್‌ ಮಾಡಿಕೊಂಡು, ಜಾಲತಾಣದಲ್ಲಿ ಹರಿ ಬಿಟ್ಟಿದ್ದು, ಈ ಸಂಬಂಧ 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ ಅನಿಲ… ಚಿಕ್ಕಮಾದು ಪರ ಜಯರಾಮನಾಯಕ .5 ಲಕ್ಷ ಹಾಗೂ ಜೆಡಿಎಸ್‌ ಅಭ್ಯರ್ಥಿ ಜಯಪ್ರಕಾಶ್‌ ಪರ ಪ್ರಕಾಶ್‌ ಮತ್ತು ಶಿವರಾಜು .5ಲಕ್ಷ ಸೇರಿ ಒಟ್ಟು .10 ಲಕ್ಷ ಬೆಟ್‌ ಕಟ್ಟಿಅಗ್ರಿಮೆಂಟ್‌ ಮಾಡಿಸಿದ್ದರು. ಈ ಅಗ್ರಿಮೆಂಟ್‌ ಪತ್ರದ ಫೋಟೋಗಳನ್ನು ಜಾಲತಾಣದಲ್ಲೂ ಹರಿಬಿಟ್ಟಿದ್ದರು. ಅಲ್ಲದೆ, ಬೆಟ್ಟಿಂಗ್‌ ಹಣವನ್ನು ಪಟ್ಟಣದ ಎಲೆಕ್ಟ್ರಿಕಲ… ಅಂಗಡಿ ಮಾಲೀಕನೊಬ್ಬನ ಬಳಿ ಇರಿಸಿರುವುದಾಗಿಯೂ ಕರಾರು ಪತ್ರದಲ್ಲಿ ನಮೂದಿಸಿದ್ದರು. ಈ ಸಂಬಂಧ ಅಗ್ರಿಮೆಂಟ್‌ನಲ್ಲಿ ಹೆಸರಿದ್ದ ಎಲ್ಲರನ್ನೂ ವಶಕ್ಕೆ ಪಡೆದು, ಪ್ರಕರಣ ದಾಖಲಿಸಲಾಗಿದೆ.

ಬೆಟ್ಟಿಂಗ್ ಆ್ಯಪ್ ಜತೆ ನಂಟು: ಬ್ರೆಂಡನ್ ಮೆಕ್ಕಲಂಗೆ ಸಂಕಷ್ಟ..!

ಇನ್ನು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಕ್ಷೇತ್ರದ ಬಿಜೆಪಿ ಶಾಸಕ ನಿರಂಜನ್‌ ಕುಮಾರ್‌ ಗೆದ್ದೇ ಗೆಲ್ಲುತ್ತಾರೆಂದು ಗುರುವಾರ .1 ಕೋಟಿ ಬೆಟ್‌ ಕಟ್ಟಿದ್ದ ಪುರಸಭಾ ಸದಸ್ಯ ಕಿರಣ್‌ ಗೌಡನ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸ್ವಯಂಪ್ರೇರಿತ ಕೇಸ್‌ ದಾಖಲಿಸಿ ಮನೆಯಲ್ಲಿದ್ದ .1.20 ಲಕ್ಷ ನಗದು ವಶಕ್ಕೆ ಪಡೆದಿದ್ದಾರೆ.