Karnataka assembly election: ಮತದಾನ ಮುಗಿತಿದ್ದಂತೆ ಜೋರಾದ ಬೆಟ್ಟಿಂಗ್!
ವಿಧಾನಸಭೆಗೆ ಚುನಾವಣೆಯೇನು ಮುಗಿತು, ಇದೀಗ ಬೆಟ್ಟಿಂಗ್ ಬಲು ಜೋರಾಗಿದೆ. ಹು-ಧಾ ಸೆಂಟ್ರಲ್ ಕ್ಷೇತ್ರ ಜೂಜುಕೋರರಿಗೆ ಪೆವರೀಟ್ ಆಗಿದೆ. ಮುಂದಿನ ವರ್ಷ ಎದುರಾಗಲಿರುವ ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದು ಕರೆಯಿಸಿಕೊಳ್ಳುತ್ತಿರುವ ವಿಧಾನಸಭೆ ಚುನಾವಣೆ ಮುಗಿದು ಪಕ್ಷಗಳ, ಅಭ್ಯರ್ಥಿಗಳ ಭವಿಷ್ಯವೆಲ್ಲ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿವೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ (ಮೇ.12) : ವಿಧಾನಸಭೆಗೆ ಚುನಾವಣೆಯೇನು ಮುಗಿತು, ಇದೀಗ ಬೆಟ್ಟಿಂಗ್ ಬಲು ಜೋರಾಗಿದೆ. ಹು-ಧಾ ಸೆಂಟ್ರಲ್ ಕ್ಷೇತ್ರ ಜೂಜುಕೋರರಿಗೆ ಪೆವರೀಟ್ ಆಗಿದೆ.
ಮುಂದಿನ ವರ್ಷ ಎದುರಾಗಲಿರುವ ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದು ಕರೆಯಿಸಿಕೊಳ್ಳುತ್ತಿರುವ ವಿಧಾನಸಭೆ ಚುನಾವಣೆ ಮುಗಿದು ಪಕ್ಷಗಳ, ಅಭ್ಯರ್ಥಿಗಳ ಭವಿಷ್ಯವೆಲ್ಲ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿವೆ. ಶನಿವಾರ (ಮೇ 13ರಂದು) ಫಲಿತಾಂಶ ಹೊರಬೀಳಲಿದೆ.
ಶಹಾಪುರ ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ಮೂವರು ಆಕಾಂಕ್ಷಿಗಳ ಫೈಟ್, ಟಿಕೆಟ್‌ಗಾಗಿ ಬೆಟ್ಟಿಂಗ್!
ತಮ್ಮ ರಾಜಕೀಯ ಜೀವನವನ್ನೇ ಜನಸಂಘ, ಆರ್‌ಎಸ್‌ಎಸ್, ಬಿಜೆಪಿಯೊಂದಿಗೆ ಕಳೆದಿದ್ದ ಜಗದೀಶ ಶೆಟ್ಟರ್ ಈ ಸಲ ಪಕ್ಷ ಅನ್ಯಾಯ ಮಾಡಿತು ಎಂದು ಕಾಂಗ್ರೆಸ್ಸಿಗೆ ಜಿಗಿದಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಈ ಕಾರಣದಿಂದಲೇ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ ಇಡೀ ರಾಷ್ಟ್ರದ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಈಗ ಬೆಟ್ಟಿಂಗ್ ಹಾಟ್‌ಸ್ಪಾಟ್ ಆಗಿದೆ ಈ ಕ್ಷೇತ್ರ.
ಹೇಗೆ ನಡಿತಿದೆ ಬೆಟ್ಟಿಂಗ್?:
ಹಾಗೆ ನೋಡಿದರೆ ಮತದಾನಕ್ಕೆ ಮುನ್ನಾ ದಿನದಿಂದಲೇ ಧಾರವಾಡ ಜಿಲ್ಲೆಯಲ್ಲಿ ಬೆಟ್ಟಿಂಗ್ ಸಣ್ಣದಾಗಿ ಶುರುವಾಗಿತ್ತು. ಮತದಾನ ಮುಗಿದ ಬಳಿಕವಂತೂ ಇದರ ಅಬ್ಬರ ಹೇಳತೀರದು. ಅದರಲ್ಲೂ ಮತದಾನ ಮುಗಿದ ತಕ್ಷಣವೇ ವಿವಿಧ ಸಂಸ್ಥೆಗಳು ನಡೆಸಿದ ಮತದಾನೋತ್ತರ ಸಮೀಕ್ಷೆ ವರದಿ ಬಹಿರಂಗಗೊಳ್ಳುತ್ತಿರುವಂತೆ ಬೆಟ್ಟಿಂಗ್ ಮತ್ತಷ್ಟುಜೋರಾಗಿದೆ.
1 ಸಾವಿರದಿಂದ ಹಿಡಿದು .10-15 ಲಕ್ಷದ ವರೆಗೂ ಬೆಟ್ಟಿಂಗ್ ವ್ಯವಹಾರ ನಡೆಯುತ್ತಿದೆ. ದುಪ್ಪಟ್ಟು, ಮೂರು ಪಟ್ಟು ಕೂಡ ಆದಾಯದ ವ್ಯವಹಾರ ಇದಾಗಿದೆ.
ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು? ಅತಂತ್ರ ಬಂದರೆ ಜೆಡಿಎಸ್ ಕಿಂಗ್‌ಮೇಕರ್ ಆಗುತ್ತಾ? ಬಿಜೆಪಿಗೆ ಎಷ್ಟುಸ್ಥಾನ ಬರಬಹುದು? ಮತದಾನೋತ್ತರ ಸಮೀಕ್ಷೆ ಎಷ್ಟುನಿಜ? ಎಂಬೆಲ್ಲ ವಿಷಯಗಳ ಬಗ್ಗೆ ಬೆಟ್ಟಿಂಗ್ ನಡೆಯುತ್ತಿರುವುದು ಒಂದೆಡೆ. ಮತ್ತೊಂದೆಡೆ ಕ್ಷೇತ್ರವಾರು ಬೆಟ್ಟಿಂಗ್ ಕೂಡ ಜೋರಾಗಿದೆ. ಅದರಲ್ಲೂ ಧಾರವಾಡ ಜಿಲ್ಲೆಯಲ್ಲಿ ಸೆಂಟ್ರಲ್ ಕ್ಷೇತ್ರದಲ್ಲಿ ಇದು ಕೊಂಚ ಜಾಸ್ತಿಯೇ ಆಗಿದೆ. ಉಳಿದ ಕ್ಷೇತ್ರಗಳದ್ದು ಒಂದು ತೂಕವಾದರೆ ಸೆಂಟ್ರಲ್‌ದ್ದೇ ಮತ್ತೊಂದು ತೂಕವಾದಂತಾಗಿದೆ.
ಇಲ್ಲಿ ಬೆಟ್ಟಿಂಗ್‌ಗೆ ಒಂದೂವರೆ ಪಟ್ಟು, ಎರಡು ಪಟ್ಟು, ಮೂರು ಪಟ್ಟುವರೆಗೂ ನಡೆಯುತ್ತಿರುವುದು ವಿಶೇಷ. ಸೆಂಟ್ರಲ್ ಕ್ಷೇತ್ರದಲ್ಲಿ ಶೆಟ್ಟರ್ ಗೆಲ್ಲುತ್ತಾರೋ, ಇಲ್ಲವೋ? ಟೆಂಗಿನಕಾಯಿ ಗೆಲ್ಲುತ್ತಾರೋ ಎಂಬ ಬಗ್ಗೆ ಬಲು ಜೋರು ಬೆಟ್ಟಿಂಗ್ ನಡೆಯುತ್ತಿದೆ. ಉದಾಹರಣೆಗೆ 1 ಸಾವಿರ ಕೊಟ್ಟು ಬೆಟ್ಟಿಂಗ್ ಕಟ್ಟಿದರೆ, ಒಂದೂವರೆ ಪಟ್ಟು ಮರಳಿ ಕೊಡಬೇಕಾಗುತ್ತದೆ. ಆ ರೀತಿ ದುಪ್ಪಟ್ಟು, ಮೂರು ಪಟ್ಟುವರೆಗೂ ಬೆಟ್ಟಿಂಗ್ ನಡೆಯುತ್ತಿದೆ. 1 ಸಾವಿರದಿಂದ ಲಕ್ಷಗಟ್ಟಲೇ ಬೆಟ್ಟಿಂಗ್ ನಡೆಯುತ್ತಿದೆ ಎಂದು ಮೂಲಗಳು ತಿಳಿಸುತ್ತವೆ.
ಸಣ್ಣ ಪುಟ್ಟಮೊತ್ತದ ಬೆಟ್ಟಿಂಗ್ ಇದ್ದರೆ ಅದನ್ನೆಲ್ಲ ಫೋನ್ ಪೇ, ಗೂಗಲ್ ಪೇ ಮೂಲಕ ನಡೆಸಿದರೆ, ದೊಡ್ಡ ದೊಡ್ಡ ವ್ಯವಹಾರಕ್ಕೆ ನೇರವಾಗಿ ನಗದು ಬಳಕೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಸೆಂಟ್ರಲ್‌ನಲ್ಲಿ ಒಳಹೊಡೆತ; ಹೊರಹೊಡೆತ ನಡೆದಿದೆ: ಶೆಟ್ಟರ್
ಕುರಿ ಬೆಟ್ಟಿಂಗ್:
ಇನ್ನು ಇದೇ ರೀತಿ ಧಾರವಾಡ ಹಾಗೂ ನವಲಗುಂದ ಕ್ಷೇತ್ರದಲ್ಲೂ ಭಾರೀ ಬೆಟ್ಟಿಂಗ್ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಅತಿ ಹೆಚ್ಚು ಬಳಕೆಯಾದ ಪ್ರಾಣಿಯೆಂದರೆ ಕುರಿ. ಕುರುಬ ಸಮುದಾಯ ತಮ್ಮೊಂದಿಗೆ ಇದೆ ಎಂದು ತೋರಿಸಿಕೊಳ್ಳಲು ಕುರಿ ಮರಿಕೊಟ್ಟು, ಕಂಬಳಿ ಹೊದೆಸಿ ಎಲ್ಲೆಡೆ ಸನ್ಮಾನಗಳು ನಡೆದವು. ಇದೀಗ ಕುರಿಮರಿಗಳದ್ದೇ ಬೆಟ್ಟಿಂಗ್ ನಡೆಯುತ್ತಿರುವುದು ವಿಶೇಷ. ಇದು ನವಲಗುಂದ ಕ್ಷೇತ್ರದಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಒಂದು ಕುರಿಮರಿಗೆ ಎರಡು, 3 ಕುರಿಮರಿಗಳ ಬಾಜಿ ಕಟ್ಟುವುದು ಮಾಮೂಲಾಗಿದೆ. ಇನ್ನುಳಿದಂತೆ ಪೂರ್ವ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿರುವ ಎಐಎಂಐಎಂ ಪಕ್ಷ, ಎಸ್‌ಡಿಪಿಐ ಪಕ್ಷಗಳು ಎಷ್ಟುಮತ ಪಡೆಯಬಹುದು? ಇವು ಎಷ್ಟುಪಡೆದರೆ ಯಾರಿಗೆ ಲಾಭವಾಗುತ್ತದೆ? ಎಂಬುದರ ಆಧಾರದ ಮೇಲೂ ಬಾಜಿ ಕಟ್ಟುವಿಕೆ ನಡೆಯುತ್ತಿದೆ.