Karnataka election 2023: ಕಾಂಗ್ರೆಸ್ ಹೈಅಲರ್ಟ್; ಸರ್ಕಾರ ರಚನೆಗಾಗಿ ಈಗಿನಿಂದಲೇ ಸಿದ್ಧತೆ!
ಗೆಲ್ಲುವ ಸಾಧ್ಯತೆಯಿರುವ ನಾಲ್ಕಕ್ಕೂ ಹೆಚ್ಚು ಮಂದಿ ಪಕ್ಷೇತರರ ಬೆಂಬಲ ಪಡೆಯಲು ದೂರವಾಣಿ ಮಾತುಕತೆ, 120 ಅಥವಾ ಅದಕ್ಕಿಂತ ಕಡಿಮೆ ಸಂಖ್ಯೆ ಗಳಿಸಿದಲ್ಲಿ ರೆಸಾರ್ಚ್ ವಾಸಕ್ಕೆ ರೂಪರೇಷೆ, ಗೆಲ್ಲಬಹುದಾದ ಅಭ್ಯರ್ಥಿಗಳು ಯಾವ ಆಮಿಷಕ್ಕೂ ಒಳಗಾಗದಂತೆ ಪಕ್ಷದ ಹೈಕಮಾಂಡ್‌ನಿಂದಲೇ ಜೂಮ್ ಮೀಟಿಂಗ್ ಮೂಲಕ ನೇರ ಕೋರಿಕೆ...
ಬೆಂಗಳೂರು (ಮೇ.12) : ಗೆಲ್ಲುವ ಸಾಧ್ಯತೆಯಿರುವ ನಾಲ್ಕಕ್ಕೂ ಹೆಚ್ಚು ಮಂದಿ ಪಕ್ಷೇತರರ ಬೆಂಬಲ ಪಡೆಯಲು ದೂರವಾಣಿ ಮಾತುಕತೆ, 120 ಅಥವಾ ಅದಕ್ಕಿಂತ ಕಡಿಮೆ ಸಂಖ್ಯೆ ಗಳಿಸಿದಲ್ಲಿ ರೆಸಾರ್ಟ್ ವಾಸಕ್ಕೆ ರೂಪರೇಷೆ, ಗೆಲ್ಲಬಹುದಾದ ಅಭ್ಯರ್ಥಿಗಳು ಯಾವ ಆಮಿಷಕ್ಕೂ ಒಳಗಾಗದಂತೆ ಪಕ್ಷದ ಹೈಕಮಾಂಡ್‌ನಿಂದಲೇ ಜೂಮ್ ಮೀಟಿಂಗ್ ಮೂಲಕ ನೇರ ಕೋರಿಕೆ...
ಉಳಿದ ಪಕ್ಷಗಳ ನಾಯಕರು ಚುನಾವಣೆಯ ದಣಿವು ತೀರಿಸಿಕೊಳ್ಳುವ ಉಮೇದಿಯಲ್ಲಿದ್ದರೆ ಕಾಂಗ್ರೆಸ್ ನಾಯಕರು(Congress leaders) ಮಾತ್ರ ಸ್ವಲ್ಪವೂ ಮೈಮರೆಯದೆ ಫಲಿತಾಂಶ ಹೊರಬಿದ್ದ ನಂತರ ಸೃಷ್ಟಿಯಾಗಬಹುದಾದ ಸನ್ನಿವೇಶಗಳನ್ನು ಊಹಿಸಿ ಮಾಡಿಕೊಂಡಿರುವ ಸಿದ್ಧತೆಗಳ ಝಲಕ್ ಇದು.
ಸಮೀಕ್ಷೆ ಬೆನ್ನಲ್ಲೇ ಅತಂತ್ರ ವಿಧಾನಸಭೆ ಆತಂಕ, ಶುರುವಾಗಿದೆ ರಣತಂತ್ರ!
ಗುರುವಾರ ಸರಣಿ ಸಭೆ ನಡೆಸಿದ ಕಾಂಗ್ರೆಸ್ ನಾಯಕರು ಮುಂದೆ ನಿರ್ಮಾಣವಾಗಬಹುದಾದ ಪರಿಸ್ಥಿತಿಗಳನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಸುದೀರ್ಘ ಚಿಂತನೆ ನಡೆಸಿದರು.
ಪಕ್ಷೇತರರಿಗೆ ದೂರವಾಣಿ ಕರೆ:
ರಾಜ್ಯ ನಾಯಕರೊಂದಿಗೆ ಈ ಕುರಿತು ಚರ್ಚೆ ನಡೆಸಲು ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಬುಧವಾರ ತಡರಾತ್ರಿಯೇ ನಗರಕ್ಕೆ ಆಗಮಿಸಿದ್ದು, ಗುರುವಾರ ಬೆಳಗ್ಗೆ ಸಿದ್ದರಾಮಯ್ಯ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ ರಾಜಕೀಯ ತಂತ್ರಜ್ಞ ಸುನೀಲ್ ಕುನಗೋಲು ಅವರು ಪಾಲ್ಗೊಂಡಿದ್ದರು. ಸಭೆಯ ಆರಂಭದಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳ ಫಲಿತಾಂಶದ ಬಗ್ಗೆ ಮಾಹಿತಿ ಹಂಚಿಕೊಂಡ ನಾಯಕರು ಅನಂತರ ಮುಂದಿನ ಸಿದ್ಧತೆಗಳ ಬಗ್ಗೆ ರೂಪರೇಷೆ ಸಜ್ಜುಗೊಳಿಸಿದರು ಎನ್ನಲಾಗಿದೆ.
ಈ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಸರಳ ಬಹುಮತ ಅಥವಾ ಅದಕ್ಕಿಂತ ತುಸು ಕಡಿಮೆ ಸಂಖ್ಯೆ ಬಂದರೆ ಆಗ ಪಕ್ಷೇತರರ ಬೆಂಬಲ ಪಡೆಯುವ ಬಗ್ಗೆ ಚರ್ಚೆಯಾಗಿದೆ. ಈ ಸಂದರ್ಭದಲ್ಲಿ ಉಭಯ ನಾಯಕರು ಗೆಲ್ಲುವ ಸಾಧ್ಯತೆಯಿರುವ ಪಕ್ಷೇತರ ಅಭ್ಯರ್ಥಿಗಳಿಗೆ ದೂರವಾಣಿ ಕರೆ ಮಾಡಿ ಕಾಂಗ್ರೆಸ್ ಪರ ನಿಲ್ಲುವಂತೆ ಕೋರಿದರು ಎನ್ನಲಾಗಿದೆ. ಶಿರಹಟ್ಟಿಕ್ಷೇತ್ರದ ರಾಮಕೃಷ್ಣ ದೊಡ್ಡಮನಿ, ಹರಪನಹಳ್ಳಿ ಕ್ಷೇತ್ರದ ಲತಾ ಮಲ್ಲಿಕಾರ್ಜುನ (ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಪುತ್ರಿ), ಪುಲಕೇಶಿ ನಗರದ ಅಖಂಡ ಶ್ರೀನಿವಾಸ ಮೂರ್ತಿ ಮತ್ತು ಕುಂದಗೋಳದ ಚಿಕ್ಕನಗೌಡರ (ಬಿಜೆಪಿ ಬಂಡಾಯ) ಅವರಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.
120 ಆಜುಬಾಜು ಬಂದರೆ ರೆಸಾರ್ಟ್‌ಗೆ:
ಕಾಂಗ್ರೆಸ್ ಬಹುಮತ ಗಳಿಸಿದರೂ ‘ಆಪರೇಷನ್ ಕಮಲ’ ನಡೆಯುವ ಆಶಂಕೆಯೂ ನಾಯಕರನ್ನು ಕಾಡಿದೆ. ಹೀಗಾಗಿ ಪಕ್ಷದ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗದಂತೆ ಕಾಪಾಡಲು ರೆಸಾರ್ಚ್ ವಾಸದ ಚಿಂತನೆ ಹೊಂದಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ 115ರಿಂದ 120 ಸ್ಥಾನ ಗಳಿಸಿದರೂ ಕೂಡ ಸರ್ಕಾರ ರಚನೆಯವರೆಗೂ ಶಾಸಕರು ಬಿಜೆಪಿ ನಾಯಕರ ಕೈಗೆ ಸಿಗದಂತೆ ನೋಡಿಕೊಳ್ಳುವ ಅಗತ್ಯವಿದೆ ಎಂಬ ಅಭಿಪ್ರಾಯ ಮೂಡಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಪ್ರಭಾವವಿಲ್ಲದ ರಾಜ್ಯಗಳ (ಬಹುತೇಕ ತಮಿಳುನಾಡು, ಆಂಧ್ರ ಹಾಗೂ ತೆಲಂಗಾಣ) ರೆಸಾರ್ಚ್‌ಗೆ ಶಾಸಕರನ್ನು ಕರೆದೊಯ್ಯುವ ಸಿದ್ಧತೆ ನಡೆಸಲು ನಾಯಕರು ನಿರ್ಧರಿಸಿದರು ಎನ್ನಲಾಗಿದೆ.
ಅಭ್ಯರ್ಥಿಗಳ ಜತೆ ಜೂಮ್ ಮೀಟಿಂಗ್:
ಸಿದ್ದರಾಮಯ್ಯ ಹಾಗೂ ಸುರ್ಜೇವಾಲಾ(Siddaramaiah and randeep surjewala) ಸಭೆಯ ನಂತರ ಗುರುವಾರ ತಡರಾತ್ರಿ ಕಾಂಗ್ರೆಸ್ಸಿನ ಎಲ್ಲಾ ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಪಕ್ಷದಿಂದ ಬೆಂಬಲ ಪಡೆದಿರುವ ರೈತ ಸಂಘದ ಅಭ್ಯರ್ಥಿ (ದರ್ಶನ್ ಪುಟ್ಟಣ್ಣಯ್ಯ) ಅವರೊಂದಿಗೆ ಜೂಮ್ ಸಭೆ ಕೂಡ ನಡೆಸಲಾಯಿತು. ಈ ಸಭೆಯಲ್ಲಿ ಸುರ್ಜೇವಾಲಾ, ಸಿದ್ದರಾಮಯ್ಯ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾಗಿಯಾಗಿದ್ದರು.
Karnataka election 2023: ಮತದಾನ ಮುಗಿಸಿ ನಿಟ್ಟಿಸಿರು ಬಿಟ್ಟಅಭ್ಯರ್ಥಿಗಳು!
ಸಭೆಯಲ್ಲಿ ಅಭ್ಯರ್ಥಿಗಳಿಂದ ಅವರ ಕ್ಷೇತ್ರಗಳ ಮತಗಟ್ಟೆವಿವರವನ್ನು ನಾಯಕರು ಪಡೆದುಕೊಂಡರು. ಅಲ್ಲದೆ, ಮುಂದೆ ಎದುರಾಗಬಹುದಾದ ಸನ್ನಿವೇಶಗಳ ಬಗ್ಗೆಯೂ ಅರಿವು ನೀಡಿದರು ಹಾಗೂ ಅಂತಹ ಸಂದರ್ಭಗಳಲ್ಲಿ ಅಭ್ಯರ್ಥಿಗಳು ಏನು ಮಾಡಬೇಕು ಎಂಬ ವಿವರವನ್ನು ನಾಯಕರು ನೀಡಿದರು ಎಂದು ಮೂಲಗಳು ಹೇಳಿವೆ.