ಅಭಿಮಾನಿಗಳ ಪ್ರೀತಿಗೆ ಸ್ಪಂದಿಸಿ ಮಾತನಾಡಿರುವ ಸಿದ್ದರಾಮಯ್ಯ, ದಯವಿಟ್ಟು ನನ್ನನ್ನು ಕ್ಷಮಿಸಬೇಕು. ಮೈಸೂರಿನಿಂದ ಬಂದ ನನ್ನನ್ನು ಪ್ರೀತಿಯಿಂದ ಗೆಲ್ಲಿಸಿದ್ದೀರಿ. ಆದರೆ ನಿಮ್ಮ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದರೂ ನಿತ್ಯ ನಿಮ್ಮ ಕಷ್ಟಸುಖ ಆಲಿಸಲು ಆಗುತ್ತಿಲ್ಲ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

Add Asianetnews Kannada as a Preferred SourcegooglePreferred

ಬೆಂಗಳೂರು: ಕ್ಷೇತ್ರದ ಆಯ್ಕೆ ಬಗ್ಗೆ ಗೊಂದಲದಲ್ಲಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಬಾದಾಮಿ ಹಾಲಿ ಶಾಸಕ ಸಿದ್ದರಾಮಯ್ಯ ಅವರಿಗೆ ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಒತ್ತಡ ಹೆಚ್ಚಾಗಿದ್ದು, ಸತತ ಮೂರನೇ ಬಾರಿಗೆ ಮಂಗಳವಾರ ಬಾದಾಮಿ ಕ್ಷೇತ್ರದಿಂದ ಆಗಮಿಸಿದ ನೂರಾರು ಮುಖಂಡರು ಸಿದ್ದರಾಮಯ್ಯ ಮೇಲೆ ಒತ್ತಡ ಹೇರಿದ್ದಾರೆ.

ಸಿದ್ದರಾಮಯ್ಯ ಅವರ ಅಧಿಕೃತ ಸರ್ಕಾರಿ ನಿವಾಸಕ್ಕೆ ಆಗಮಿಸಿದ್ದ ಸ್ಥಳೀಯ ಮುಖಂಡರು ಹಾಗೂ ಅಭಿಮಾನಿಗಳು, ತಾವು ಕ್ಷೇತ್ರದಿಂದ ಸ್ಪರ್ಧಿಸದಿದ್ದರೆ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ ಸದಸ್ಯತ್ವ ಸ್ಥಾನಗಳಿಗೆ ರಾಜೀನಾಮೆ ನೀಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ದಯವಿಟ್ಟು ಕ್ಷಮಿಸಿ:

ಅಭಿಮಾನಿಗಳ ಪ್ರೀತಿಗೆ ಸ್ಪಂದಿಸಿ ಮಾತನಾಡಿರುವ ಸಿದ್ದರಾಮಯ್ಯ, ದಯವಿಟ್ಟು ನನ್ನನ್ನು ಕ್ಷಮಿಸಬೇಕು. ಮೈಸೂರಿನಿಂದ ಬಂದ ನನ್ನನ್ನು ಪ್ರೀತಿಯಿಂದ ಗೆಲ್ಲಿಸಿದ್ದೀರಿ. ಆದರೆ ನಿಮ್ಮ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದರೂ ನಿತ್ಯ ನಿಮ್ಮ ಕಷ್ಟಸುಖ ಆಲಿಸಲು ಆಗುತ್ತಿಲ್ಲ. ನನ್ನ ಗೆಲ್ಲಿಸಿದ ನಿಮ್ಮ ಋುಣ ತೀರಿಸಲು ಆಗುವುದಿಲ್ಲ. ನನಗೆ 76 ವರ್ಷ ವಯಸ್ಸಾಗಿದೆ. ದೂರದ ಬಾದಾಮಿಗೆ ನಿರಂತರವಾಗಿ ಪ್ರಯಾಣಿಸಲು ಆಗುವುದಿಲ್ಲ ಎಂಬ ಕಾರಣಕ್ಕೆ ಮಾತ್ರವೇ ಬಾದಾಮಿಯಿಂದ ಸ್ಪರ್ಧಿಸಲು ಹಿಂಜರಿಯುತ್ತಿದ್ದೇನೆ. ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ಮನವೊಲಿಸುವ ಪ್ರಯತ್ನ ಮಾಡಿದರು.

'ಮಾಜಿ ಸಿಎಂ ಸಿದ್ದರಾಮಯ್ಯಗೆ ಬಾದಾಮಿಯೇ ಸುರಕ್ಷಿತ'

ಆದರೂ ಪಟ್ಟು ಬಿಡದ ಬಾದಾಮಿ ಕಾಂಗ್ರೆಸ್‌ ಕಾರ್ಯಕರ್ತರು, ನೀವು ಕ್ಷೇತ್ರಕ್ಕೆ ಬಂದ ಬಳಿಕ ಎಂದೂ ಕಾಣದ ಅಭಿವೃದ್ಧಿಯನ್ನು ಕ್ಷೇತ್ರ ಕಂಡಿದೆ. ಹೀಗಾಗಿ ನೀವು ಈ ಬಾರಿಯೂ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು. ಕೋಲಾರಕ್ಕಿಂತಲೂ ಬಾದಾಮಿಯಲ್ಲೇ ನಿಮಗೆ ಪೂರಕ ವಾತಾವರಣ ಇದೆ. ನಿಮ್ಮನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು ಎಂದು ಹಠ ಹಿಡಿದರು.

ಹೈಕಮಾಂಡ್‌ ಹೇಳಿದೆಡೆ ಸ್ಪರ್ಧೆ:

ಅಂತಿಮವಾಗಿ ಸಿದ್ದರಾಮಯ್ಯ ಅವರು, ಮುಂದೆ ನಮ್ಮ ಸರ್ಕಾರ ಬರುತ್ತದೆ. ನಾನು ಬಾದಾಮಿ ಶಾಸಕನಾಗಿರದಿದ್ದರೂ ಅಭಿವೃದ್ಧಿ ಮಾಡುತ್ತೇನೆ. ಫೆ.26ರ ಬಳಿಕ ನಡೆಯುವ ಸ್ಕ್ರೀನಿಂಗ್‌ ಸಮಿತಿಯಲ್ಲೂ ನಿಮ್ಮ ಒತ್ತಾಯದ ಬಗ್ಗೆ ಹೇಳುತ್ತೇನೆ. ಹೈಕಮಾಂಡ್‌ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಹೇಳಿದರೆ ಅಲ್ಲಿಂದ ಸ್ಪರ್ಧಿಸುತ್ತೇನೆ. ಅದು ಕೋಲಾರ ಆಗಿರಬಹುದು, ಬಾದಾಮಿ ಆಗಿರಬಹುದು, ವರುಣ ಆಗಿರಬಹುದು ಅಥವಾ ಬೇರೆಯದ್ದೇ ಕ್ಷೇತ್ರ ಆಗಿರಬಹುದು ಹೈಕಮಾಂಡ್‌ ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಬಾದಾಮಿಯಿಂದ ಸ್ಪರ್ಧಿಸಿ: ಸಿದ್ದರಾಮಯ್ಯಗೆ ಹಾಲೆಂಡ್‌ ಕನ್ನಡಿಗನ ಮನವಿ

ವರುಣದಿಂದಲೂ ಒತ್ತಾಯ

ಇದೇ ವೇಳೆ ಹಲವು ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಮುಖಂಡರು ಸಹ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿ ವರುಣ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯಿಸಿದರು ಎಂದು ತಿಳಿದುಬಂದಿದೆ. ಕೋಲಾರ ಹಾಗೂ ಬಾದಾಮಿ ಎರಡೂ ಕ್ಷೇತ್ರಗಳಲ್ಲೂ ಗೆಲುವು ಸುಲಭವಲ್ಲ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಂಚರಿಸಬೇಕಾಗಿರುವ ನೀವು ವರುಣದಿಂದ ಸ್ಪರ್ಧಿಸುವುದೇ ಒಳಿತು ಎಂದು ಹೇಳಿದರು ಎನ್ನಲಾಗಿದೆ.