80ನೇ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ, ಸಿಎಂ ಡಿಕೆ ಶಿವಕುಮಾರ್ ಅವರು ಶೈಕ್ಷಣಿಕ ವಲಯದಲ್ಲಿ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. 'AI ಅಕ್ಷರ ಅಭಿಯಾನ' ಮತ್ತು 'ಕೋಡಿಂಗ್ ಗುರುಕುಲ' ಮೂಲಕ 6ನೇ ತರಗತಿಯಿಂದಲೇ AI ಶಿಕ್ಷಣ ಹಾಗೂ ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ AI ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದಾಗಿ ತಿಳಿಸಿದ್ದಾರೆ.

ಬೆಂಗಳೂರು: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದು ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದರು.

6ನೇ ತರಗತಿಯಿಂದಲೇ AI ಶಿಕ್ಷಣ

ಇದು ನಿಮ್ಮ ಯುಗ. ನವ ಯುಗ. ಈಗಿನ ಯುವ ಜನತೆಗೆ ಹೊಸ ರೂಪವನ್ನು ಕೊಡಲು ವಿಶ್ವ ಮಟ್ಟದಲ್ಲಿ ಸ್ಫರ್ಧೆಗೆ ಅನುಕೂಲ ಆಗುವಂತೆ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ. ಅದಕ್ಕಾಗಿ ರಾಜ್ಯದ ಎಲ್ಲ ಶಾಲೆಗಳಲ್ಲಿ 6ನೇ ತರಗತಿಯಿಂದಲೇ AI ಶಿಕ್ಷಣವನ್ನು ಪರಿಚಯಿಸುತ್ತಿದ್ದೇವೆ. ಇದಕ್ಕಾಗಿ ‘AI ಅಕ್ಷರ ಅಭಿಯಾನ’ ಮತ್ತು ‘ಕೋಡಿಂಗ್ ಗುರುಕುಲ’ ಎಂಬ ಮಹತ್ವದ ಕಾರ್ಯಕ್ರಮಗಳನ್ನು ಇಂದು ನಾನು ಘೋಷಿಸುತ್ತಿದ್ದೇನೆ. ಉಚಿತ ‘ಕೋಡಿಂಗ್ ಗುರುಕುಲ’ ವಿಶೇಷ ತರಗತಿಗಳನ್ನು ಆರಂಭಿಸಲಾಗುವುದು. ಪ್ರತಿ ವಿದ್ಯಾರ್ಥಿಗೂ AI ಮತ್ತು ಕೋಡಿಂಗ್ ಕೌಶಲ್ಯ ಕಲಿಯಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ದೇಶದ ಪ್ರಪ್ರಥಮ ಸರ್ಕಾರಿ ಸ್ವಾಮ್ಯದ AI ವಿಶ್ವವಿದ್ಯಾಲಯ

ದೇಶದ ಪ್ರಪ್ರಥಮ ಸರ್ಕಾರಿ ಸ್ವಾಮ್ಯದ AI ವಿಶ್ವವಿದ್ಯಾಲಯವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗುವುದು. ಜನವರಿ 2027ರ ವೇಳೆಗೆ AI ಸರ್ಟಿಫಿಕೇಶ್‌ ಕೋರ್ಸ್‌ಗಳನ್ನು ಪ್ರಾರಂಭಿಸಲಾಗುವುದು. ಇದರ ಜೊತೆಗೆ AI ಹಬ್‌ಗಳನ್ನು ಸ್ಥಾಪಿಸಲಾಗುವುದು. ಶಾಲಾ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು ಬಹಳ ಮುಖ್ಯ. ಎಲ್‌ಕೆಜಿ ಯಿಂದ ಹನ್ನೆರಡನೇ ತರಗತಿಯವರೆಗೆ ಒಂದೇ ಸೂರಿನಡಿ ಆಧುನಿಕ ಮೂಲ ಸೌಕರ್ಯ, ದ್ವಿಭಾಷಾ ಶಿಕ್ಷಣ, ಡಿಜಿಟಲ್ ತರಗತಿಗಳು, ವೃತ್ತಿ ಶಿಕ್ಷಣ ಮತ್ತು ವಿದ್ಯಾರ್ಥಿ ಸಾರಿಗೆ ಸೌಲಭ್ಯಗಳನ್ನು ನೀಡಲು 1,000 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ 2 ವರ್ಷದಲ್ಲಿ ಅಭಿವೃದ್ಧಿಪಡಿಸುತ್ತೇವೆ. ಇದರಿಂದ ಸುಮಾರು 10 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಇದನ್ನೂ ಓದಿ: ಕಳೆದ ನಾಲ್ಕು ವರ್ಷಗಳಲ್ಲಿ ಅತ್ಯಂತ ಕಡಿಮೆ ಅವಧಿಯ ಕೆಂಪುಕೋಟೆ ಭಾಷಣ ಮಾಡಿದ ಪ್ರಧಾನಿ ಮೋದಿ

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ

ರಾಜ್ಯದ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣದ ಅವಕಾಶ ನೀಡಲಾಗಿದೆ. ಇಲ್ಲಿಯವರೆಗೆ 6 ಲಕ್ಷಕ್ಕೂ ಹೆಚ್ಚು ಉಚಿತ ಬಸ್ ಪಾಸ್‌ಗಳನ್ನು ವಿತರಿಸಲಾಗಿದೆ. ಭಾರತ ದೇಶದಲ್ಲಿ ಐಕ್ಯತೆ, ಸಮಗ್ರತೆ ಮತ್ತು ಶಾಂತಿ ಕಾಪಾಡಲು ಯುವ ಜನರಿಗೆ ಹೊಸ ಆಲೋಚನೆ ಮತ್ತು ನಾಯಕತ್ವ ಬೆಳೆಸುವ ಅವಶ್ಯಕತೆ ಇದೆ. ಅದಕ್ಕಾಗಿ ರಾಜ್ಯದಲ್ಲಿ 10,000 ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪನೆ ಮಾಡಲು ಕ್ರಮ ವಹಿಸಲಾಗಿದೆ. ಈ ಯುವ ಪಡೆ ನಾಡಿನ ಸೌಹಾರ್ದತೆ, ಸಂವಿಧಾನದ ಮೌಲ್ಯ, ಕ್ರೀಡೆ ಮತ್ತು ನಮ್ಮ ಸಂಸ್ಕೃತಿಯ ಹಿರಿಮೆಯ ರಾಯಭಾರಿಗಳಾಗಿ ಕೆಲಸ ಮಾಡಲಿದೆ. ಗ್ರಾಮೀಣ ಭಾಗದ ಯುವ ನಾಯಕತ್ವ ಹಾಗೂ ಸಾಂಸ್ಕೃತಿಕ ಪ್ರತಿಭೆಗಳು ಹೊರ ಹೊಮ್ಮಲು ದಾರಿಯಾಗುತ್ತದೆ. ಪ್ರತಿ ಸಂಘಕ್ಕೆ 10 ಲಕ್ಷದಂತೆ ವಾರ್ಷಿಕ 1,000 ಕೋಟಿ ಅನುದಾನವನ್ನು ಒದಗಿಸಲಾಗಿದೆ. ಯುವನಿಧಿ ಕಾರ್ಯಕ್ರಮದಲ್ಲಿ 3.72 ಲಕ್ಷ ನಿರುದ್ಯೋಗಿ ಮತ್ತು ಡಿಪ್ಲೊಮಾ ಪದವೀಧರರಿಗೆ 1,154 ಕೋಟಿ ರೂಪಾಯಿ ನೆರವು ನೀಡಿದ್ದೇವೆ ಎಂದು ಸಿಎಂ ಹೇಳಿದರು.

ಇದನ್ನೂ ಓದಿ: ಕೆಂಪುಕೋಟೆಯಿಂದಲೇ ದೇಶದ ದಿಮಾಗಿ ನಕ್ಸಲರಿಗೆ ವಾರ್ನಿಂಗ್‌ ನೀಡಿದ ನರೇಂದ್ರ ಮೋದಿ!

Scroll to load tweet…