ಲಸಿಕೆ ನೀಡಿಕೆಯಲ್ಲಿ ಭರ್ಜರಿ ಸಾಧನೆ ಮಾಡಿದ ಕರ್ನಾಟಕ 4,89,27,347 ಮಂದಿಗೆ ಮೊದಲ ಡೋಸ್ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮೊದಲ ಡೋಸ್ ಲಸಿಕೆ ಪೂರ್ಣ
ಬೆಂಗಳೂರು(ಜ.23): ರಾಜ್ಯದಲ್ಲಿ ವಯಸ್ಕರ ಕೊರೋನಾ ಲಸಿಕೆ(Covid vaccine) ಮೊದಲ ಡೋಸ್ ವಿತರಣೆಯಲ್ಲಿ ಶೇ.100ರಷ್ಟುಗುರಿ ಸಾಧನೆಯಾಗಿದೆ. ಈ ಮೂಲಕ 18 ವರ್ಷ ಮೇಲ್ಪಟ್ಟಪ್ರತಿಯೊಬ್ಬರೂ ಮೊದಲ ಡೋಸ್ (Fist Dose) ಪಡೆದುಕೊಂಡಂತಾಗಿದೆ.
ರಾಜ್ಯದಲ್ಲಿ(Karnataka) 18 ವರ್ಷ ಮೇಲ್ಪಟ್ಟ4,89,16,000 ಮಂದಿಯನ್ನು ಲಸಿಕೆಗೆ ಅರ್ಹ ಎಂದು ಗುರುತಿಸಲಾಗಿತ್ತು. ಶನಿವಾರದ ಅಂತ್ಯಕ್ಕೆ 4,89,27,347 ಮಂದಿ (ಶೇ.100.02ರಷ್ಟು) ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. 85.3ರಷ್ಟುಮಂದಿ ಎರಡನೇ ಡೋಸ್ ಪೂರ್ಣಗೊಳಿಸಿದ್ದಾರೆ. ಉಳಿದಂತೆ ಮಕ್ಕಳ ಲಸಿಕೆ (15-17 ವರ್ಷದ) ಶೇ.68ರಷ್ಟುಗುರಿಸಾಧನೆಯಾಗಿದೆ. 4.8 ಲಕ್ಷ ಮಂದಿ ಮುನ್ನೆಚ್ಚರಿಕಾ (ಮೂರನೇ) ಡೋಸ್(Booster Dose) ಪಡೆದುಕೊಂಡಿದ್ದಾರೆ.
Corona Vaccine: ಲಸಿಕೆ ಪಡೆಯದಿದ್ರೂ ಬಂತು ಮೆಸೇಜ್, ಅಡ್ಡದಾರಿ ಹಿಡಿದ್ರಾ ಅಧಿಕಾರಿಗಳು.?
ಶುಕ್ರವಾರದ ಅಂತ್ಯಕ್ಕೆ 30 ಸಾವಿರ ವಯಸ್ಕರ ಮೊದಲ ಡೋಸ್ ಬಾಕಿ ಇತ್ತು. ಶನಿವಾರ 34 ಸಾವಿರದಷ್ಟುವಯಸ್ಕರು ಮೊದಲ ಡೋಸ್ ಪಡೆದಿದ್ದಾರೆ. ಸದ್ಯ ರಾಜ್ಯದ 17 ಜಿಲ್ಲೆಗಳಲ್ಲಿ ವಯಸ್ಕರ ಮೊದಲ ಡೋಸ್ ಶೇ.100ರಷ್ಟುಗುರಿಸಾಧನೆಯಾಗಿದ್ದು, ಬೆಂಗಳೂರು ನಗರ ಜಿಲ್ಲೆಯಲ್ಲಿ ಮೊದಲ ಮತ್ತು ಎರಡನೇ ಡೋಸ್ ಕೂಡ ಪೂರ್ಣಗೊಂಡಿದೆ. ಈವರೆಗೂ ಮೊದಲ ಡೋಸ್, ಎರಡನೇ ಡೋಸ್, ಮಕ್ಕಳ ಲಸಿಕೆ ಹಾಗೂ ಮೂರನೇ ಡೋಸ್ ಸೇರಿ 9.32 ಕೋಟಿ ಡೋಸ್ ಲಸಿಕೆಯನ್ನು ವಿತರಿಸಲಾಗಿದೆ. ಈ ಪೈಕಿ 8 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆಯಾಗಿದೆ.
Shivamogga: ಮದ್ದಿಲ್ಲದ KFD ತಡೆಗೆ ಕೋವಿಡ್ ಲಸಿಕೆ ಅಡ್ಡಿ..!
ಕೊನೆಯ ಶೇ.10ಕ್ಕೆ 3 ತಿಂಗಳು:
ರಾಜ್ಯದಲ್ಲಿ ನವೆಂಬರ್‌ನಲ್ಲಿಯೇ ಶೇ.90ರಷ್ಟುವಯಸ್ಕರಿಗೆ ಮೊದಲ ಡೋಸ್ ನೀಡಲಾಗಿತ್ತು. ಆದರೆ, ಕೊನೆಯ ಶೇ.10ರಷ್ಟುಮಂದಿಗೆ ಲಸಿಕೆ ನೀಡುವುದಕ್ಕೆ ಎರಡೂವರೆಯಿಂದ ಮೂರು ತಿಂಗಳಾಗಿದೆ. ಕಳೆದ ಎರಡು ತಿಂಗಳಿಂದ ಮನೆ ಮನೆ ಲಸಿಕೆ ಅಭಿಯಾನವನ್ನು ನಡೆಸುವ ಮೂಲಕ ಲಸಿಕೆ ಬಗ್ಗೆ ತಪ್ಪು ಕಲ್ಪನೆ ಹೊಂದಿದ್ದವರು, ಕಾರಣಗಳನ್ನು ನೀಡಿ ನಿರಾಕರಿಸಿದವರು ಸಾಕಷ್ಟುಮಂದಿ ಇದ್ದು, ಅವರೆಲ್ಲರಿಗೂ ಮನ ಒಲಿಸಿ ಲಸಿಕೆ ನೀಡಲಾಯಿತು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವೇಗ ನೀಡಿದ ಲಸಿಕೆ ಮೇಳ:
ರಾಜ್ಯ ಸರ್ಕಾರ ಲಸಿಕೆ ಅಭಿಯಾನಕ್ಕೆ(Vaccination Drive) ವೇಗ ನೀಡಲು ಆಗಸ್ಟ್ ನಂತರ ಪ್ರತಿ ಬುಧವಾರ ಲಸಿಕೆ ಮೇಳವನ್ನು ಹಮ್ಮಿಕೊಳ್ಳುತ್ತಾ ಬಂದಿತ್ತು. ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಲಸಿಕೆ ಮೆಗಾ ಮೇಳದಲ್ಲಿ ಒಂದೇ ದಿನ ಬರೋಬ್ಬರಿ 32 ಲಕ್ಷ ಮಂದಿ ಲಸಿಕೆ ಪಡೆದಿದ್ದರು.
ದೇಶ, ರಾಜ್ಯದಲ್ಲಿ ಕೋವಿಡ್ ಇಳಿಕೆ
ಭಾರತ
3.37 ಲಕ್ಷ ಕೇಸ್
ಮೊನ್ನೆಗಿಂತ 10 ಸಾವಿರ ಕಮ್ಮಿ
ಕರ್ನಾಟಕ
42470 ಕೇಸ್
ಮೊನ್ನೆಗಿಂತ 6 ಸಾವಿರ ಕಮ್ಮಿ
ಬೆಂಗಳೂರು
17266 ಕೇಸ್
ಮೊನ್ನೆಗಿಂತ 12 ಸಾವಿರ ಕಮ್ಮಿ
ಒಮಿಕ್ರೋನ್ ವಿರುದ್ಧ ಬೂಸ್ಟರ್ ಡೋಸ್ ಪರಿಣಾಮಕಾರಿ: ಅಧ್ಯಯನ
3ನೇ ಡೋಸ್ ಕೋವಿಡ್-19 ಲಸಿಕೆ ಇಡೀ ವಿಶ್ವವನ್ನು ಬಾಧಿಸುತ್ತಿರುವ ಒಮಿಕ್ರೋನ್ ರೂಪಾಂತರಿ ವೈರಸ್ ವಿರುದ್ಧ ಪರಿಣಾಮಕಾರಿ ಎಂದು ಸಮೀಕ್ಷೆಯೊಂದು ಹೇಳಿದೆ. ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನವು, ಬೂಸ್ಟರ್ ಡೋಸ್ ದೇಹದಲ್ಲಿ ಪ್ರತಿಕಾಯ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಒಮಿಕ್ರೋನ್ ರೂಪಾಂತರಿ ನಿಗ್ರಹ ಸಾಧ್ಯ ಎಂದು ತಿಳಿಸಿದೆ.
ಕೇವಲ ಎರಡು ಡೋಸ್ ಆಸ್ಟ್ರಾಜೆನಿಕಾ ಅಥವಾ ಫೈಝರ್ ಲಸಿಕೆ ಪಡೆದವರಲ್ಲಿ ಒಮಿಕ್ರೋನ್ ಸೋಂಕಿನ ವಿರುದ್ಧ ಹೋರಾಡುವಷ್ಟುಪ್ರತಿಕಾಯಗಳು ಉತ್ಪತ್ತಿಯಾಗಿರಲಿಲ್ಲ. ಅಲ್ಲದೆ 2ನೇ ಡೋಸ್ ಪಡೆದ ಮೊದಲ 3 ತಿಂಗಳಲ್ಲೇ ಪ್ರತಿಕಾಯ ಪ್ರಮಾಣ ಗಣನೀಯವಾಗಿ ತಗ್ಗಿತ್ತು. ಆದರೆ ಬೂಸ್ಟರ್ ಡೋಸ್ ಪಡೆದ ನಂತರದಲ್ಲಿ ಪ್ರತಿಕಾಯ ಶಕ್ತಿ ಗಣನೀಯವಾಗಿ ಹೆಚ್ಚಿದೆ. ಇಂಥವರು ಒಮಿಕ್ರೋನ್ ವೈರಸ್ಸನ್ನು ನಿಗ್ರಹಿಸುವ ಶಕ್ತಿ ಹೊಂದಿದ್ದಾರೆ ಎಂಬುದು ಸಂಶೋಧನೆಯಲ್ಲಿ ದೃಢಪಟ್ಟಿದೆ ಎಂದು ತಿಳಿಸಿದೆ.
