Asianet Suvarna News Asianet Suvarna News

Shivamogga: ಮದ್ದಿಲ್ಲದ KFD ತಡೆಗೆ ಕೋವಿಡ್‌ ಲಸಿಕೆ ಅಡ್ಡಿ..!

*  ಈ ವರ್ಷ ಸಂಗ್ರಹಿಸಿದ್ದ ಉಣ್ಣೆಯಲ್ಲಿ ಕೆಎಫ್‌ಡಿ ವೈರಾಣು ಪತ್ತೆ
*  2019ರಲ್ಲಿ ಮಂಗನಕಾಯಿಲೆಯಿಂದ ತತ್ತರಿಸಿದ್ದ ಅರಳಗೋಡು
*  ಮಂಗನ ಕಾಯಿಲೆ ನಿಯಂತ್ರಣ ಹೋರಾಟಕ್ಕೆ ಹಿನ್ನೆಡೆ
 

People Hesitate to Get KFD Due to Covid Vaccine in Shivamogga grg
Author
Bengaluru, First Published Jan 21, 2022, 10:35 AM IST

ಗೋಪಾಲ್‌ ಯಡಗೆರೆ

ಶಿವಮೊಗ್ಗ(ಜ.21):  ಮಂಗನ ಕಾಯಿಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನೀಡುವ ಲಸಿಕಾಕರಣದ ಮೇಲೂ ಕೊರೋನಾ(Coronavirus) ಕರಿಛಾಯೆ ಬೀರಿದೆ. ಮಲೆನಾಡು ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳನ್ನು ಬೇಸಿಗೆಯಲ್ಲಿ ಕಾಡುವ ಕೆಎಫ್‌ಡಿ(KFD)  ವೈರಾಣುವಿನ ವಿರುದ್ಧದ ಹೋರಾಟಕ್ಕೆ ಕೊರೋನಾ ವ್ಯಾಕ್ಸಿನ್‌(Corona Vaccine) ಅಡ್ಡಿಯಾಗಿದೆ. ಕೋವಿಡ್‌ ವ್ಯಾಕ್ಸಿನ್‌ ಪಡೆದವರು ಕೆಎಫ್‌ಡಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ಆರೋಗ್ಯ ಇಲಾಖೆಗೆ(Department of Health) ತಲೆನೋವು ತಂದಿದೆ.

ಸಾಮಾನ್ಯವಾಗಿ ಡಿಸೆಂಬರ್‌ ತಿಂಗಳಿಂದ ಮೇ ತಿಂಗಳವರೆಗೆ ಮಲೆನಾಡನ್ನು ಇನ್ನಿಲ್ಲದಂತೆ ಕಾಡುವ, ಕೆಲ ವರ್ಷ ಮರಣ ಮೃದಂಗವನ್ನೇ ಬಾರಿಸುವ ‘ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌’(Casanur Forest Disease) ಅಥವಾ ಸಂಕ್ಷಿಪ್ತವಾಗಿ ‘ಕೆಎಫ್‌ಡಿ’ ಎಂದೇ ಕರೆಯಲ್ಪಡುವ ಈ ಕಾಯಿಲೆಗೆ ಇದುವರೆಗೆ ಮದ್ದು ಕಂಡುಹಿಡಿಯಲಾಗಿಲ್ಲ. ಆದರೆ ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ವ್ಯಾಕ್ಸಿನೇಶನ್‌(Vaccination) ನೀಡಲಾಗುತ್ತದೆ.

ಮತ್ತೆ ಶುರುವಾಯ್ತು ಮಂಗನ ಕಾಯಿಲೆ ಆತಂಕ..!

ವ್ಯಾಕ್ಸಿನೇಶನ್‌ ಅನ್ನು ಮೂರು ತಿಂಗಳ ಮುಂಚೆಯೇ ತೆಗೆದುಕೊಂಡರೆ ಮಾತ್ರ ಪರಿಣಾಮಕಾರಿ. ಹೀಗಾಗಿ ಪ್ರತಿವರ್ಷ ಸೆಪ್ಟೆಂಬರ್‌ ತಿಂಗಳಿನಿಂದಲೇ ಲಸಿಕಾ ಅಭಿಯಾನ(Vaccine Drive) ಆರಂಭಿಸುತ್ತಿದ್ದ ಆರೋಗ್ಯ ಇಲಾಖೆ ಡಿಸೆಂಬರ್‌ ಅಂತ್ಯದೊಳಗೆ ನಿಗದಿತ ಗುರಿ ತಲುಪುತ್ತಿತ್ತು. ಕೋವಿಡ್‌ ಲಸಿಕೆ ಪಡೆದವರು ಸರಿಸುಮಾರು 3 ತಿಂಗಳ ಒಳಗಾಗಿ ಇನ್ನೊಂದು ಡೋಸ್‌ ಪಡೆಯಬೇಕು. ಕೆಎಫ್‌ಡಿ ಲಸಿಕೆಯನ್ನು ಕೂಡ ಇದೇ ಮಾದರಿಯಲ್ಲಿ ಪಡೆಯಬೇಕು. ಎರಡೂ ಲಸಿಕೆಗಳು ಬಹುತೇಕ ಒಂದೇ ಅವಧಿಯಲ್ಲಿ ಪಡೆಯುವಂತಾಗಿದೆ. ಕೆಎಫ್‌ಡಿ ಲಸಿಕೆ ಪಡೆದಾಗಲೂ ಸ್ವಲ್ಪ ಸಮಸ್ಯೆ ಕಾಣುತ್ತದೆ. ಕೋವಿಡ್‌ ಲಸಿಕೆ ತೆಗೆದುಕೊಂಡ ಬಳಿಕ ಜ್ವರ, ಸುಸ್ತು ಇತ್ಯಾದಿಗಳನ್ನು ಕಂಡಿದ್ದ ಜನರು, ಇದರ ಮೇಲೆ ಕೆಎಫ್‌ಡಿ ಲಸಿಕೆ ಪಡೆದರೆ ಇನ್ನೇನು ಆಗುತ್ತದೆಯೋ ಎಂಬ ಆತಂಕ ಪಡುತ್ತಿದ್ದಾರೆ. ಕೆಎಫ್‌ಡಿ ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ.

ಕೋವಿಡ್‌ ಲಸಿಕೆ ಪಡೆದ 14 ದಿನದ ನಂತರ ಕೆಎಫ್‌ಡಿ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ತಜ್ಞರು ತಿಳಿಸಿದ್ದರೂ ಜನರು ಸ್ಪಂದಿಸುತ್ತಿಲ್ಲ. ಈ ಬಾರಿ ಜಿಲ್ಲೆಯ 1.95 ಲಕ್ಷ ಜನರಲ್ಲಿ ಕೇವಲ 95 ಸಾವಿರ ಜನರಿಗಷ್ಟೇ ಕೆಎಫ್‌ಡಿ ಲಸಿಕೆ ನೀಡಲಾಗಿದೆ. ಅಂದರೆ ಶೇ.47ರಷ್ಟು ಮಾತ್ರ ಸಾಧನೆ ಆಗಿದೆ.

ಅರಳಗೋಡಲ್ಲಿ ಮತ್ತೆ ಕೆಎಫ್‌ಡಿ ವೈರಾಣು ಪತ್ತೆ

ಎರಡು ವರ್ಷಗಳ ಹಿಂದೆ ಮಂಗನ ಕಾಯಿಲೆಯಿಂದ 20 ಮಂದಿ ಮೃತಪಟ್ಟಿದ್ದ ಸಾಗರ ತಾಲೂಕಿನ ಅರಳಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಈ ವರ್ಷ ಮುಂಜಾಗ್ರತಾ ಕ್ರಮವಾಗಿ ಸಂಗ್ರಹಿಸಿದ್ದ ಉಣ್ಣೆಯಲ್ಲಿ ಕೆಎಫ್‌ಡಿ ವೈರಾಣು ಕಂಡುಬಂದಿದೆ. ಇದರಿಂದಾಗಿ ಮತ್ತೆ ಮಂಗನ ಕಾಯಿಲೆಯ ಆತಂಕ ಮನೆ ಮಾಡಿದೆ. ಅರಳಗೋಡು ಗ್ರಾಪಂ ವ್ಯಾಪ್ತಿಯ ಸುಮಾರು 5 ಕಿ. ಮೀ. ವ್ಯಾಪ್ತಿಯ ಗ್ರಾಮಗಳಲ್ಲಿ ಉಣ್ಣೆಗಳ ಮಾದರಿಯನ್ನು ಸಂಗ್ರಹಿಸಿ ಶಿವಮೊಗ್ಗ ಪ್ರಯೋಗ ಶಾಲೆಗೆ ಕಳುಹಿಸಲಾಗಿತ್ತು. ಇದರ ಫಲಿತಾಂಶ ಈಗ ಬಂದಿದೆ.

ಉತ್ತರ ಕನ್ನಡಕ್ಕೆ ಮತ್ತೆ ವಕ್ಕರಿಸಿ ಮಂಗನ ಕಾಯಿಲೆ.. ಪರಿಹಾರ ಯಾವ ಕಾಲಕ್ಕೋ!

2019ರಲ್ಲಿ ಅರಳಗೋಡು ಗ್ರಾಪಂ ವ್ತಾಪ್ತಿಯಲ್ಲಿ ಕೆಎಫ್‌ಡಿ ಸೋಂಕು ಸ್ಫೋಟಗೊಂಡಿದ್ದು, ನೂರಾರು ಜನರು ಇದರಿಂದ ಬಳಲಿದ್ದರು. ಸುಮಾರು 20 ಜನರಿಗೂ ಅಧಿಕ ಮಂದಿ ಮೃತಪಟ್ಟಿದ್ದರು. ಕೊನೆಗೆ ಯಾವ ಮಟ್ಟದ ಭೀತಿ ಏರ್ಪಟ್ಟಿತ್ತು ಎಂದರೆ ಸ್ವತಃ ಜಿಲ್ಲಾಧಿಕಾರಿಗಳು ಇಲ್ಲಿ ಗ್ರಾಮ ವಾಸ್ತವ್ಯ ಮಾಡಿ ಜನರಲ್ಲಿನ ಆತಂಕ ದೂರ ಮಾಡುವ ಯತ್ನ ನಡೆಸಿದ್ದರು. ಹೊರಗಿನಿಂದ ಯಾರೊಬ್ಬರೂ ಗ್ರಾಮಕ್ಕೆ ಬಾರದ ಸ್ಥಿತಿ ನಿರ್ಮಾಣವಾಗಿತ್ತು. ನಿತ್ಯ ಒಬ್ಬಿಬ್ಬರು ಆಸ್ಪತ್ರೆಗೆ ದಾಖಲಾಗತೊಡಗಿದ್ದರು. ಜಿಲ್ಲಾಡಳಿತ ಉಚಿತವಾಗಿ ಅರಳಗೋಡು ಗ್ರಾಮದಿಂದ ಮಣಿಪಾಲ ಆಸ್ಪತ್ರೆಗೆ(Manipal Hospital) ನಿತ್ಯ ಆಂಬ್ಯುಲೆನ್ಸ್‌(Ambulance) ವ್ಯವಸ್ಥೆ ಮಾಡಿತ್ತಲ್ಲದೆ, ಮಣಿಪಾಲದಲ್ಲಿನ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿತ್ತು.

ಸದನದಲ್ಲೂ ಈ ಕುರಿತು ಚರ್ಚೆ ನಡೆದಿತ್ತು. ಆ ಬಳಿಕ ಇಲ್ಲಿ ವ್ಯಾಪಕ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದರಿಂದ ಸೋಕು ಕಡಿಮೆಯಾಗಿತ್ತು. ಆದರೆ ಈ ವರ್ಷ ಪುನಃ ಸೋಂಕಿನ ವೈರಾಣು ಕಾಣಿಸಿಕೊಂಡಿರುವುದರಿಂದ ಸಹಜವಾಗಿಯೇ ಜನರಲ್ಲಿ ಆತಂಕ ಮೂಡಿದೆ.
 

Follow Us:
Download App:
  • android
  • ios