ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ, ಜಾತಿ ನಿಂದನೆ ಹಾಗೂ ಆಸಿಡ್ ದಾಳಿ ಬೆದರಿಕೆ ಒಡ್ಡಿದ ಆರೋಪದ ಮೇಲೆ ರಾಮನಗರದ ಚಿತ್ರಮಂದಿರ ಮಾಲೀಕ ಎನ್. ಮಂಜುನಾಥ್‌ಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಆರೋಪಿ ವಿರುದ್ಧ ಮೇಲ್ನೋಟಕ್ಕೆ ಬಲವಾದ ಸಾಕ್ಷ್ಯಾಗಳಿವೆ ಜಾಮೀನು ನೀಡಲು ಸಾಧ್ಯವಿಲ್ಲವೆಂದ ಕೋರ್ಟ್.
ಬೆಂಗಳೂರು (ಮೇ.29): ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಜಾತಿ ನಿಂದನೆ ಮಾಡಿದ ಹಾಗೂ ಆಸಿಡ್ ದಾಳಿ ಮೂಲಕ ಕೊಲೆ ಬೆದರಿಕೆಯೊಡ್ಡಿದ 52 ವರ್ಷದ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್(Karnataka High court) ನಿರಾಕರಿಸಿದೆ.
ರಾಮನಗರ(Ramanagar)ದ ಶಂಕರ ಚಿತ್ರಮಂದಿರ()ದ ಮಾಲೀಕ(Shankara Theatre Owner) 52 ವರ್ಷದ ಎನ್. ಮಂಜುನಾಥ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿ ನ್ಯಾಯಮೂರ್ತಿ ಆರ್. ನಟರಾಜ್ ಅವರ ಪೀಠ ಆದೇಶಿಸಿದೆ.
ಸಂತ್ರಸ್ಥ ಬಾಲಕಿಯ ಪ್ರಾಮಾಣೀಕೃತ ಹೇಳಿಕೆ ಮತ್ತು ಪ್ರಕರಣದ ದಾಖಲೆಗಳನ್ನು ಗಮನಿಸಿದರೆ ಆರೋಪಿಯ ವಿರುದ್ಧ ಮೇಲ್ನೋಟಕ್ಕೆ ಬಲವಾದ ಸಾಕ್ಷ್ಯಾಧಾರಗಳು ಕಂಡುಬರುತ್ತಿವೆ. ದೂರು ನೀಡಿದ ಹಿನ್ನೆಲೆಯಲ್ಲಿ ಮನೆಗೆ ಕೆಲವು ಹುಡುಗರನ್ನು ಕಳಿಸಿ ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳಲ್ಲಿ ಮೇಲ್ನೋಟಕ್ಕೆ ಅಪರಾಧ ದೃಢಪಟ್ಟರೆ, ನಿರೀಕ್ಷಣಾ ಜಾಮೀನು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ. ಆದರೆ, ಆರೋಪಿ ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು. ಈ ಅರ್ಜಿಯನ್ನು ನ್ಯಾಯಾಲಯ ಕಾನೂನು ಪ್ರಕಾರ ಪರಿಗಣಿಸಬೇಕು ಎಂದು ಸೂಚಿಸಿದೆ.
ಪ್ರಕರಣದ ಹಿನ್ನೆಲೆ
ರಾಮನಗರದ ಶಂಕರ ಚಿತ್ರಮಂದಿರದ ಮಾಲೀಕ ಹಾಗೂ ಕೃಷಿಕನಾದ ಮಂಜುನಾಥ, 9ನೇ ತರಗತಿಯಲ್ಲಿ ಓದುತ್ತಿದ್ದ ಅಪ್ರಾಪ್ತೆ ಬಾಲಕಿ ಶಾಲೆಯ ಬಳಿ ನಿಂತು ಆಕೆಗೆ ಅಸಭ್ಯವಾಗಿ ಸ್ಪರ್ಶಿಸುವುದು ಮತ್ತು ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರಿಂದ ಕೋಪಗೊಂಡ ಆರೋಪಿ, ಕಳೆದ ಮಾ.14ರಂದು ಬಾಲಕಿಯ ಮನೆ ಬಳಿ ಹೋಗಿ ಆಕೆಯ ಜಾತಿಯ ಹೆಸರಿನಲ್ಲಿ ನಿಂದಿಸಿದ್ದ. ಹಾಗೆಯೇ ತನ್ನೊಂದಿಗೆ 4 ಜನ ಹುಡುಗರನ್ನು ಕರೆದೊಯ್ದು ಬಾಲಕಿ ಹಾಗೂ ಆಕೆಯ ಅಜ್ಜಿಗೆ ಕೊಲೆ ಮಾಡುವುದಾಗಿ ಮತ್ತು ಮುಖಕ್ಕೆ ಆಸಿಡ್ ಎರಚುವುದಾಗಿ ಬೆದರಿಕೆ ಹಾಕಿದ್ದ. ಬಾಲಕಿಗೆ ಫೋನ್ ಮಾಡಿ ತನ್ನೊಂದಿಗೆ ಲೈಂಗಿಕ ಸಂಪರ್ಕ ಹೊಂದುವಂತೆ ಒತ್ತಾಯಿಸಿ, ಒಪ್ಪದಿದ್ದರೆ ಚಾಕುವಿನಿಂದ ಇರಿದು ಕೊಲೆ ಮಾಡುವುದಾಗಿ ಮಾನಸಿಕ ಹಿಂಸೆ ನೀಡಿದ್ದನು.
ಈ ಕುರಿತು ಬಾಲಕಿಯ ಅಜ್ಜಿ ನೀಡಿದ ದೂರಿನನ್ವಯ ರಾಮನಗರ ಟೌನ್ ಪೊಲೀಸರು ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ. ಪೋಕ್ಸೋ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಇದರಿಂದ ಬಂಧನ ಭೀತಿಯಲ್ಲಿದ್ದ ಆರೋಪಿ ನಿರೀಕ್ಷಣಾ ಜಾಮೀನು ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.


