ಸಿದ್ದರಾಮಯ್ಯನವರ ರಾಜೀನಾಮೆಯ ಬಳಿಕ, ಮುಂದಿನ ಮುಖ್ಯಮಂತ್ರಿ ಮತ್ತು ಸಂಪುಟ ರಚನೆಯ ಕುರಿತು ಚರ್ಚಿಸಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ಹೈಕಮಾಂಡ್ ಜೊತೆಗಿನ ಸಭೆಯ ನಂತರ ಹೊಸ ಸರ್ಕಾರದ ಪ್ರಮಾಣ ವಚನದ ದಿನಾಂಕ ನಿರ್ಧಾರವಾಗಲಿದೆ.
ಬೆಂಗಳೂರು (ಮೇ.29): ಸಿದ್ದರಾಮಯ್ಯ(Siddaramaiah) ಅವರ ರಾಜೀನಾಮೆಯ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ(Karnataka congress government) ಎರಡನೇ ಹಂತಕ್ಕೆ ಮಗ್ಗಲು ಬದಲಿಸಿದ್ದು, ಮುಂದಿನ ಸರ್ಕಾರದ ರೂಪರೇಷೆ ಹಾಗೂ ಸಂಪುಟ ಸರ್ಕಸ್ ಆರಂಭಿಸುವ ಸಲುವಾಗಿ ಹೈಕಮಾಂಡ್(Congress High command) ಜತೆ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಯಂತ್ರಿ ಡಿ.ಕೆ. ಶಿವಕುಮಾರ್(DK Shivakumar) ಪ್ರತ್ಯೇಕವಾಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ದೆಹಲಿಯಲ್ಲಿ ಉಭಯ ನಾಯಕರು ವರಿಷ್ಠರನ್ನು ಭೇಟಿ ಮಾಡಲಿದ್ದು, ಈ ಭೇಟಿಯ ವೇಳೆಯೇ ಶಾಸಕಾಂಗ ಪಕ್ಷದ ಸಭೆ ಯಾವಾಗ? ಹೊಸ ಮುಖ್ಯಮಂತ್ರಿ ಪ್ರಮಾಣ ವಚನದ ದಿನ ಯಾವುದು? ಪ್ರಮಾಣ ವಚನದ ವೇಳೆಯೇ ಹೊಸ ಸಿಎಂ ಸೇರಿ ಒಟ್ಟು 9 ಮಂದಿ ಸಂಪುಟ ಸೇರ್ಪಡೆಯಾಗಲಿದ್ದಾರೆಯೇ ಅಥವಾ ಒಂದೇ ಬಾರಿಗೆ ಪರಿಪೂರ್ಣ ಸಂಪುಟ ರಚನೆಯಾಗಲಿದೆಯೇ ಎಂಬಿತ್ಯಾದಿ ವಿಚಾರಗಳ ಬಗ್ಗೆ ಸ್ಪಷ್ಟತೆ ಮೂಡಲಿದೆ.
ಮುಂದಿನ ಸಿಎಂ ಯಾರು?
ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ರಾಜೀನಾಮೆಯನ್ನು ರಾಜ್ಯಪಾಲರು ಇನ್ನೂ ಅಂಗೀಕರಿಸಬೇಕಿದೆ. ಗುರುವಾರ ತಡರಾತ್ರಿಯೇ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಇಂದೋರ್ ಪ್ರವಾಸದಿಂದ ನಗರಕ್ಕೆ ಹಿಂತಿರುಗಿದ್ದಾರೆ.
ಬಹುತೇಕ ಶುಕ್ರವಾರ ಅವರು ರಾಜೀನಾಮೆ ಅಂಗೀಕರಿಸುವ ಪ್ರಕ್ರಿಯೆ ಆರಂಭಿಸಲಿದ್ದಾರೆ. ಈ ಅಂಗೀಕಾರದ ವೇಳೆ ಅವರು ಮುಖ್ಯಮಂತ್ರಿಯವರನ್ನು ಕರೆಸಿಕೊಂಡು ಮಾತನಾಡ ಬಯಸಿದರೆ ಸಿದ್ದರಾಮಯ್ಯ ಅವರು ದೆಹಲಿಯಿಂದ ಆಗಮಿಸುವವರೆಗೂ ಈ ಪ್ರಕ್ರಿಯೆ ವಿಳಂಬವಾಗಬಹುದು. ಲಭ್ಯ ಮಾಹಿತಿ ಪ್ರಕಾರ, ಸಿದ್ದರಾಮಯ್ಯ ಶುಕ್ರವಾರವೇ ನಗರಕ್ಕೆ ಹಿಂತಿರುಗಲಿದ್ದು, ಅನಂತರ ರಾಜ್ಯಪಾಲರು ಬಯಸಿದರೆ ಮತ್ತೊಮ್ಮೆ ಅವರನ್ನು ಭೇಟಿಯಾಗಲಿದ್ದಾರೆ.
ಇದಾದ ನಂತರ ರಾಜ್ಯಪಾಲರು ರಾಜೀನಾಮೆ ಅಂಗೀಕರಿಸಲಿದ್ದು, ಅನಂತರ ಈ ಬಗ್ಗೆ ಅಧಿಕೃತ ಅಧಿಸೂಚನೆ ಹೊರ ಬೀಳಬೇಕಿದೆ. ಬಹುತೇಕ ಈ ಪ್ರಕ್ರಿಯೆ ಶುಕ್ರವಾರ ಸಂಜೆ ಅಥವಾ ಶನಿವಾರದ ನಡೆಯಬಹುದು. ಹೀಗಾದಲ್ಲಿ ಶನಿವಾರ ರಾತ್ರಿ ಅಥವಾ ಭಾನುವಾರದಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುವ ಸಾಧ್ಯತೆಯಿದೆ.
ಹೀಗಾಗಿ ರಾಜೀನಾಮೆ ಅಂಗೀಕಾರ ಪ್ರಕ್ರಿಯೆ ಯಾವ ರೀತಿ ನಡೆಯುವುದು ಎಂಬುದರ ಆಧಾರದ ಮೇಲೆ ಹಾಗೂ ದೆಹಲಿಯಲ್ಲಿ ಹೈಕಮಾಂಡ್‌ನೊಂದಿಗೆ ಉಭಯ ನಾಯಕರ ಚರ್ಚೆಯ ನಂತರ ಹೊಸ ಮುಖ್ಯಮಂತ್ರಿಯವರ ಹಾಗೂ ಅವರ ಹೊಸ ಸಂಪುಟದ ಪ್ರಮಾಣ ವಚನದ ದಿನ ನಿರ್ಧಾರವಾಗಲಿದೆ.
ಮೂಲಗಳ ಪ್ರಕಾರ, ಕಾಂಗ್ರೆಸ್ ಶಾಸಕಾಂಗ ಪಕ್ಷ ಶನಿವಾರ ನಡೆದು, ಹೈಕಮಾಂಡ್‌ನ ಒಪ್ಪಿಗೆಯೂ ದೊರೆತರೇ ಭಾನುವಾರವೇ ಪ್ರಮಾಣ ವಚನ ಸಾಧ್ಯತೆಯಿದೆ. ಇದಾಗದೇ ಹೋದರೆ ಸೋಮವಾರ ಅಥವಾ ಬುಧವಾರ ಸಂಪುಟ ಪ್ರಮಾಣ ವಚನ ನಡೆಯಬಹುದು. ಹೊಸ ಮುಖ್ಯಮಂತ್ರಿ ಹಾಗೂ ಎಂಟು ಜನ ಸಂಪುಟ ಸೇರುವುದಿದ್ದರೇ ಈ ದಿನಗಳಲ್ಲಿ ಪ್ರಮಾಣ ವಚನ ಸ್ವೀಕಾರ ನಡೆಯಬಹುದು.
ಒಂದು ವೇಳೆ ಪರಿಪೂರ್ಣ ಸಂಪುಟ ಪ್ರಮಾಣ ವಚನ ಅಂದರೆ ಎಲ್ಲ 34 ಮಂದಿಯ ಸಂಪುಟ ಪ್ರಮಾಣ ವಚನ ನಡೆಸುವ ತೀರ್ಮಾನವಾದರೆ ಆಗ ಶುಕ್ರವಾರಕ್ಕೆ ಈ ಪ್ರಕ್ರಿಯೆ ಮುಂದೂಡಿಕೆ ಕಾಣಬಹುದು ಎನ್ನಲಾಗುತ್ತಿದೆ.
ಹೊಸ ಸಂಪುಟದಲ್ಲಿ ಸಿದ್ದು ಆಪ್ತರು?
ತಮಗೆ ಎರಡು ಅವಧಿಗೆ ಮುಖ್ಯಮಂತ್ರಿಯಾಗಲು ಬೆನ್ನ ಹಿಂದೆ ಗಟ್ಟಿಯಾಗಿ ನಿಂತ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರಿಗೆ ಧನ್ಯವಾದ ಅರ್ಪಿಸುವ ನೆಪ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತರ ಹೆಸರನ್ನು ಹೊಸ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಕಾಂಗ್ರೆಸ್ ಹೈಕಮಾಂಡ್‌ಗೆ ಶಿಫಾರಸು ಮಾಡುವ ಸಾಧ್ಯತೆಯಿದೆ.
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಆಪ್ತ ಸಚಿವರಾದ ಕೆ.ಜೆ. ಜಾರ್ಜ್, ಬೈರತಿ ಸುರೇಶ್, ಕಾನೂನು ಸಲಹೆಗಾರ ಪೊನ್ನಣ್ಣ ಹಾಗೂ ಪುತ್ರ ಮತ್ತು ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರೊಂದಿಗೆ ಗುರುವಾರ ದೆಹಲಿಗೆ ತೆರಳಿರುವ ಅವರು ಶುಕ್ರವಾರ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ.
ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಶುಕ್ರವಾರ ಉಪಹಾರಕ್ಕೆ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರು ಹೈಕಮಾಂಡ್ ಅಣತಿಯಂತೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ವಚನ ನೀಡಿದಂತೆ ನಡೆದುಕೊಂಡಿರುವುದನ್ನು ತಿಳಿಸಲಿದ್ದಾರೆ. ಅಲ್ಲದೆ, ತಮಗೆ ಎರಡು ಅವಧಿಗೆ ಮುಖ್ಯಮಂತ್ರಿಯಾಗಲು ಬೆನ್ನ ಹಿಂದೆ ನಿಂತ ರಾಹುಲ್ ಗಾಂಧಿ ಅವರಿಗೆ ಧನ್ಯವಾದ ಅರ್ಪಿಸಲಿದ್ದಾರೆ.
ಜತೆಗೆ, ತಮ್ಮ ಕೆಲ ಆಪ್ತ ಸಚಿವರಿಗೆ ಮುಂದಿನ ಸಚಿವ ಸಂಪುಟದಲ್ಲೂ ಅವಕಾಶ ನೀಡುವಂತೆ ರಾಹುಲ್ ಅವರಿಗೆ ಮನವಿ ಮಾಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
ಸಿದ್ದು, ಡಿಕೆಶಿ ನೀಡುವ ಸಚಿವರ ಪಟ್ಟಿ ಆಧರಿಸಿ ವರಿಷ್ಠರ ನಿರ್ಧಾರ?
ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಿದ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಹ ದೆಹಲಿಗೆ ಪ್ರಯಾಣ ಬೆಳೆಸಿದ್ದು ಶುಕ್ರವಾರ ಹೈಕಮಾಂಡ್‌ನ ಹಿರಿಯ ನಾಯಕರನ್ನು ಭೇಟಿ ಮಾಡಿ ಪ್ರಮಾಣ ವಚನ ಹಾಗೂ ಸಂಪುಟ ರಚನೆ ಕುರಿತು ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಿ.ಕೆ. ಶಿವಕುಮಾರ್ ಅವರು ತಮ್ಮ ಸಂಪುಟಕ್ಕೆ ತಾವು ಸೇರ್ಪಡೆ ಮಾಡಿಕೊಳ್ಳಬಯಸುವ ಸದಸ್ಯರ ಪಟ್ಟಿಯೊಂದಿಗೆ ದೆಹಲಿಗೆ ತೆರಳಿದ್ದು, ಇದಕ್ಕೆ ಹೈಕಮಾಂಡ್‌ನ ಅವಗಾಹನೆಗೆ ನೀಡಲಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಸಂಪುಟದಲ್ಲಿ ತಮ್ಮ ಆಪ್ತರ ಸೇರ್ಪಡೆಗೂ ಕೆಲ ಹೆಸರನ್ನು ಸೂಚಿಸಲಿದ್ದಾರೆ. ಅದೇ ರೀತಿ ಶಿವಕುಮಾರ್ ಅವರು ತಮ್ಮ ಪಟ್ಟಿಯನ್ನು ಹೈಕಮಾಂಡ್‌ಗೆ ನೀಡಲಿದ್ದಾರೆ. ಈ ಎರಡೂ ಪಟ್ಟಿಯನ್ನು ಪರಿಶೀಲಿಸಿ ಹೈಕಮಾಂಡ್ ಸಂಪುಟ ವಿಚಾರದಲ್ಲಿ ತನ್ನ ಅಂತಿಮ ತೀರ್ಮಾನ ನೀಡಲಿದೆ ಎಂದು ಮೂಲಗಳು ತಿಳಿಸಿವೆ.


