ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮತ್ತು ತಮ್ಮ ಕುಟುಂಬದ ಮೇಲೆ ನಡೆದ ರಾಜಕೀಯ ದ್ವೇಷದ ಬಗ್ಗೆ ನೋವು ತೋಡಿಕೊಂಡಿದ್ದಾರೆ. ರಾಜಕೀಯದಿಂದ ದೂರವಿದ್ದ ತಮ್ಮ ಪತ್ನಿಯ ಮೇಲೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದ್ದರಿಂದ, ಒಂದು ಹಂತದಲ್ಲಿ ರಾಜಕೀಯ ಸನ್ಯಾಸದ ಬಗ್ಗೆ ಯೋಚಿಸಿದ್ದಾಗಿ ಅವರು ಹೇಳಿದ್ದಾರೆ.
ಬೆಂಗಳೂರು (ಮೇ.29): ‘ನಾನು ಮಾತ್ರವಲ್ಲ ನನ್ನ ಕುಟುಂಬವೂ ರಾಜಕೀಯ ದ್ವೇಷಕ್ಕೆ ಬಲಿಯಾಗಿದೆ. ರಾಜಕಾರಣದಿಂದ ಬಹುದೂರ ಇದ್ದ ನನ್ನ ಪತ್ನಿಯ ವಿರುದ್ಧವೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೋವು ತೋಡಿಕೊಂಡಿದ್ದಾರೆ.
ರಾಜಕೀಯ ಸನ್ಯಾಸ ಸ್ವೀಕರಿಸಬೇಕು ಎನಿಸಿತ್ತು!
ಅಲ್ಲದೆ, ಇವೆಲ್ಲವನ್ನೂ ಅನುಭವಿಸಿದಾಗ ರಾಜಕೀಯ ಸನ್ಯಾಸ ತೆಗೆದುಕೊಂಡು ಬಿಡಬೇಕು ಎನ್ನುವಷ್ಟು ಮನಸ್ಸು ನೊಂದಿತ್ತು ಎಂದಿದ್ದಾರೆ.
ಮುಖ್ಯಮಂತ್ರಿ ಅವರ ಕಚೇರಿಯಿಂದ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ ಅವರ ವಿದಾಯ ಭಾಷಣ ಕುರಿತ ಪತ್ರಿಕಾ ಹೇಳಿಕೆಯಲ್ಲಿ, ‘ನಾನು ಮಾತ್ರವಲ್ಲ ನನ್ನ ಕುಟುಂಬ ಕೂಡಾ ರಾಜಕೀಯ ದ್ವೇಷಕ್ಕೆ ಬಲಿಯಾಗಿದೆ. ನನ್ನ ರಾಜಕೀಯ ವಿರೋಧಿಗಳು ರಾಜಕಾರಣದಿಂದ ಬಹುದೂರ ಇದ್ದು ಕುಟುಂಬದ ಪಾಲನೆ ಪೋಷಣೆಗಷ್ಟೇ ತನ್ನನ್ನು ಸೀಮಿತಗೊಳಿಸಿಕೊಂಡ ನನ್ನ ಪತ್ನಿಯ ವಿರುದ್ದವೂ ಸುಳ್ಳು ಆರೋಪಗಳನ್ನು ಮಾಡಿ ಮಾನಸಿಕ ಹಿಂಸೆ ನೀಡಿದ್ದರು’ ಎಂದು ತಿಳಿಸಲಾಗಿದೆ.
ಶತ್ರುಗಳ ದಾಳಿಗೆ ಪಲಾಯನವಾದಿಯಾಗಬೇಡ
ಒಂದು ಹಂತದಲ್ಲಿ ರಾಜಕೀಯ ಸನ್ಯಾಸ ತೆಗೆದುಕೊಳ್ಳಬೇಕು ಎನಿಸಿತು. ಆದರೆ ಶತ್ರುಗಳ ದಾಳಿಗೆ ಹೆದರಿ ಪಲಾಯನವಾದಿಯಾಗಬೇಡ, ಜನಸೇವೆಯ ಪಥದಿಂದ ಹಿಂದಡಿ ಇಡಬೇಡ ಎಂದು ನನ್ನ ಅಂತರಾತ್ಮ ಎಚ್ಚರಿಸಿತು. ಅನ್ಯಾಯದ ವಿರುದ್ಧ ನ್ಯಾಯದ ಹೋರಾಟವನ್ನು ಮುಂದುವರಿಸಿ ಕಳಂಕವನ್ನು ನಿವಾರಿಸಿಕೊಂಡು ನಿರಾಳನಾದೆ. ಇಂದಿನ ವರ್ತಮಾನ ನನ್ನನ್ನು ಎಷ್ಟು ಅರ್ಥಮಾಡಿಕೊಂಡಿದೆಯೋ ಗೊತ್ತಿಲ್ಲ. ಸಾಮಾನ್ಯವಾಗಿ ಸಾಮಾಜಿಕ ಪರಿವರ್ತನೆಯ ಹರಿಕಾರರನ್ನು ವರ್ತಮಾನ ಕ್ರೂರವಾಗಿ ನಡೆಸಿಕೊಳ್ಳುತ್ತದೆ. ಆದರೆ, ಇತಿಹಾಸ ಮಾತ್ರ ಅವರನ್ನು ನೆನಪಲ್ಲಿಟ್ಟುಕೊಂಡು ಸ್ಮರಿಸುತ್ತದೆ ಎಂದು ತಿಳಿಸಿದ್ದಾರೆ.


